ಭಾರತ್ ಬಂದ್: ಯಾವ್ಯಾವ ರಾಜ್ಯಗಳಲ್ಲಿ ಆಗಲಿದೆ ಬಂದ್?


Updated:September 9, 2018, 10:30 PM IST
ಭಾರತ್ ಬಂದ್: ಯಾವ್ಯಾವ ರಾಜ್ಯಗಳಲ್ಲಿ ಆಗಲಿದೆ ಬಂದ್?

Updated: September 9, 2018, 10:30 PM IST
- ನ್ಯೂಸ್18 ಕನ್ನಡ

ಬೆಂಗಳೂರು: ನಾಲ್ಕು ದಿನಗಳ ಅಂತರದಲ್ಲಿ ಭಾರತಕ್ಕೆ ಎರಡನೇ ಬಂದ್ ಭಾಗ್ಯ ಸಿಕ್ಕಿದೆ. ಎಸ್ಸಿ-ಎಸ್ಟಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮೇಲ್ವರ್ಗದವರು ಭಾರತ್ ಬಂದ್​ಗೆ ಕರೆ ನೀಡಿದ ಬೆನ್ನಲ್ಲೇ ಇದೀಗ ಪೆಟ್ರೋಲ್ ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ಸೋಮವಾರ ಬಂದ್​ಗೆ ಕರೆಕೊಟ್ಟಿದೆ. ಜನಜೀವನಕ್ಕೆ ಹೆಚ್ಚಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿರುವ ಕಾಂಗ್ರೆಸ್ ಪಕ್ಷವು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಬಂದ್ ಆಚರಿಸಲು ನಿರ್ಧರಿಸಿದೆ. ಕೇಂದ್ರ ಸರಕಾರದ ವಿರುದ್ಧ ಪ್ರಬಲ ಪ್ರತಿಭಟನೆಯ ಸಂದೇಶ ರವಾನಿಸುವ ಉದ್ದೇಶದಿಂದ ಈ ಬಂದ್ ಆಚರಿಸಲಾಗುತ್ತಿದೆ.

ಯಾರಾರ ಬೆಂಬಲ?

ಕಾಂಗ್ರೆಸ್ ಪಕ್ಷ ಕರೆಕೊಟ್ಟಿರುವ ಈ ಬಂದ್​ಗೆ ಬಹುತೇಕ ವಿಪಕ್ಷಗಳು ಬೆಂಬಲ ನೀಡುತ್ತಿವೆ. ಡಿಎಂಕೆ, ಆರ್​ಜೆಡಿ, ಬಿಎಸ್​ಪಿ, ಆರ್​ಎಲ್​ಡಿ, ಎಐಡಿಯುಎಫ್, ಜೆಎಂಎಂ, ಜೆವಿಎಂ, ಎಎಪಿ, ಟಿಡಿಪಿ, ಆರ್​ಎಸ್​ಪಿ, ಲೋಕ ತಾಂತ್ರಿಕ್ ಜನತಾ ದಳ, ಸ್ವಾಭಿಮಾನ್ ಪಕ್ಷ, ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ, ದೇವೇಗೌಡ ನೇತೃತ್ವದ ಜೆಡಿಎಸ್, ಎಡರಂಗ ಮತ್ತು ಎನ್​ಸಿಪಿ ಪಕ್ಷಗಳು ಬೆಂಬಲ ನೀಡಿವೆ. ಶಿವಸೇನೆ ಮತ್ತು ಎಂಎನ್​ಎಸ್ ಪಕ್ಷಗಳೂ ಕೂಡ ಕೇಂದ್ರದ ವಿರುದ್ಧ ಗುಡುಗಿ ನಿಂತಿವೆ. ಬಿಎಸ್​ಪ

ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಕೂಡ ಬಂದ್​ಗೆ ಬೆಂಬಲ ಕೊಟ್ಟಿರುವ ಹಿನ್ನೆಲೆಯಲ್ಲಿ ಇಲ್ಲಿಯೇ ಬಂದ್ ಅತಿ ಹೆಚ್ಚು ಯಶಸ್ಸು ಕಾಣುವ ನಿರೀಕ್ಷೆ ಇದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಟ್ಯಾಕ್ಸಿಗಳು, ಆಟೋ ಚಾಲಕರ ಸಂಘಟನೆಗಳು ಬಂದ್​ಗೆ ಬೆಂಬಲ ಕೊಟ್ಟಿರುವುದರಿಂದ ಬಂದ್ ತೀವ್ರತೆ ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಇರಲಿದೆ. ಕರ್ನಾಟಕ ರಕ್ಷಣಾ ವೇದಿಕೆ, ಸಿನಿಮಾ ನಿರ್ಮಾಪಕರ ಸಂಘ ಇತ್ಯಾದಿಗಳೂ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಂದ್​ಗೆ ಬೆಂಬಲ ಕೊಟ್ಟಿವೆ.

ಒಡಿಶಾದಲ್ಲಿ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ಬಂದ್ ನಡೆಸಲಾಗುತ್ತಿದೆ.
Loading...

ಗೋವಾದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜನಜೀವನಕ್ಕೆ ತೊಂದರೆ ಆಗಬಾರದೆಂದು ಅಲ್ಲಿಯ ಕಾಂಗ್ರೆಸ್ ಪಕ್ಷವೇ ಬಂದ್​ಗೆ ಕರೆ ಕೊಟ್ಟಿಲ್ಲ. ಹೀಗಾಗಿ, ಗೋವಾದಲ್ಲಿ ಬಂದ್ ಆಚರಿಸಲಾಗುವುದಿಲ್ಲ. ಪ್ರವಾಹದಿಂದ ಜರ್ಝರಿತವಾಗಿರುವ ಕೇರಳದಲ್ಲಿ ಅಲ್ಲಿಯ ಕಾಂಗ್ರೆಸ್ ಪಕ್ಷವು ಅರೆಮನಸ್ಸಿನಿಂದ ಬಂದ್​ಗೆ ಕರೆಕೊಟ್ಟಿದೆ. ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ಪಕ್ಷವು ಬೆಂಬಲ ನೀಡಲು ನಿರಾಕರಿಸಿದೆ. ಇನ್ನು, ಹರಿಯಾಣದಲ್ಲಿ ಶನಿವಾರವೇ ಬಂದ್ ನಡೆದ ಹಿನ್ನೆಲೆಯಲ್ಲಿ ಸೋಮವಾರದ ಬಂದ್ ನಡೆಯುವ ಸಾಧ್ಯತೆ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಬಂದ್ ವಿಚಾರದಲ್ಲಿ ಎಡರಂಗದಲ್ಲೇ ಭಿನ್ನಾಭಿಪ್ರಾಯಗಳೆದ್ದಿವೆ. ಮಾರ್ಕ್ಸ್​​ವಾದಿ ಕಮ್ಯೂನಿಸ್ಟ್ ಪಕ್ಷದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಫಾರ್ವರ್ಡ್ ಬ್ಲಾಕ್ ಪಕ್ಷವು ಬಂದ್​ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಟಿಎಂಸಿ ಪಕ್ಷವು ಕೇಂದ್ರದ ವಿರುದ್ಧ ನಿಲುವು ಹೊಂದಿದ್ದರೂ ಬಂದ್​ಗೆ ಬೆಂಬಲ ಕೊಡದಿರಲು ತೀರ್ಮಾನಿಸಿದೆ.

ಒಟ್ಟಾರೆಯಾಗಿ, ಸೋಮವಾರದ ಭಾರತ್ ಬಂದ್​ಗೆ ಕರ್ನಾಟಕ ಸೇರಿ ಕೆಲವೇ ಕೆಲವು ರಾಜ್ಯಗಳಲ್ಲಿ ತೀವ್ರತೆ ಕಂಡುಬರುವ ನಿರೀಕ್ಷೆ ಇದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...