ಪಿಎಂ ಜೊತೆ 57 ನಿಮಿಷ: ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ಜೊತೆ ಚರ್ಚಿಸಿದ ಎನ್​ಸಿಪಿ ನಾಯಕ ಶರದ್​ ಪವಾರ್​

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಅವರೊಟ್ಟಿಗೆ ಮುಂಗಾರು ಅಧಿವೇಶನಕ್ಕೆ ಮುನ್ನ ಶುಕ್ರವಾರದಂದು ಸಮಾಲೋಚನೆ ನಡೆಸಿದರು.

ಪ್ರಧಾನಿ ಜೊತೆ ಮಾತುಕತೆಯಲ್ಲಿ ಶರದ್​ ಪವಾರ್​

ಪ್ರಧಾನಿ ಜೊತೆ ಮಾತುಕತೆಯಲ್ಲಿ ಶರದ್​ ಪವಾರ್​

 • Share this:
  ಸಂಸತ್ತಿನ ಮುಂಗಾರು  ಅಧಿವೇಶನಕ್ಕೆ ಎರಡು ದಿನ ಬಾಕಿ ಇರುವಾಗಲೇ ಎನ್‌ಸಿಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಶರದ್ ಪವಾರ್ ಅವರು ದೆಹಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರನ್ನುಶನಿವಾರ ಭೇಟಿಯಾದರು. "ರಾಜ್ಯಸಭಾ ಸಂಸದ ಶ್ರೀ ಶರದ್ ಪವಾರ್ ಅವರು ಪ್ರಧಾನಿ ಅವರನ್ನು ಭೇಟಿಯಾದರು" ಎಂದು ಪ್ರಧಾನಿ ಅವರ ಕಚೇರಿ ಶನಿವಾರ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

  ಇದಕ್ಕೂ ಮುನ್ನ ರಾಜ್ಯಸಭೆಗೆ ಹೊಸದಾಗಿ ನೇಮಕಗೊಂಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಅವರೊಟ್ಟಿಗೆ ಮುಂಗಾರು ಅಧಿವೇಶನಕ್ಕೆ ಮುನ್ನ ಶುಕ್ರವಾರದಂದು ಸಮಾಲೋಚನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಚೀನಾ- ಭಾರತ ಗಡಿ ಸಮಸ್ಯೆಯ ಕುರಿತು ಮಾಜಿ ರಕ್ಷಣಾ ಸಚಿವರಾಗಿದ್ದ ಶರದ್​ ಪವಾರ್ ಅವರಿಗೆ ಪ್ರಸ್ತುತ ರಕ್ಷಣಾ ಸಚಿವರು ಇದೇ ವೇಳೆ ಮಾಹಿತಿ ನೀಡಿದರು. ಅಧಿವೇಶನ ಪ್ರಾರಂಭವಾಗುವ ಮೊದಲು ಗೋಯಲ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಸರ್ಕಾರದ ನೀತಿ, ನಿಲುವು ಸೇರಿದಂತೆ ಇತರೇ ವಿಷಯಗಳ ಕುರಿತು ಮಾಹಿತಿ ನೀಡಿದರು ಎಂದು ಹೇಳಲಾಗಿದೆ.

  ಈ ದೇಶಕಂಡ ಅತ್ಯಂತ ಬುದ್ದಿವಂತ ರಾಜಕಾರಣಿಗಳಲ್ಲಿ ಶರದ್​ ಪವಾರ್​ ಕೂಡ ಒಬ್ಬರು. 80 ವರ್ಷದ ಈ ಹಿರಿಯ ಮುತ್ಸದಿ ತನ್ನ ಅತ್ಯಂತ ಚಾಣಾಕ್ಷ ನಡೆಗಳಿಂದ ಹೆಸರು ಮಾಡಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್​-ಎನ್​ಸಿಪಿ ಸೇರಿ ’’ಮಹಾ ವಿಕಾಸ್​ ಅಗಾಡಿ’’ ಹೆಸರಿನಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದು ಇದರ ಮುಖ್ಯ ರುವಾರಿ ಎಂದು ಶರದ್​ ಪವಾರ್​ ಅವರನ್ನು ಹೇಳಬಹುದು. ಪ್ರತಿ ನಡೆಯಲ್ಲೂ ಚಾಣಾಕ್ಷ ನೀತಿ ಅನುಸರಿಸುವ ಇವರು ಈಗಿನಿಂದಲೇ ಮುಂಬರುವ ಲೋಕಾಸಭಾ ಚುನಾವಣೆಗೆ ಮುಖ್ಯ ಭೂಮಿಕೆಯನ್ನು ಸಿದ್ದಪಡಿಸುತ್ತಿದ್ದಾರೆ. ಬಿಜೆಪಿ ವಿರೋಧಿ ಬಣದಲ್ಲಿ ಮೊದಲು ಕೇಳಿ ಬರುವ ಹೆಸರು ಎಂದರೇ ಅದು ಶರದ್​ ಪವಾರ್​ ಎನ್ನುವಷ್ಟರ ಮಟ್ಟಿಗೆ ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ.

  ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಶಿವಸೇನೆ ಮತ್ತು ಎನ್‌ಸಿಪಿ ಬಗ್ಗೆ ಆಗಾಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುವುದು ಸಾಮಾನ್ಯವಾಗಿದೆ, ಯಾವುದಾದರೂ ವಿಷಯದ ಬಗ್ಗೆ ಮೈತ್ರಿ ಪಕ್ಷಗಳು ಆಗಾಗ್ಗೆ ಜಗಳವಾಡುವುದು  ಮುನ್ನೆಲೆಗೆ ಬಂದಿದೆ. ಆದರೆ 80 ವರ್ಷದ ಅನುಭವಿ ಎಲ್ಲಾ ಪಕ್ಷಗಳ ನಾಯಕರುಗಳ ಜೊತೆ ಅತ್ಯಂತ ಉತ್ತಮ ಭಾಂದವ್ಯಗಳನ್ನು ಇಟ್ಟುಕೊಂಡಿರುವುದು ಸೋಜಿಗದ ವಿಚಾರ ಎಂಬುದು ರಾಜಕೀಯ ಲೆಕ್ಕಾಚಾರದ ಪಂಡಿತರ ವಿಶ್ಲೇಷಣೆ.

  ಈ ಹಿರಿಯ ನಾಯಕ ಇತ್ತೀಚೆಗೆ ಆಗಾಗ್ಗೆ ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಜೊತೆ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಹಾಗೂ  ರಾಷ್ಟ್ರಪತಿ ಹುದ್ದೆಗೆ ಶರದ್​ ಪವಾರ್​ ಸ್ಪರ್ಧಿಸುತ್ತಾರೆ ಎನ್ನುವ ಗಾಳಿಸುದ್ದಿ ಹರಿದಾಡಿತ್ತು. ಈ ಎಲ್ಲಾ ಗಾಳಿ ಸುದ್ದಿಗಳನ್ನು ಕಳೆದ ವಾರ ಹಿರಿಯ ನಾಯಕ ಅಲ್ಲಗಳೆದಿದ್ದರು.

  ಇದನ್ನೂ ಓದಿ:  UPSC: ಯುಪಿಎಸ್​ಸಿ ಸಂದರ್ಶನದಲ್ಲಿ ಜಾತಿ ತಾರತಮ್ಯ: ಆಯೋಗಕ್ಕೆ ಪತ್ರ ಬರೆದ ಎಎಪಿ ಸಚಿವ

  ಈಗ ಈ ಹಿರಿಯ ನಾಯಕನ ತಲೆಯಲ್ಲಿ ಓಡುತ್ತಿರುವುದು 2024ರಲ್ಲಿ ಬರುವ ಲೋಕಸಭಾ ಚುನಾವಣೆ ಮಾತ್ರ ಎಂಬುದು ಇವರ ಅನೇಕ ನಡೆಗಳಿಂದ ಸಾಭೀತಾಗುತ್ತಲಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: