ನವ ದೆಹಲಿ (ಮಾರ್ಚ್ 15): ಗಡಿಜಿಲ್ಲೆ ಬೆಳಗಾವಾವಿಯಲ್ಲಿ ಮತ್ತೆ ಕನ್ನಡ-ಮರಾಠಿಗರ ನಡುವಿನ ಕದನ ತಾರಕಕ್ಕೇರಿದೆ. ಕನ್ನಡಿಗರ ಹಾಗೂ ಕನ್ನಡ ಪರ ಹೋರಾಟಗಾರರ ಮೇಲೆ ಅಲ್ಲಲ್ಲಿ ಹಲ್ಲೆಗಳಾಗುತ್ತಿರುವ ಕುರಿತು ಆಗಿಂದಾಗ್ಗೆ ವರದಿಯಾಗುತ್ತಲೇ ಇವೆ. ಇದೇ ಕಾರಣಕ್ಕೆ ಇತ್ತೀಚೆಗೆ ಕನ್ನಡ ಹೋರಾಟಗಾರರು ಬೆಳಗಾವಿಯಲ್ಲಿ ಮರಾಠಿ ಫಲಕಗಳ ಮೇಲೆ ಮಸಿ ಬಳಿದು ಪ್ರತಿಭಟಿಸಿದ್ದರು. ಅಲ್ಲದೆ, ಈ ಘಟನೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಉಗ್ರವಾಗಿ ಖಂಡಿಸಿದ್ದರು. ಕನ್ನಡಿಗರಿಗೆ ಬೆಳಗಾವಿಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರು. ಇದರ ಬೆನ್ನಿಗೆ ಇದೀಗ ಬೆಳಗಾವಿ ಗಡಿ ವಿವಾದ ಲೋಕಸಭೆಯಲ್ಲಿ ಕಾವೇರಿಸಿದೆ. ಲೋಕಸಭೆಯಲ್ಲಿ ಮತ್ತೊಮ್ಮೆ ಬೆಳಗಾವಿಯ ಗಡಿ ವಿವಾದದ ಪ್ರಸ್ತಾಪ ಆಗಿದೆ. ಮಹಾರಾಷ್ಟ್ರದ ಸಂಸದರು ಈ ವಿಷಯ ಕೆದಕಿದಾಗ ರಾಜ್ಯದ ಸಂಸದರು ಸಹ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ಮರಾಠಿ ಭಾಷೆ ಮತ್ತು ಬೆಳಗಾವಿ ವಿಷಯದಲ್ಲಿ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಮಹಾರಾಷ್ಟ್ರದ ಶಿವಸೇನೆಯ ಸಂಸದ ಅರವಿಂದ ಸಾವಂತ್ ಲೋಕಸಭೆಯಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅರವಿಂದ್ ಸಾವಂತ್ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಬಗ್ಗೆ ಮಾತನಾಡಿದರು.
ದೇಶದಲ್ಲಿ ಭಾಷ್ಯವಾರು ಪ್ರಾಂತ್ಯ ರಚೆನೆಯಾಗಿದೆ. ಕರ್ನಾಟಕದ ಬಾಲ್ಕಿ, ಬೀದರ್, ನಿಪ್ಪಾಣಿ, ಬೆಳಗಾವಿ, ಕಾರವಾರದಲ್ಲಿ ಮರಾಠಿ ಬಹುಭಾಷಿಕರಿದ್ದಾರೆ. ಅಲ್ಲಿ ಮರಾಠಿಗರಿದ್ದಾರೆ ಎನ್ನುವ ಕಾರಣಕ್ಕೆ ಶಿವಸೇನೆ ಪಕ್ಷ ಈ ಭಾಗವನ್ನು ಮಹಾರಾಷ್ಟ್ರ ಸೇರಿಸುವಂತೆ ಹಿಂದಿನಿಂದಲೂ ಹೋರಾಟ ಮಾಡುತ್ತಿದೆ. ಹೀಗೆ ಹೋರಾಟ ಮಾಡುತ್ತಿರುವ ಶೀವಸೇನೆ ನಾಯಕರ ಮೇಲೆ ಹಲ್ಲೆ ನಡೆದಿದೆ ಎಂದು ಅರವಿಂದ್ ಸಾವಂತ್ ಹೇಳಿದರು.
ಇದಕ್ಕೆ ರಾಜ್ಯ ಸಂಸದರಾದ ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ದೇವೇಂದ್ರಪ್ಪ ಮತ್ತಿತರರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿರುವ ಶಿವಸೇನೆ ಪಕ್ಷ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿ ಅನಾವಶ್ಯಕವಾಗಿ ಬೆಳಗಾವಿ ವಿಚಾರ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಹೇಳಿದರು.
1960ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಮಸ್ಯೆಗೆ ಸಂಬಂಧಿಸಿದ ಮಹಾಜನ್ ಸಮಿತಿ ರಚನೆಯಾಗಿದೆ. 1964ರಲ್ಲಿ ಸಮಿತಿಯ ವರದಿ ಸಲ್ಲಿಕೆಯಾಗಿದೆ. ಈ ಮೂಲಕ ಗಡಿ ವಿವಾದ ಅಂತ್ಯವಾಗಿದೆ. ಆದರೆ ಅಧಿಕಾರಕ್ಕಾಗಿ ತನ್ನ ಸೈದ್ಧಾಂತಿಕ ವಿರೋಧಿಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆಯ ನಿಜ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆಗೆ ವರ್ಗಾಯಿಸಲು ಗಡಿ ವಿವಾದವನ್ನು ಕೆದಕುತ್ತಿದೆ ಎಂದು ಆರೋಪಿಸಿದರು.
ಇದಾದ ಬಳಿಕ ಸಂಸತ್ತಿನ ಹೊರಗೆ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ಶಿವಕುಮಾರ್ ಉದಾಸಿ, "ಮಹಾರಾಷ್ಟ್ರದಲ್ಲಿ ದುರಾಡಳಿತ ವಿಷಯ ಚರ್ಚೆಯ ಮುನ್ನಲೆಗೆ ಬಂದಾಗ ಶಿವಸೇನೆ ಈ ರೀತಿ ವಿಷಯಾಂತರ ಮಾಡುವುದು ಸಹಜ. ಇದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ. ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿ ಇಲ್ಲ. ಆದರೆ ರಾಜ್ಯದ ಸರ್ಕಾರ ಗಡಿಯಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಿದೆ. ಭಾವನಾತ್ಮಕ ವಿಷಯದಲ್ಲಿ ಜನರನ್ನು ಕೆರಳಿಸಲು ಶಿವಸೇನೆ ಯತ್ನಿಸಿದೆ. ಇದು ದುರುದ್ದೇಶದಿಂದ ಕೂಡಿದೆ. ಮಹಾಜನ್ ವರದಿಯ ಸಂಗತಿಗಳೇ ಅಂತಿಮ" ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ