ದೀಪದಿಂದ ದೀಪ ಹಚ್ಚಿ, ಮನೆ ಮನಸ್ಸನ್ನು ಬೆಳಗುವ ಹಬ್ಬವೇ ದೀಪಾವಳಿ (Deepavali Festival Celebration). ಇದು ದೀಪಗಳ ಹಬ್ಬ ಎಂದೇ ಪ್ರತೀತಿ ಪಡೆದಿದೆ. ಈ ಹಬ್ಬ ಕಳೆಗಟ್ಟುವುದು ಸಾಲು ಸಾಲು ದೀಪಗಳ ಬೆಳಕು, ಲಕ್ಷ್ಮೀ ಪೂಜೆ ಹಾಗೂ ಪಟಾಕಿಗಳಿಂದ. ದೀಪಗಳು ಇಲ್ಲದೇ, ಪಟಾಕಿ ಸದ್ದು ಇಲ್ಲದಿದ್ದರೆ ದೀಪಾವಳಿ ಹಬ್ಬ ಕಳೆಗುಂದುತ್ತದೆ. ಆದರೆ ಕಳೆದ ಸುಮಾರು ವರ್ಷಗಳಿಂದ ಪರಿಸರ ಮಾಲಿನ್ಯದ ದೃಷ್ಟಿಯಿಂದ ಅಪಾಯ ಸಂಭವಿಸುವ ಕಾರಣ ಪಟಾಕಿಗಳನ್ನು ಹಲವೆಡೆ ನಿಷೇಧಿಸಲಾಗಿದೆ. ಇದೀಗ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (Trinamool Congress) ಸರ್ಕಾರವು ಕೂಡ ಮುಂದಿನ ಹಬ್ಬಗಳ ಕಾರಣ ಪಟಾಕಿಗಳ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿದೆ. ಕೋವಿಡ್-19 ಮಹಾಮಾರಿಯಿಂದ ಕ್ವಾರಂಟೈನ್ ಹಾಗೂ ಐಸೋಲೇಶನ್ ಆದವರನ್ನು ಗಮನದಲ್ಲಿರಿಸಿಕೊಂಡು ಮತ್ತು ಪರಿಸರ ಮಾಲಿನ್ಯದ ನಿಮಿತ್ತ ಈ ದೃಢ ನಿರ್ಧಾರಕ್ಕೆ ಬಂದಿದೆ. ಹಸಿರುಬಣ್ಣದ ಪಟಾಕಿಗಳ ಬಳಕೆಗೆ ಮಾತ್ರ ಅವಕಾಶ ನೀಡಿದೆ.
ಈ ಹಸಿರು ಪಟಾಕಿಗಳನ್ನು 2-ಗಂಟೆಗಳ ಕಾಲ ಮಾತ್ರ ಸಿಡಿಸಬಹುದು. ದೀಪಾವಳಿಯಂದು, ರಾತ್ರಿ 8 ರಿಂದ 10 ರವರೆಗೆ, ಚಾಟ್ ಪೂಜೆಯಲ್ಲಿ ಬೆಳಿಗ್ಗೆ 6 ರಿಂದ 8 ರವರೆಗೆ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನದಂದು 35 ನಿಮಿಷಗಳ ಕಾಲ ರಾತ್ರಿ 11:55 ರಿಂದ 12:30 ರವರೆಗೆ ಪಟಾಕಿಗಳನ್ನು ಸಿಡಿಸಬಹುದು ಎಂದು ಸರ್ಕಾರ ಹೇಳಿದೆ.
ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಆದೇಶದ ಪ್ರಕಾರ, 2018 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ನಿಷೇಧವನ್ನು ವಿಧಿಸಲಾಗಿದೆ. ಪಟಾಕಿ ಸಿಡಿಸುವುದರಿಂದ ಹಾನಿಕಾರಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ, ಉಸಿರಾಟದ ತೊಂದರೆ ಅನುಭವಿಸುತ್ತಿರುವ ವ್ಯಕ್ತಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಪ್ರತ್ಯೇಕವಾಗಿರುವ ಕೋವಿಡ್ -19 ರೋಗಿಗಳ ಆರೋಗ್ಯ ಸ್ಥಿತಿಯನ್ನು ಉಲ್ಬಣಗೊಳಿಸಬಹುದು ಎಂಬ ಅಂಶವನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪಟಾಕಿಗಳನ್ನು ಸಿಡಿಸದೆ ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬಗಳನ್ನು ಆಚರಿಸುವ ಮೂಲಕ ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಹೇಳಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಕಾಳಿ ಪೂಜೆ ಮತ್ತು ದೀಪಾವಳಿಯ ಸಮಯದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ಸುಡುವಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಪರಿಸರವಾದಿ ಅಜೋಯ್ ಕುಮಾರ್ ಡೇ ಮಂಗಳವಾರ ಕಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇನ್ನು ರಾಜ್ಯದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡ ರಾಜಸ್ಥಾನ ಸರ್ಕಾರವು ಶುಕ್ರವಾರ ಪರಿಷ್ಕತ ಸಲಹೆಯನ್ನು ನೀಡಿತು ಮತ್ತು "ಹಸಿರು" ಪಟಾಕಿಗಳನ್ನು ಮಾತ್ರ ಮಾರಾಟಕ್ಕೆ ಅನುಮತಿಸಲಾಗುವುದು ಮತ್ತು ಪಟಾಕಿಗಳನ್ನು ಸಿಡಿಸುವ ನಿರ್ಬಂಧಿತ ಸಮಯವನ್ನು ಸಹ ತಿಳಿಸಿದೆ.
ರಾಜ್ಯ ಸರ್ಕಾರವು ಸೆಪ್ಟೆಂಬರ್ 30 ರಂದು ರಾಜ್ಯದಲ್ಲಿ ಅಕ್ಟೋಬರ್ 1, 2021 ರಿಂದ ಜನವರಿ 31, 2022ರವರೆಗೆ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು. ಸರ್ಕಾರ ಬಿಡುಗಡೆ ಮಾಡಿದ ಪರಿಷ್ಕøತ ಸಲಹೆಯ ಪ್ರಕಾರ, "ಗ್ರೀನ್ ಕ್ರ್ಯಾಕರ್ಸ್" ಮಾರಾಟವನ್ನು ಅನುಮತಿಸಲಾಗಿದೆ ಮತ್ತು ಅದರ ಬಳಕೆಯ ಸಮಯವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದೆ.
ಪಟಾಕಿ ನಿಷೇಧಿತ ರಾಜ್ಯಗಳು:
ದೆಹಲಿ, ರಾಜಸ್ಥಾನ, ಸಿಕ್ಕಿಂ, ಪಶ್ಚಿಮಬಂಗಾಳ, ಒಡಿಶಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ