HOME » NEWS » National-international » BENGAL WILL MAKE MAMATA A POLITICAL REFUGEE FOR OPPOSING CAA SAYS AMIT SHAH MAK

’ಸಿಎಎ’ ವಿರೋಧಿಸಿದ್ದಕ್ಕಾಗಿ ಬಂಗಾಳದ ಜನ ಮಮತಾರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ; ಅಮಿತ್‌ ಶಾ ಸವಾಲು

ನರೇಂದ್ರ ಮೋದಿಯವರಿಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಎಚ್ಚರದಿಂದಿರುವ ಕಾರಣದಿಂದಲೇ ಮಮತಾ ಬ್ಯಾನರ್ಜಿ ಆಯುಷ್ಮಾನ್ ಭಾರತ್ ಮತ್ತು ಇತರ ಕೇಂದ್ರ ಸಕಾರದ ಯೋಜನೆಗಳನ್ನು ಬಂಗಾಳದಲ್ಲಿ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:June 9, 2020, 3:35 PM IST
’ಸಿಎಎ’ ವಿರೋಧಿಸಿದ್ದಕ್ಕಾಗಿ ಬಂಗಾಳದ ಜನ ಮಮತಾರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ; ಅಮಿತ್‌ ಶಾ ಸವಾಲು
ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ
  • Share this:
ಕೋಲ್ಕತ್ತಾ (ಜೂನ್‌ 09); ಕೇಂದ್ರ ಸರ್ಕಾರದ ಮಹತ್ವದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ಬಂಗಾಳದ ಜನ ಅವರನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಆಯೋಜಿಸಲಾಗಿದ್ದ ಜನ-ಸಂವಾದ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ಹೊರಹಾಕಿರುವ ಅಮಿತ್ ಶಾ, “ಸಿಎಎ ಜಾರಿಗೆ ಬಂದಾಗ ಮಮತಾ ಬ್ಯಾನರ್ಜಿ ಹೇಗೆ ಕೋಪಗೊಂಡರು, ಕೇಂದ್ರದ ಈ ನಿರ್ಧಾರದ ವಿರುದ್ಧ ಸಂಸತ್ತು ಮತ್ತು ಬೀದಿ ಬದಿಯಲ್ಲಿ ನಿಂತು ಹೇಗೆ ವಿರೋಧಿಸಿದ್ದರು ಎಂಬುದು ಬಂಗಾಳದ ಜನರಿಗೆ ತಿಳಿದಿದೆ.

ನಾನು ಈ ಮೊದಲು ಹೀಗೆ ಕೋಪಗೊಂಡ ವ್ಯಕ್ತಿಯನ್ನು ಕಂಡಿರಲಿಲ್ಲ. ಮಮತಾ ಅವರೇ ಬಂಗಾಳದ ಮಾಟುವಾ ಮತ್ತು ನಮಾಶುದ್ರ ಸಮುದಾಯದ ಜನರು ಪೌರತ್ವ ಪಡೆಯುವುದು ನಿಮಗೆ ಇಷ್ಟವಿಲ್ಲವೇ? ಮತ್ತೆ ಈ ಕಾಯ್ದೆಯ ವಿರುದ್ಧ ನೀವು ಏಕೆ ಕೋಪಗೊಂಡಿರಿ? ಎಂದು ಪ್ರಶ್ನೆ ಮಾಡಿರುವ ಅವರು, ಸಿಎಎ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ನೀವು ಭಾರೀ ಬೆಲೆ ತೆರಬೇಕಾಗುತ್ತದೆ. ಬಂಗಾಳದ ಜನ ನಿಮ್ಮನ್ನು ರಾಜಕೀಯ ನಿರಾಶ್ರಿತರನ್ನಾಗಿಸಲಿದ್ದಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಬಂಗಾಳದ ಜನರಿಗೂ ಕಿವಿಮಾತು ಹೇಳಿರುವ ಅಮಿತ್ ಶಾ, “ಭಾರತದಲ್ಲಿ ಓಲೈಕೆ ರಾಜಕಾರಣವನ್ನು ನಿಲ್ಲಿಸುವ ಸಲುವಾಗಿ ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬಂಗಾಳದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿರಾಶ್ರಿತರಿಗೆ ದಶಕಗಳಿಂದ ಮಾಡಲಾಗಿರುವ ಅನ್ಯಾಯವನ್ನು ತಪ್ಪುಗಳನ್ನು ಕೊನೆಗೊಳಿಸಬೇಕು. ಆ ನಿಟ್ಟಿನಲ್ಲಿ ಸಿಎಎ ಕಾಯ್ದೆ ಒಂದು ಉತ್ತಮ ಹೆಜ್ಜೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮಿತ್ ಶಾ ರೈಲು ರಾಜಕೀಯ:

ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುವ ವಿಚಾರದಲ್ಲೂ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ರಾಜಕೀಯ ದಾಳಿ ನಡೆಸಿರುವ ಅಮಿತ್ ಶಾ, “ವಲಸೆ ಕಾರ್ಮಿಕರನ್ನು ಸಾಗಿಸಲು ಬಂಗಾಳ ಸರ್ಕಾರ ಅತಿ ಕಡಿಮೆ ರೈಲುಗಳನ್ನು ಕೇಳಿತ್ತು. ಕೇವಲ 236 ರೈಲುಗಳಲ್ಲಿ 3 ಲಕ್ಷ ವಲಸಿಗರನ್ನು ಅವರ ಸ್ವಂತ ನೆಲೆಗಳಿಗೆ ತಲುಪಿಸಲಾಗಿದೆ” ಎಂದಿದ್ದಾರೆ.

ಬಂಗಾಳದಲ್ಲಿ ಕಮಲ ಸರ್ಕಾರ ಖಚಿತ; ಅಮಿತ್ ಶಾ“ನರೇಂದ್ರ ಮೋದಿಯವರಿಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಎಚ್ಚರದಿಂದಿರುವ ಕಾರಣದಿಂದಲೇ ಮಮತಾ ಬ್ಯಾನರ್ಜಿ ಆಯುಷ್ಮಾನ್ ಭಾರತ್ ಮತ್ತು ಇತರ ಕೇಂದ್ರ ಸಕಾರದ ಯೋಜನೆಗಳನ್ನು ಬಂಗಾಳದಲ್ಲಿ ಸ್ಥಗಿತಗೊಳಿಸುತ್ತಿದ್ದಾರೆ” ಎಂದು ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಂಗಾಳದ ಜನರಿಗೆ ಕೇಂದ್ರ ಸರ್ಕಾರದ ಆರೋಗ್ಯದ ಪ್ರಯೋಜನಗಳನ್ನು ತಲುಪಿಸಲು ಮಮತಾ ಬ್ಯಾನರ್ಜಿ ಏಕೆ ಅವಕಾಶ ನೀಡುತ್ತಿಲ್ಲ? ನಿಮ್ಮ ರಾಜಕೀಯಕ್ಕೆ ಜನರ ಯೋಗಕ್ಷೇಮವನ್ನು ಏಕೆ ಪಣವಿಡುತ್ತಿದ್ದೀರಿ? ಕೇಜ್ರಿವಾಲ್ ಸೇರಿದಂತೆ ಎಲ್ಲಾ ರಾಜ್ಯ ನಾಯಕರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಿಮ್ಮ ಸಮಸ್ಯೆ ಏನು? ಎಂದು ಪ್ರಶ್ನೆ ಮಾಡಿರುವ ಅಮಿತ್ ಶಾ. ಬಂಗಾಳದಲ್ಲಿ ಬಿಜೆಪಿ ಗೆದ್ದು ಸ್ವತಂತ್ಯ್ರ ಸರ್ಕಾರ ರಚನೆ ಮಾಡಿದ ನಂತರ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಲಾಕ್​ಡೌನ್​ ಎಫೆಕ್ಟ್​; 82 ವರ್ಷದ ನಂತರವೂ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಬರೆದ ಪಾರ್ಲೆ-ಜಿ​ ಬಿಸ್ಕತ್​
First published: June 9, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories