• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bengaluru Mysuru Expressway: ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್​ವೇ ಜಲಾವೃತಗೊಳ್ಳಲು ಹಳ್ಳಿ ಜನರೇ ಕಾರಣ: ಕೇಂದ್ರ ಸರ್ಕಾರ

Bengaluru Mysuru Expressway: ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್​ವೇ ಜಲಾವೃತಗೊಳ್ಳಲು ಹಳ್ಳಿ ಜನರೇ ಕಾರಣ: ಕೇಂದ್ರ ಸರ್ಕಾರ

ರಸ್ತೆ ಜಲಾವೃತ

ರಸ್ತೆ ಜಲಾವೃತ

ರಾಮನಗರ ವ್ಯಾಪ್ತಿಯ ಬಳಿ ನೀರು ಹರಿಯುವುದನ್ನು ಗಮನಿಸಿದ ಗ್ರಾಮಸ್ಥರು ಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದಾರೆ. ಆದ್ದರಿಂದ ಹೆದ್ದಾರಿಯಲ್ಲಿ ನೀರು ನಿಂತು ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವಾಲಯ ಸಮಜಾಯಿಸಿ ನೀಡಿದೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲಿ (Bengaluru Rains) ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಮೊನ್ನೆ ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿ ಅವರಿಂದ (PM Narendra Modi) ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಹೆದ್ದಾರಿ (Bengaluru Mysuru Expressway) ಸಂಪೂರ್ಣ ಜಲಾವೃತಗೊಂಡು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಹೆದ್ದಾರಿಯ ಕೆಳಸೇತುವೆ ಬಳಿ ಸಾಕಷ್ಟು ನೀರು ನಿಂತು ಸರತಿಯಲ್ಲಿ ವಾಹನಗಳು ಚಲಿಸುತ್ತಿದ್ದು, ಇದರಿಂದ ಸರಣಿ ಅಪಘಾತಗಳು ನಡೆದು, ವಾಹನ ದಟ್ಟಣೆ ಸಹ ಉಂಟಾಗಿದೆ.


ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಜಲಾವೃತ
ದುಬಾರಿ ಟೋಲ್‌ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿರುವ ಎಕ್ಸ್ಪ್ರೆಸ್ ವೇ ಉದ್ಘಾಟನೆಯಾದ ಎಂಟೇ ದಿನಕ್ಕೇ ಮತ್ತೊಂದು ಅವಂತಾರಕ್ಕೆ ಗುರಿಯಾಗಿದೆ. ಅಲ್ಲದೇ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಅಲ್ಲಿನ ಹಳ್ಳಿಗರನ್ನು ನೇರವಾಗಿ ಹೊಣೆ ಮಾಡಿದ್ದಾರೆ.


ಜಲಾವೃತಕ್ಕೆ ಹಳ್ಳಿಗರನ್ನು ಹೊಣೆ ಮಾಡಿದ ಕೇಂದ್ರ ಸರ್ಕಾರ
ಹೆದ್ದಾರಿಯ ಶೋಚನೀಯ ಸ್ಥಿತಿಯ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟನೆ ನೀಡಿದೆ. ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ರಾಮನಗರ ವ್ಯಾಪ್ತಿಯ ಬಳಿ ನೀರು ಹರಿಯುವುದನ್ನು ಗಮನಿಸಿದ ಗ್ರಾಮಸ್ಥರು ಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದಾರೆ. ಆದ್ದರಿಂದ ಹೆದ್ದಾರಿಯಲ್ಲಿ ನೀರು ನಿಂತು ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮಜಾಯಿಸಿ ನೀಡಿದೆ.


"ಗ್ರಾಮಸ್ಥರು ಒಳಚರಂಡಿ ಮಾರ್ಗ ಬಂಧಿಸಿದ್ದಾರೆ"
“ಮಾದಾಪುರ ಮತ್ತು ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಪ್ರವೇಶಿಸಲು 3 ಮೀಟರ್ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಶಾರ್ಟ್‌ಕಟ್ ಮಾರ್ಗವನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಒಳಚರಂಡಿ ಮಾರ್ಗಕ್ಕೆ ತಡೆಯಾಗಿದೆ. ಗ್ರಾಮಸ್ಥರು ನಿರ್ಮಿಸಿದ್ದ ಮಾರ್ಗವನ್ನು ಮಾರ್ಚ್ 18 ರಂದು ಮುಂಜಾನೆಯೇ ತೆಗೆದುಹಾಕಲಾಗಿದೆ, ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷವೂ ಜಲಾವೃತ
ಶನಿವಾರ ಬೆಳಗ್ಗೆ ಬೆಂಗಳೂರಿನ ಹೊರವಲಯದಲ್ಲಿ ಸಾಧಾರಣ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರದ ರಸ್ತೆಯಲ್ಲಿ ನೀರು ತುಂಬಿತ್ತು. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ ಈಗ ಮತ್ತೆ ಇಲ್ಲಿ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.


ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ದುರಸ್ಥಿ
ಉದ್ಘಾಟನೆಯ ಮೂರು ದಿನಗಳ ನಂತರ, ಹೊಸದಾಗಿ ತೆರೆಯಲಾದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಭಾಗವು ಬಿಡದಿ ಬಳಿಯ ಮೇಲ್ಸೇತುವೆಯಲ್ಲಿ ಹಾನಿಯಾಗಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ. ಹಾನಿ ಪತ್ತೆಯಾದ ನಂತರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Bengaluru To Mysuru: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಎಕ್ಸ್​ಪ್ರೆಸ್​ವೇ ಒಂದೇ ಅಲ್ಲ, ಈ ಮಾರ್ಗವೂ ಇದೆ!


ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ
ಬೆಂಗಳೂರಿನಿಂದ ಮೈಸೂರಿಗೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೆದ್ದಾರಿಯನ್ನು ನಿರ್ಮಿಸಲಾಗಿದೆ, ಇದರಿಂದಾಗಿ ಪ್ರಯಾಣದ ಸಮಯ ಮೂರು ಗಂಟೆಗಳಿಂದ ಎಪ್ಪತ್ತೈದು ನಿಮಿಷಗಳಿಗೆ ಕಡಿಮೆಯಾಗಿದೆ. NH-275 ನಲ್ಲಿ 119 ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯು 6-10 ಲೇನ್ ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ₹ 8,480 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾ.12ರಂದು ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿದರು.


ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

top videos


  ಕೇಂದ್ರದ ವಿರುದ್ಧ ಸಿಡಿಮಿಡಿ
  ಒಟ್ಟಾರೆ ಹೆದ್ದಾರಿ ಉದ್ಘಾಟನೆಯಾಗಿ ಎಂಟೇ ದಿನಕ್ಕೆ, ಸಣ್ಣ ಮಳೆಗೆ ರಸ್ತೆ ಜಲಾವೃತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಸರಿ ಇಲ್ಲದಿದ್ದರೂ ಭಾರೀ ಟೋಲ್‌ ವಸೂಲಿ ಮಾಡುತ್ತಿದ್ದಾರೆ ಎಂದು ವಾಹನ ಸವಾರರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

  First published: