ಮುಂಬೈ(ಫೆ.17): ಆದಾಯ ತೆರಿಗೆ ಇಲಾಖೆಯು (Income Tax Department) ದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿಗಳಲ್ಲಿ (BBC Offices) ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 'ಸರ್ವೇ ಕಾರ್ಯಾಚರಣೆ' ಆರಂಭಿಸಿದ್ದು, ಗುರುವಾರ ಸತತ ಮೂರನೇ ದಿನವೂ ಮುಂದುವರಿದಿತ್ತು. ಈ ಸಮಯದಲ್ಲಿ, ಅಧಿಕಾರಿಗಳು ಆಯ್ದ ಉದ್ಯೋಗಿಗಳ ಹಣಕಾಸಿನ ಡೇಟಾವನ್ನು (Data) ಸಂಗ್ರಹಿಸಿದರು ಮತ್ತು ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಕಾಗದದ ಡೇಟಾದ ಪ್ರತಿಗಳನ್ನು ಮಾಡಿದರು.
ತೆರಿಗೆ ವಂಚನೆ ಆರೋಪದ ತನಿಖೆಯ ಭಾಗವಾಗಿ ದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿಗಳಲ್ಲಿ ಇಲಾಖೆ ಈ 'ಸರ್ವೇ ಕಾರ್ಯಾಚರಣೆ' ಆರಂಭಿಸಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಸಿ ಅಂಗಸಂಸ್ಥೆಗಳ ಅಂತರರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತನಿಖೆ ಮಾಡಲು ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Anil K Antony Resigns: ಬಿಬಿಸಿ ವಿವಾದದ ಬೆನ್ನಲ್ಲೇ ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್!
ಸಮೀಕ್ಷಾ ತಂಡಗಳು ಹಣಕಾಸು ವಹಿವಾಟು, ಕಂಪನಿ ರಚನೆ ಮತ್ತು ಸುದ್ದಿ ಸಂಸ್ಥೆಯ ಇತರ ವಿವರಗಳ ಬಗ್ಗೆ ಉತ್ತರಗಳನ್ನು ಹುಡುಕುತ್ತಿವೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಎಲೆಕ್ಟ್ರಾನಿಕ್ ಸಾಧನಗಳಿಂದ ಡೇಟಾವನ್ನು ನಕಲಿಸುತ್ತಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: IT raid on BBC: ಬಿಬಿಸಿಗೆ ಆದಾಯ ತೆರಿಗೆ ಅಧಿಕಾರಿಗಳ ಶಾಕ್; ದೆಹಲಿ, ಮುಂಬೈ ಕಚೇರಿಯಲ್ಲಿ ಐಟಿ ರೇಡ್
ಬಿಬಿಸಿ ವಿರುದ್ಧದ ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಇದನ್ನು 'ರಾಜಕೀಯ ಸೇಡು' ಎಂದು ಕರೆದಿವೆ. ಈ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿಯಾದ ರಾಜಕೀಯ ಚರ್ಚೆ ಪ್ರಾರಂಭವಾಗಿದೆ. ಈ ಕ್ರಮವನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ, ಆದರೆ ಅತ್ತ ಬಜೆಪಿ ಬಿಬಿಸಿ ಭಾರತದ ವಿರುದ್ಧ ವಿಷಕಾರಿ ವರದಿ ಮಾಡಿದೆ ಎಂದು ಆರೋಪಿಸಿದೆ.
ಏತನ್ಮಧ್ಯೆ, ಆದಾಯ ತೆರಿಗೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಬಿಬಿಸಿ ಹೇಳಿದೆ. ಅದೇ ಸಮಯದಲ್ಲಿ, ದೆಹಲಿಯ ಬಿಬಿಸಿ ಉದ್ಯೋಗಿಯೊಬ್ಬರು ತಾವು ಸಾಮಾನ್ಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇನ್ನು ಈ ಸಮೀಕ್ಷೆ ಬಗ್ಗೆ ಆದಾಯ ತೆರಿಗೆ ಇಲಾಖೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಬಿಬಿಸಿ ಹೇಳಿದೆ.
ಸಾಕ್ಷ್ಯಚಿತ್ರ ಪ್ರಸಾರ
ಕೆಲ ದಿನಗಳ ಹಿಂದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಎರಡು ಭಾಗಗಳ 'ಇಂಡಿಯಾ: ದಿ ಮೋದಿ ಕ್ವಶ್ಚನ್' ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ಬ್ರಿಟನ್‌ನಲ್ಲಿ ಪ್ರಸಾರ ಮಾಡಿತ್ತು. ಅಲ್ಲದೇ ಭಾರತದಲ್ಲಿ ಬಿಬಿಸಿಯ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ವಾರ ವಜಾಗೊಳಿಸಿತ್ತು. ಇದಾದ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದೆ ಎಂಬುವುದು ಉಲ್ಲೇಖನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ