Covishield: ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ತಯಾರಿಸಿದ ಹಾಗೂ ಆಸ್ಟ್ರಾಜೆನಿಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಈಗ ಬಹುತೇಕ ರಾಷ್ಟ್ರಗಳು ಅನುಮೋದಿಸುತ್ತಿವೆ. ಯುರೋಪಿಯನ್ ಯೂನಿಯನ್ ರಾಷ್ಟ್ರವಾದ ಬೆಲ್ಜಿಯಂ ಸಹ ಇತ್ತೀಚೆಗೆ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ನೀಡಿದೆ. ಈ ಬಗ್ಗೆ ಬೆಲ್ಜಿಯಂ ರಾಯಭಾರ ಕಚೇರಿ ಘೋಷಣೆ ಮಾಡಿದೆ. ಭಾರತದ ಬೆಲ್ಜಿಯಂ ರಾಯಭಾರ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಲ್ಜಿಯಂ ಕೋವಿಶೀಲ್ಡ್ ಅನ್ನು ಗುರುತಿಸುತ್ತದೆ ಎಂದು ಹೇಳಿದೆ, @SerumInstIndia ತಯಾರಿಸಿದ ಮತ್ತು ಕೋವ್ಯಾಕ್ಸ್ ವಿತರಿಸಿದ @AstraZeneca ಲಸಿಕೆ. ಇದು ಲಸಿಕೆ ಅಸಮಾನತೆಯ ವಿರುದ್ಧದ ಹೋರಾಟದಲ್ಲಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶಕ್ಕೆ ಮಹತ್ವದ ನಿರ್ಧಾರ ಎಂದೂ ಟ್ವೀಟ್ನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೆಲ್ಜಿಯಂ ಸಚಿವೆ ಮೇರ್ಯಾಮೆ ಕಿಟಿರ್ ಮಾಡಿದ್ದ ಟ್ವೀಟ್ ಅನುಸರಿಸಿ ಭಾರತದ ಬೆಲ್ಜಿಯಂ ರಾಯಭಾರ ಕಚೇರಿ ಟ್ವೀಟ್ ಮೂಲಕ ಈ ಮಹತ್ವದ ಘೋಷಣೆ ಮಾಡಿದೆ. ಈ ವಾರದ ಆರಂಭದಲ್ಲಿ ನೆದರ್ಲ್ಯಾಂಡ್ಸ್ ಸಹ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡು ಅಲ್ಲಿಗೆ ತೆರಳುವ ಪ್ರಯಾಣಿಕರಿಗೆ ಅನುಮೋದನೆ ನೀಡಿದೆ.
ಈ ದೇಶಗಳಲ್ಲದೆ, ಸ್ವಿಟ್ಜರ್ಲೆಂಡ್, ಐಸ್ಲ್ಯಾಂಡ್ ಮತ್ತು ಏಳು ಇಯು ದೇಶಗಳು ಜುಲೈ 1 ರಂದು ಈ ಲಸಿಕೆಯನ್ನು ಗುರುತಿಸಿವೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಯುರೋಪಿಯನ್ ಬಣದೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆಯಿತು. ಈವರೆಗೆ ಆಸ್ಟ್ರಿಯಾ, ಗ್ರೀಸ್, ಜರ್ಮನಿ, ಸ್ಲೊವೇನಿಯಾ, ಐರ್ಲೆಂಡ್, ಐಸ್ಲ್ಯಾಂಡ್, ಸ್ಪೇನ್ ಮತ್ತು ಎಸ್ಟೋನಿಯಾ ದೇಶಗಳು ಎಸ್ಐಐ ತಯಾರಿಸಿದ ಲಸಿಕೆಯನ್ನು ಗುರುತಿಸಿವೆ.
ಕೋವಿಶೀಲ್ಡ್ ಮತ್ತು ಮತ್ತೊಂದು ಭಾರತ ನಿರ್ಮಿತ ಲಸಿಕೆ ಕೋವ್ಯಾಕ್ಸಿನ್ ಪಡೆದ ಎಲ್ಲ ವ್ಯಕ್ತಿಗಳಿಗೆ ವಿನಾಯಿತಿ ವಿಸ್ತರಿಸಲು ಪ್ರತ್ಯೇಕವಾಗಿ ಪರಿಗಣಿಸುವಂತೆ ಭಾರತದ ಅಧಿಕಾರಿಗಳು ಇಯು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಅಲ್ಲದೆ, ಇಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರವನ್ನು ಗುರುತಿಸಲು ಪರಸ್ಪರ ನೀತಿಯನ್ನು ಸಹ ಪರಿಚಯಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ, ಬೆಲ್ಜಿಯಂ ಸಹ ಈ ಲೀಗ್ಗೆ ಸೇರ್ಪಡೆಯಾಗುವುದರೊಂದಿಗೆ ಕೋವಿಶೀಲ್ಡ್ COVID-19 ಲಸಿಕೆಯನ್ನು ಗುರುತಿಸುವ ಪಟ್ಟಿಗೆ 15 ದೇಶಗಳನ್ನು ಈವರೆಗೆ ಸೇರಿಸಲಾಗಿದೆ. ಭಾರತದ ಕೋವಿನ್ ಪೋರ್ಟಲ್ ಮೂಲಕ ನೀಡಲಾಗುವ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಸ್ವೀಕರಿಸುವಂತೆ ಭಾರತವು ಯೂರೋಪಿಯನ್ ಒಕ್ಕೂಟ (ಇಯು) ಗೆ ಮನವಿ ಮಾಡಿದೆ.
ಆದರೆ, ಇಯು ಗ್ರೀನ್ ಪಾಸ್ ಅಥವಾ ಯುರೋಪಿಯನ್ ಯೂನಿಯನ್ (ಇಯು) ಡಿಜಿಟಲ್ ಕೋವಿಡ್ ಸರ್ಟಿಫಿಕೇಟ್ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಅನುಮೋದಿತ ಲಸಿಕೆಗಳ ಪಟ್ಟಿಯನ್ನು ಬಳಸುತ್ತದೆ. ಈ ಪಟ್ಟಿಯಲ್ಲಿ ವಿಶ್ವದ ಕೇವಲ ನಾಲ್ಕು ಲಸಿಕೆಗಳನ್ನು ಪಟ್ಟಿ ಮಾಡಲಾಗಿದೆ, ಮತ್ತು ಅವುಗಳಲ್ಲಿ ಯಾವುದೂ ಭಾರತ ನಿರ್ಮಿತವಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ