Bengaluru Airport: ವಿಶ್ವದ ಟಾಪ್ 100 ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರಿಗೂ ಸ್ಥಾನ!
ಅನೇಕ ಪ್ರಯಾಣಿಕರು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಗ್ರಾಹಕ ಸೇವೆಗಾಗಿ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವೆಂದು ಮತ ಹಾಕಿದ್ದಾರೆ.
ಭಾರತದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಹೆಚ್ಚಿದಂತೆ ಜಾಗತಿಕವಾಗಿ ಉನ್ನತ ಸ್ಥಾನ ಗಳಿಸುವುದು ಸಹ ಸಹಜ. ಯಾವುದೇ ದೇಶದಿಂದ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಮೊದಲ ಹೆಜ್ಜೆ ಇಡುತ್ತಾರೆ. ಹೀಗಾಗಿ ಯಾವುದೇ ದೇಶ ಜಾಗತಿ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಿಮಾನ ನಿಲ್ದಾಣಗಳ ಪಾತ್ರವೂ ಇದೆ. ಇತ್ತೀಚಿಗೆ ಸ್ಕೈಟ್ರಾಕ್ಸ್ ಎಂಬ ಸಂಸ್ಥೆ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2022 ಪಟ್ಟಿಯನ್ನು ಬಿಡುಗೊಳಿಸಿದ್ದು, ಭಾರತದ ನಾಲ್ಕು ಭಾರತೀಯ ವಿಮಾನ ನಿಲ್ದಾಣಗಳು ವಿಶ್ವದ ಅತ್ಯುತ್ತಮ 100 ವಿಮಾನ ನಿಲ್ದಾಣಗಳಲ್ಲಿ(100 Best Airports) ಸ್ಥಾನ ಪಡೆದಿವೆ. ಅಲ್ಲದೇ ಈ ನಾಲ್ಕು ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ (Bengaluru Kempegowda International Airport) ಸೇರಿದೆ ಎಂಬ ಅಂಶ ಗಮನಾರ್ಹವಾಗಿದೆ.
ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣವು ಕಳೆದ ವರ್ಷ 71 ನೇ ಸ್ಥಾನ ಪಡೆದಿತ್ತು. ಆದರೆ ಈಬಾರಿ ಇನ್ನೂ 10 ಸ್ಥಾನಗಳಷ್ಟು ಮೇಲೆಕ್ಕೇರಿ ಈ ವರ್ಷ 61 ನೇ ಸ್ಥಾನಕ್ಕೆ ಬಂದಿದೆ. ಅನೇಕ ಪ್ರಯಾಣಿಕರು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಗ್ರಾಹಕ ಸೇವೆಗಾಗಿ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣವೆಂದು ಮತ ಹಾಕಿದ್ದಾರೆ.
ಇನ್ನುಳಿದ ಮೂರು ವಿಮಾನ ನಿಲ್ದಾಣಗಳೆಂದರೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣ, ನಿಲ್ದಾಣ, ಹೈದರಾಬಾದ್‌ನ GMR ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತೀಯ ವಿಮಾನ ನಿಲ್ದಾಣಗಳು ಸಹ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವವನ್ನು ನೀಡುತ್ತಿವೆ ಎಂಬುದು ಈ ಪಟ್ಟಿಯಿಂದ ಸಾಬೀತಾದಂತಾಗಿದೆ.
ಟಾಪ್ 50 ರ ಪಟ್ಟಿಯಲ್ಲಿ ಬಂದ ಭಾರತದ ಏಕೈಕ ವಿಮಾನ ನಿಲ್ದಾಣ ಐಜಿಐ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಇದು ಸತತ ನಾಲ್ಕನೇ ವರ್ಷವಾಗಿದೆ. ವಾಸ್ತವವಾಗಿ IGI ಕಳೆದ ವರ್ಷ 45 ನೇ ಶ್ರೇಯಾಂಕದಿಂದ ಈ ವರ್ಷ 37 ನೇ ಶ್ರೇಯಾಂಕಕ್ಕೆ ಏರಿದೆ. ಅಲ್ಲದೆ, IGI ವಿಶ್ವದ ಟಾಪ್ 50 ವಿಮಾನ ನಿಲ್ದಾಣಗಳಲ್ಲಿ ಸೇರ್ಪಡೆಗೊಂಡ ಭಾರತದ ಏಕೈಕ ವಿಮಾನ ನಿಲ್ದಾಣವಾಗಿದೆ. ಸ್ಕೈಟ್ರಾಕ್ಸ್ ವರದಿಯು ದೆಹಲಿ ವಿಮಾನ ನಿಲ್ದಾಣವನ್ನು ಭಾರತ ಮತ್ತು ದಕ್ಷಿಣ ಏಷ್ಯಾದ 'ಸ್ವಚ್ಛ ವಿಮಾನ ನಿಲ್ದಾಣ' ಎಂದು ಘೋಷಿಸಿದೆ.
ದೆಹಲಿಯ ಐಜಿಐ ವಿಮಾನ ನಿಲ್ದಾಣವು ಈಗ ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಜೂನ್ 1 ರಿಂದ ಜಲ ಮತ್ತು ಸೌರ ಶಕ್ತಿಯ ಶಕ್ತಿಗೆ ಬದಲಾಗಿದೆ. ಇದು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮೊದಲ ವಿಮಾನ ನಿಲ್ದಾಣಗಳಲ್ಲಿ ಪ್ರಮುಖವಾಗಿದೆ.
ನಂಬರ್ 1 ವಿಮಾನ ನಿಲ್ದಾಣ ಯಾವುದು? ಜಾಗತಿಕ ಶ್ರೇಯಾಂಕದಲ್ಲಿ, ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ದೋಹಾ, ಕತಾರ್) ಸತತ ಎರಡನೇ ವರ್ಷ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ. ಇತರ ವಿಜೇತರಲ್ಲಿ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ (ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಸೇವೆ ಮತ್ತು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ) ಆಗಿದೆ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣ ವಿಶ್ವದ ಸ್ವಚ್ಛ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ದೇಶೀಯ ವಿಮಾನ ನಿಲ್ದಾಣ, ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ