ಬೆಂಗಳೂರು ಶ್ರೀಹಟ್ಟಾ ಸಮ್ಮೇಳನಿ (ಬಿಎಸ್ಎಸ್) ಎರಡನೇ ಬಾರಿ ಬೆಂಗಳೂರಿನಲ್ಲಿ ದುರ್ಗಾ ಪೂಜೆ ಆಯೋಜಿಸಿದೆ. ಬಂಗಾಳ ಮೂಲದ ಸಿಲೆಟಿ ಸಮುದಾಯದವರ ಈ ವಿಶೇಷ ದುರ್ಗೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ.
ಬೆಂಗಳೂರು(ಅ. 21): ಸಿಲಿಕಾನ್ ಸಿಟಿಯಲ್ಲಿ ನೆಲಸಿರುವ ಬಂಗಾಳಿ ಮೂಲದ ಸಿಲೆಟಿ ಸಮುದಾಯದವರು ದುರ್ಗಾ ಪೂಜೆ ಆಯೋಜಿಸಿದ್ದಾರೆ. ನಗರದಲ್ಲಿ ಈ ಸಮುದಾಯದಿಂದ ನಡೆಸಲಾಗುತ್ತಿರುವ ಎರಡನೇ ದುರ್ಗಾ ಉತ್ಸವ ಇದಾಗಿದೆ. ಕಳೆದ ವರ್ಷವೂ ಸಿಲೆಟಿಗರು ದುರ್ಗಾ ಪೂಜೆ ನಡೆಸಿದ್ದರು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಬಹಳಷ್ಟು ಜನರು ಆ ಉತ್ಸವಕ್ಕೆ ಆಗಮಿಸಿದ್ದರು. ಆದರೆ, ಈ ವರ್ಷ ಕೋವಿಡ್ ಇರುವ ಕಾರಣಕ್ಕೆ ಸಕಲ ಮುಂಜಾಗ್ರತೆಯೊಂದಿಗೆ ಸಿಲೆಟಿಗರು ಹಬ್ಬವನ್ನು ಆಚರಿಸುತ್ತಿದ್ದಾರೆ.
ಬೆಂಗಳೂರು ಶ್ರೀಹಟ್ಟಾ ಸಮ್ಮೇಳನಿ (ಬಿಎಸ್ಎಸ್) ಈ ದುರ್ಗಾ ಪೂಜೆ ಆಯೋಜಿಸಿದೆ. “ಈ ವರ್ಷದ ದುರ್ಗಾ ಪೂಜೆಯನ್ನು ಬಹಳ ಸರಳವಾಗಿ ಹಾಗೂ ಕಡಿಮೆ ಕಾರ್ಯಕರ್ತರೊಂದಿಗೆ ಆಯೋಜಿಸಲು ನಾವು ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ಬಿಎಸ್ಎಸ್ ಅಧ್ಯಕ್ಷ ನಾಬುರನ್ ಪುರಕಾಯಸ್ಥ ತಿಳಿಸಿದ್ಧಾರೆ.
ಬೆಂಗಳೂರಿನಲ್ಲಿ ನಡೆಯುವ ಈ ದುರ್ಗೋತ್ಸವವನ್ನು ಆನ್ಲೈನ್ನಲ್ಲಿ ಆಯೋಜಿಸಲಾಗಿದೆ. ಇಲ್ಲಿಯ ಕಾರ್ಯಕ್ರಮಗಳನ್ನ ಫೇಸ್ಬುಕ್, ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಹಾಗಿಯೇ ಬಿಎಸ್ಎಸ್ ವೆಬ್ಸೈಟ್ನಲ್ಲೂ bssbangalore.com ಇದರ ಪ್ರಸಾರವನ್ನು ವೀಕ್ಷಿಸಬಹುದು.
ಈ ವರ್ಷ ದುರ್ಗಾ ಪೂಜೋತ್ಸವಗಳು ಬೇಗನೇ ಪ್ರಾರಂಭಗೊಂಡಿವೆ. ಸೆಪ್ಟೆಂಬರ್ 17ರಂದೇ ಆರಂಭಗೊಂಡಿದ್ದು ಪ್ರತೀ ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರಲಾಗಿದೆ.
ವಿವಿಧ ಸಮುದಾಯಗಳು ನೆಲಸಿರುವ ಬೆಂಗಳೂರಿನಲ್ಲಿ ಬಹಳಷ್ಟು ದುರ್ಗಾ ಪೂಜೋತ್ಸವಗಳು ನಡೆಯುತ್ತವೆ. ಆದರೆ, ಸಿಲೆಟಿ ಸಮುದಾಯದವರಲ್ಲಿ ಬಹುತೇಕರು ಬಾಂಗ್ಲಾದೇಶ ಮೂಲದಿಂದ ಬಂದಿರುವ ಹಿಂದೂಗಳೇ ಆಗಿದ್ದಾರೆ. ಇವರ ದುರ್ಗಾ ಪೂಜೆ ಬಹಳ ವಿಶೇಷವಾಗಿದೆ. ಬೆಂಗಳೂರಿನ ಸಿಲೆಟಿಗರು ತಮ್ಮದೇ ಸಮುದಾಯದ ಹೆಗ್ಗುರುತಾಗಿ ಕಳೆದ ವರ್ಷ ದುರ್ಗಾ ಪೂಜೆ ಪ್ರಾರಂಭಿಸಿದ್ದರು.
ಬೆಂಗಳೂರು ಶ್ರೀಹಟ್ಟಾ ಸಮ್ಮೇಳನಿ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು 2005ರಲ್ಲಿ. ದುರ್ಗಾ ಪೂಜೆ ನಂತರ ನಡೆಯುವ “ಬಿಜೋಯ ಸಮ್ಮೇಳನ” (ವಿಜಯೋತ್ಸವ) ಹಾಗೂ ಇತರ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆಯಾದರೂ ದುರ್ಗಾಪೂಜೆ ಅಯೋಜಿಸುತ್ತಿರುವುದು ಇದು ಎರಡನೇ ವರ್ಷ.
ಇಲ್ಲಿ ಶ್ರೀಹಟ್ಟಾ ಎಂದರೆ ಪೂರ್ವ ಬಂಗಾಳ (ಈಗಿನ ಬಾಂಗ್ಲಾದೇಶ) ಮತ್ತು ದಕ್ಷಿಣ ಅಸ್ಸಾಮ್ನಲ್ಲಿ ವ್ಯಾಪಿಸಿರುವ ಸಿಲೆಟ್ ಪ್ರದೇಶವಾಗಿದೆ. ಈ ಪ್ರದೇಶದವರನ್ನು ಸಿಲೆಟಿ ಎಂದು ಕರೆಯಲಾಗುತ್ತದೆ. ಇವರು ಬಂಗಾಳ ಭಾಷಾ ಗುಂಪಿಗೆ ಸೇರಿದ ಸಿಲೆಟಿ ಎಂಬ ಭಾಷೆಯನ್ನು ಮಾತನಾಡುತ್ತಾರೆ. ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಈಗಲೂ ಸಿಲೆಟಿ ಭಾಷಿಗರು ಇದ್ದಾರೆ. ಈಗ ದೇಶ ವಿದೇಶಗಳಲ್ಲಿ ಇವರು ಚದುರಿ ಹೋಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರವೊಂದರಲ್ಲೇ 3 ಲಕ್ಷ ಸಿಲೆಟಿ ಸಮುದಾಯದವರು ನೆಲಸಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ