ಇಡೀ ದೇಶಕ್ಕೆ ರಾಷ್ಟ್ರಧ್ವಜವನ್ನು ಸರಬರಾಜು ಮಾಡುವ ಹೆಮ್ಮೆಯ ಖಾದಿ ಗ್ರಾಮೋದ್ಯೋಗ ಕೇಂದ್ರ ಎಲ್ಲಿದೆ, ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

 1957ರಲ್ಲಿ ಸಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿಯವರು ಈ ಖಾದಿ ಕೇಂದ್ರವನ್ನು ಸ್ಥಾಪಿಸಿದ್ದರು. ಕಾಲಾನಂತರ ಇವರ ಪರಿಶ್ರಮದಿಂದಾಗಿ ಈ ಸಂಸ್ಥೆ ಇದೀಗ ದೇಶದ ಹೆಮ್ಮೆಯ ರಾಷ್ಟ್ರಧ್ವಜಗಳನ್ನು ತಯಾರಿಸುವ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಸಿದ್ದವಾಗುವ ಎಲ್ಲಾ ರಾಷ್ಟ್ರಧ್ವಜಗಳನ್ನು ತಯಾರಿಸುವುದು ಮಹಿಳೆಯರು ಅನ್ನೋದು ಮತ್ತೊಂದು ವಿಶೇಷ. ಸುಮಾರು 30 ಮಹಿಳೆಯರ ತಂಡ ಇಲ್ಲಿ ವರ್ಷಪೂರ್ತಿ ಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ರಾಷ್ಟ್ರಧ್ವಜ  ನಿರ್ಮಾಣ ಕೆಲಸದಲ್ಲಿ ತೊಡಗಿರುವ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ.

ರಾಷ್ಟ್ರಧ್ವಜ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ.

  • Share this:
71ನೆ ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲು ಇಡೀ ದೇಶ ಸಜ್ಜಾಗಿದೆ. ದೆಹಲಿಯ ಕೆಂಪುಕೋಟೆಯಿಂದ ದೇಶದ ಪ್ರತಿಯೊಂದು ಗ್ರಾಮ ಪಂಚಾಯತ್ ಕಚೇರಿಯ ಮೇಲೆ ತ್ರಿವರ್ಣ ಧ್ವಜ ರಾರಾಜಿಸಲಿವೆ. ಜನ ಸಾಮಾನ್ಯನಿಂದ ದೇಶದ ಅಗ್ರಗಣ್ಯ ಪ್ರಧಾನಿಗಳವರೆಗೆ ಪ್ರತಿಯೊಬ್ಬ ನಾಗರೀಕನೂ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಲು ಸಜ್ಜಾಗಿದ್ದಾರೆ. ನಮ್ಮ ಸಂವಿಧಾನದಲ್ಲೂ ರಾಷ್ಟ್ರ ಧ್ವಜಕ್ಕೆ ಮೊದಲ ಗೌರವವನ್ನೂ ನೀಡಲಾಗಿದೆ. ಹೀಗೆ ದೇಶದ ಹೆಮ್ಮೆಯಾಗಿರುವ ರಾಷ್ಟ್ರಧ್ವಜ ತಯಾರಾಗುವುದು ನಮ್ಮ ಕನ್ನಡನಾಡಿನಲ್ಲಿ, ಗಂಡು ಮೆಟ್ಟಿದ ಬೀಡಿನಲ್ಲಿ ಎಂಬುದೇ ಹೆಮ್ಮೆಯ ವಿಚಾರವೇ ಸರಿ.

ಗಂಡು ಮೆಟ್ಟಿದ ನಾಡು ಖ್ಯಾತಿಯ ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲು. ಆದರೆ, ಹುಬ್ಬಳ್ಳಿಗೇ ಮುಕುಟಪ್ರಾಯವಾದ ಸ್ಥಳ ಎಂದರೆ ಇಲ್ಲಿನ ಬೆಂಗೇರಿ. ಏಕೆಂದರೆ ಇಡೀ ದೇಶದಲ್ಲೇ ರಾಷ್ಟ್ರ ಧ್ವಜಗಳನ್ನು ತಯಾರಿಸುವ ಸಾರ್ಕಾರಿ ಪ್ರಾಯೋಜಿತ ಘಟಕಗಳಿರುವುದು ಇಲ್ಲೇ ಎಂಬುದು ವಿಶೇಷ. ಹೌದು ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತೆ. ಇಲ್ಲಿ ಸಿದ್ದವಾಗುವ ಧ್ವಜಗಳು ದೇಶ-ವಿದೇಶದಲ್ಲೂ ರಾರಾಜಿಸುತ್ತಾ ದೇಶದ ಹೆಮ್ಮೆ ಎನಿಸಿದೆ.

ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಕುರಿತು ಕೆಲವು ಅಪರೂಪದ ಹಾಗೂ ವಿಶಿಷ್ಠ್ಯ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಧ್ವಜ ಸಂಹಿತೆಯ ಮಾನದಂಡಗಳನ್ನು ಪಾಲಿಸುವ ಕೇಂದ್ರ:

ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಧ್ವಜ ಸಂಹಿತೆಯ ಎಲ್ಲ ಮಾನದಂಡಗಳನ್ನು ಕರಾರುವಕ್ಕಾಗಿ ಪಾಲಿಸಲಾಗುತ್ತದೆ. ಹೀಗಾಗಿ 2006ರಲ್ಲಿ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಿಂದ ಇಲ್ಲಿನ ಖಾದಿ ಘಟಕಗಳಿಗೆ ಮಾನ್ಯತೆ ದೊರೆತಿದೆ. ವರ್ಷಪೂರ್ತಿ ಕಾರ್ಯನಿರ್ವಹಿಸುವ ಈ ಕೇಂದ್ರದಲ್ಲಿ ದೇಶದ ಯಾವುದೇ ಭಾಗದಿಂದ ಬೇಡಿಕೆ ಬಂದರೂ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಿ ಕೊಡಲಾಗುತ್ತಿದೆ.‌ ಸಂಸತ್ ಭವನ, ರಾಷ್ಟ್ರಪತಿ ಭವನದಿಂದ ವಿದೇಶಗಳಲ್ಲಿರುವ ರಾಯಭಾರಿ ಕಚೇರಿಗಳಲ್ಲಿಯೂ ಹುಬ್ಬಳ್ಳಿಯಲ್ಲಿ ಸಿದ್ಧವಾಗುವ‌ ಬಿಐಎಸ್‌ ಮಾನ್ಯತೆಯ ರಾಷ್ಟ್ರಧ್ವಜಗಳು ಹಾರಾಡುತ್ತವೆ. ವಿವಿಧ ರಾಜ್ಯ ಸರ್ಕಾರಗಳು ಮತ್ತು‌ ಕೇಂದ್ರಾಡಳಿತ ಪ್ರದೇಶಗಳು ಸಹ ಇಲ್ಲಿಂದಲೇ ಧ್ವಜಗಳನ್ನು ತರಿಸಿಕೊಳ್ಳುತ್ತವೆ.

ರಾಷ್ಟ್ರಧ್ವಜಗಳನ್ನು ಮಹಿಳೆಯರೇ ಸಿದ್ಧಪಡಿಸುವುದು ಮತ್ತೊಂದು ವಿಶೇಷ:

1957ರಲ್ಲಿ ಸಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿಯವರು ಈ ಖಾದಿ ಕೇಂದ್ರವನ್ನು ಸ್ಥಾಪಿಸಿದ್ದರು. ಕಾಲಾನಂತರ ಇವರ ಪರಿಶ್ರಮದಿಂದಾಗಿ ಈ ಸಂಸ್ಥೆ ಇದೀಗ ದೇಶದ ಹೆಮ್ಮೆಯ ರಾಷ್ಟ್ರಧ್ವಜಗಳನ್ನು ತಯಾರಿಸುವ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಸಿದ್ದವಾಗುವ ಎಲ್ಲಾ ರಾಷ್ಟ್ರಧ್ವಜಗಳನ್ನು ತಯಾರಿಸುವುದು ಮಹಿಳೆಯರು ಅನ್ನೋದು ಮತ್ತೊಂದು ವಿಶೇಷ. ಸುಮಾರು 30 ಮಹಿಳೆಯರ ತಂಡ ಇಲ್ಲಿ ವರ್ಷಪೂರ್ತಿ ಧ್ವಜ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ರಾಷ್ಟ್ರಧ್ವಜಕ್ಕೆ ಖಾದಿ ಬಟ್ಟೆಯೇ ಆಗಬೇಕು:

ರಾಷ್ಟ್ರಧ್ವಜ ತಯಾರಿಸಲು ಶುದ್ಧವಾದ ಖಾದಿ ಬಟ್ಟೆಯೇ ಬೇಕು. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ಜಯಧರ ತಳಿಯ ಹತ್ತಿಯನ್ನು ಬಳಸಲಾಗುತ್ತೆ. ಮಹಿಳೆಯರು ಕೈಮಗ್ಗದಿಂದಲೇ ಬಟ್ಟೆಯನ್ನು ನೇಯುತ್ತಾರೆ. ನಂತರ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಸಿದ್ಧಪಡಿಸುತ್ತಾರೆ. ಬಿಳಿ ಬಟ್ಟೆಯ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರನ್ನು ಮುದ್ರಿಸುತ್ತಾರೆ. ಬಟ್ಟೆಯನ್ನು ಚೆನ್ನಾಗಿ ಬಣಗಿಸಿದ ಮೇಲೆ ಮೂರು ಬಣ್ಣದ ಬಟ್ಟೆಗಳನ್ನು ಸೇರಿಸಿ ಹೊಲಿಗೆ ಹಾಕುತ್ತಾರೆ. ಧ್ವಜಾರೋಹಣ ಮಾಡಲು ಅನುಕೂಲವಾಗುವಂತೆ ಹಗ್ಗ ಪೋಣಿಸಲು ಅಂಚು ಬಟ್ಟೆಯನ್ನು ಜೋಡಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಲು ಮುಗಿದ ನಂತರ ಐರನ್ ಮಾಡಲಾಗುತ್ತದೆ.

ಪ್ರತಿಯೊಂದು ಹಂತದಲ್ಲಿಯೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಾರೆ. ಸಂಸ್ಥೆಯ ಕಾರ್ಯದರ್ಶಿಗಳ ತಂಡದ ಪರಿಶೀಲನೆಯ ನಂತರವಷ್ಟೇ ರಾಷ್ಟ್ರಧ್ವಜ ಹಾರಾಟಕ್ಕೆ ಸಿದ್ಧವಾಗುತ್ತದೆ. ನಿಯಮಾವಳಿಯಂತೆ ಒಟ್ಟು ಒಂಭತ್ತು ವಿವಿಧ ಗಾತ್ರದ ರಾಷ್ಟ್ರಧ್ವಜಗಳನ್ನು ಈ ಕೇಂದ್ರದಲ್ಲಿ ಸಿದ್ಧಪಡಿಸಲಾಗುತ್ತಿದೆ. ದೇಶದ ಪ್ರತಿಯೊಂದು ಮೂಲೆಯಿಂದ ಬೆಂಗೇರಿಯಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜಗಳಿಗೆ ಬೇಡಿಕೆ ಬರುತ್ತೆ. ಆರ್ಡರ್ ಸಿಗುತ್ತಿದ್ದಂತೆಯೇ ಕಾರ್ಯಪ್ರವತ್ತರಾಗುವ ಸಿಬ್ಬಂಧಿ ಧ್ವಜಗಳನ್ನು ಸಿದ್ಧಪಡಿಸಿ ರವಾನೆ ಮಾಡುತ್ತಾರೆ.

ರಾಷ್ಟ್ರ ಧ್ವಜಗಳನ್ನು ಸಿದ್ಧಪಡಿಸುವ ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯ ಎನ್ನುತ್ತಾರೆ ಇಲ್ಲಿನ ಮಹಿಳೆಯರು. ಕಳೆದ ವರ್ಷ ಎರಡು ಕೋಟಿ ಹದಿನೈದು ಲಕ್ಷ ರೂಪಾಯಿ ಮೌಲ್ಯದ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗಿದೆ. ಈ ವರ್ಷ ಮೂರು ಕೋಟಿ ರೂಪಾಯಿ ವಹಿವಾಟಿನ ನಿರೀಕ್ಷೆಯಿದೆ. ಈಗಾಗಲೇ ಎರಡೂವರೆ ಕೋಟಿ ರೂಪಾಯಿಯಷ್ಟು ಮೌಲ್ಯದ ಧ್ವಜಗಳನ್ನು ಮಾರಾಟ ಮಾಡಲಾಗಿದೆ.

ಅನಧಿಕೃತ ಮತ್ತು ಪ್ಲಾಸ್ಟಿಕ್‌ ಧ್ವಜಗಳ ಮಾರಾಟಕ್ಕೆ ಬೀಳಬೇಕಿದೆ ಬ್ರೆಕ್

ದೇಶದಲ್ಲಿ ಅನಧಿಕೃತವಾಗಿ ಸಿದ್ಧಪಡಿಸಲಾಗುವ ಧ್ವಜಗಳು ಮತ್ತು ಪ್ಲಾಸ್ಟಿಕ್ ಧ್ವಜಗಳ ಬಳಕೆ ಕೂಡ ದೊಡ್ಡ ಪ್ರಮಾಣದಲ್ಲಿದೆ. ಪ್ಲಾಸ್ಟಿಕ್ ಧ್ವಜಗಳನ್ನು ಬಳಸಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಎಲ್ಲರೂ ಬಿಐಎಸ್ ಮಾನ್ಯತೆ ಪಡೆದಿರುವ ಖಾದಿ ಧ್ವಜಗಳನ್ನೇ ಬಳಸಬೇಕು. ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು ಎನ್ನುವ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ.

ಇದನ್ನೂ ಓದಿ : ಜಗತ್ತಿನ ನಂ.1 ಶ್ರೀಮಂತ ಜೆಫ್​ ಬೆಜೋಸ್​ಗೆ ಪ್ರೇಯಸಿಯಿಂದಲೇ ದ್ರೋಹ?​ ಖಾಸಗಿ ಫೋಟೊ, ಮೆಸೇಜ್​ ಲೀಕ್​ ಮಾಡಿದ್ದು ಇವಳೇ!
First published: