Punjab Elections: ಪಂಜಾಬ್ AAP ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಆಯ್ಕೆ

ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆದ ಸಂಸದ ಭಗವಂತ್ ಮಾನ್ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಸುಲಭದ ಹಾದಿ ಆಗಿರಲಿಲ್ಲ. ಪಕ್ಷದ ಅಧ್ಯಕ್ಷರಾಗಿ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 

ಭಗವಂತ್ ಮಾನ್

ಭಗವಂತ್ ಮಾನ್

 • Share this:
  ನವದೆಹಲಿ, ಜ. 18: ಸಂಪೂರ್ಣ ರಾಜ್ಯದ ಸ್ಥಾನಮಾನ (State wood) ಇರುವ  ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಐದಾರು ವರ್ಷಗಳಿಂದ ಕನಸು ಕಾಣುತ್ತಿರುವ ಆಮ್ ಆದ್ಮಿ ಪಕ್ಷ (Aam Admi Party) ಇಂದು ಪಂಜಾಬಿನಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು (Chief Minister Candidate) ಘೋಷಣೆ ಮಾಡಿದೆ. ದೆಹಲಿಯ ಮುಖ್ಯಮಂತ್ರಿಯೂ ಆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ (Dehli CM and Aam Admi Party National Convener Aravinda Kejriwal) ಅವರು ಮೊಹಾಲಿಯಲ್ಲಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ಹಾಗೂ ಸಂಗ್ರುರ್ ಕ್ಷೇತ್ರದ ಸಂಸದ ಭಗವಂತ್ ಮಾನ್ (Bhagavan Maan) ಅವರನ್ನು ತಮ್ಮ ಪಕ್ಷದ ಪಂಜಾಬಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

  ಮಾನ್ ಗೆ ಸ್ಪರ್ಧೆ ನೀಡಿದ ಚೀಮಾ
  ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆದ ಸಂಸದ ಭಗವಂತ್ ಮಾನ್ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದು ಸುಲಭದ ಹಾದಿ ಆಗಿರಲಿಲ್ಲ. ಪಕ್ಷದ ಅಧ್ಯಕ್ಷರಾಗಿ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ನಡುವೆ ಕೆಲ ದಿನ ಅರವಿಂದ ಕೇಜ್ರಿವಾಲ್ ಜೊತೆಗೆ ಮುಸುಕಿನ ಗುದ್ದಾಟ ನಡೆದಿತ್ತಾದರೂ ತಾಳ್ಮೆಯಿಂದ ಕಾದಿದ್ದರು. ಇದಲ್ಲದೆ ಪಂಜಾಬ್ ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಆಗಲು ತೀವ್ರ ಸ್ಪರ್ಧೆ ನಡೆಸಿದ್ದರು.

  ತಮ್ಮದೇಯಾದ ಶಾಸಕರ ಗುಂಪಿನ ಮೂಲಕ ಒತ್ತಡವನ್ನೂ ಹೇರಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ರಾಜ್ಯದ ಸ್ಥಾನಮಾನ ಇರುವ ರಾಜ್ಯಕ್ಕೆ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದರು‌. ಈ ಎಲ್ಲಾ ಅಡೆತಡೆಗಳನ್ನೂ ಮೀರಿ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಹೊರಹೊಮ್ಮಿದ್ದಾರೆ.

  ಇದನ್ನು ಓದಿ: ರಾಜಕೀಯ ಪಕ್ಷಗಳ ಬೇಡಿಕೆ ಹಿನ್ನಲೆ Punjab Election ದಿನಾಂಕ ಮುಂದೂಡಿಕೆ; ಫೆ 20ಕ್ಕೆ ಮತದಾನ

  ಸಿಎಂ ಅಭ್ಯರ್ಥಿ ಆಗುವುದಕ್ಕೂ ನಡೆದಿತ್ತು SMS ಸರ್ವೆ
  ಭಗವಂತ ಮಾನ್  ಮತ್ತು ವಿರೋಧ ಪಕ್ಷದ ನಾಯಕ ಹರ್ಪಾಲ್ ಚೀಮಾ ನಡುವೆ ನೇರ ಸ್ಪರ್ಧೆ ಇತ್ತು. ಇದಲ್ಲದೆ ಇನ್ನೂ ಕೆಲವರು ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂದು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಸಿಎಂ ಅಭ್ಯರ್ಥಿ ಯಾರಾಗಬೇಕು ಎಂದು ತಿಳಿಯಲು ಎಸ್ ಎಂಎಸ್ ಸರ್ವೆ ನಡೆಸಿತ್ತು. ಆ ಎಸ್ ಎಂಎಸ್ ಸಮೀಕ್ಷೆಯಲ್ಲಿ 21,59,437 ಜನರು ಅಂದರೆ ಶೇಕಡಾ 93.3 ರಷ್ಟು ಜನರು ಸರ್ದಾರ್ ಭಗವಂತ್ ಮಾನ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವೇಳೆ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

  ಪಂಜಾಬ್ ಚುನಾವಣೆ ಮುಂದೂಡಿಕೆ
  ಪಂಜಾಬ್​ ವಿಧಾನಸಭಾ ಚುನಾವಣಾ ದಿನಾಂಕವನ್ನು ಮುಂದೂಡಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ಹೊಸ ದಿನಾಂಕ ಪ್ರಕಟಿಸಿದೆ. ಈ ಹಿಂದೆ ನಿಗದಿಪಡಿಸಿದ್ದ ಫೆಬ್ರವರಿ 14ರ ಬದಲು ಫೆಬ್ರವರಿ 20ರಂದು ಪಂಜಾಬ್​​​ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಗುರು ರವಿದಾಸ್​ ಜಯಂತಿ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡುವಂತೆ ಆಡಳಿತಾರೂಢ ಕಾಂಗ್ರೆಸ್​, ಬಿಜೆಪಿ ಸೇರಿದಂತೆ ಸ್ಥಳೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಅದರಂತೆ ಚುನಾವಣಾ ದಿನಾಂಕವನ್ನು ಮರು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 20ಕ್ಕೆ ನಿಗದಿ ಮಾಡಿದೆ ಆದೇಶ ಹೊರಡಿಸಿದೆ.

  ಇದನ್ನು ಓದಿ: ಸಿಎಂ ಆಯ್ಕೆಗೆ SMS ಮೂಲಕ ವೋಟಿಂಗ್​; ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ AAP

  ಗುರು ರವಿದಾಸ್​ ಜಯಂತಿ ಆಚರಣೆ ಹಿನ್ನಲೆ
  ಪಂಜಾಬಿನಲ್ಲಿ ಗುರು ರವಿದಾಸ್​ ಜಯಂತಿ ಅತ್ಯಂತ ದೊಡ್ಡ ಆಚರಣೆ. ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ಫೆಬ್ರವರಿ 10 ರಿಂದ 16ರವರೆಗೆ ವಾರಣಾಸಿಗೆ ತೆರಳಲಿದ್ದಾರೆ. ಹೀಗೆ ಪ್ರವಾಸ ಕೈಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯ ಮತದಾರರ ಸಂಖ್ಯೆ ಸುಮಾರು 20 ಪಕ್ಷ. ಪಂಜಾಬಿನಲ್ಲಿ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಮತದಾರರಿದ್ದು ಆ ಪೈಕಿ 20 ಲಕ್ಷದಷ್ಟು ಜನ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.

  ಮತದಾನ ಮಾಡುವುದು ಅವರ ಸಾಂವಿಧಾನಿಕ ಹಕ್ಕು ಆದುದರಿಂದ ಮತದಾನದ ದಿನಾಂಕವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ಪತ್ರದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆ ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 14ರಿಂದ 20ಕ್ಕೆ ಅಂದರೆ 6 ದಿನ ಮುಂದೂಡಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
  Published by:Seema R
  First published: