ಆರ್​ಟಿಐ ಮಾಹಿತಿ: 3 ವರ್ಷದಲ್ಲಿ 416 ದೊಡ್ಡ ಸಾಲಗಾರರಿಂದಾಗಿ ವಿವಿಧ ಬ್ಯಾಂಕುಗಳಿಗೆ ಆದ ನಷ್ಟ 1.76 ಲಕ್ಷ ಕೋಟಿ

ಇತ್ತ ಬ್ಯಾಂಕ್​​ಗಳು ನೀಡಿದ ಸಾಲ ರೀಕವರ್​​ ಮಾಡುತ್ತೇವೆ ಎನ್ನುತ್ತಿದ್ದಾರೆಯೇ ಹೊರತು, ಇಲ್ಲಿಯವರೆಗೂ ನ್ಯೂಸ್​​-18ಗೆ ಸಿಕ್ಕ ಮಾಹಿತಿ ಪ್ರಕಾರ ಕನಿಷ್ಠ ಶೇ.15ರಿಂದ 20ರವರೆಗೂ ರೀಕವರ್​​ ಮಾಡಿಲ್ಲ.

news18
Updated:October 10, 2019, 5:25 PM IST
ಆರ್​ಟಿಐ ಮಾಹಿತಿ: 3 ವರ್ಷದಲ್ಲಿ 416 ದೊಡ್ಡ ಸಾಲಗಾರರಿಂದಾಗಿ ವಿವಿಧ ಬ್ಯಾಂಕುಗಳಿಗೆ ಆದ ನಷ್ಟ 1.76 ಲಕ್ಷ ಕೋಟಿ
ಸಾಂದರ್ಭಿಕ ಚಿತ್ರ
  • News18
  • Last Updated: October 10, 2019, 5:25 PM IST
  • Share this:
ನವದೆಹಲಿ(ಅ. 10): ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಬ್ಯಾಂಕುಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ನೂರಕ್ಕೂ ಹೆಚ್ಚು ಕೋಟಿ ಸಾಲ ಮಾಡಿ ಮರುಪಾವತಿ ಮಾಡದೇ ಬಿಟ್ಟವರ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ ಇಂಥ ವಿಶೇಷ ಸಾಲಗಾರರ ಪ್ರಮಾಣ 416 ಇದೆ. ಇದೇ ಅವಧಿಯಲ್ಲಿ ಇವರು ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಹಣದ ಪ್ರಮಾಣ ಬರೋಬ್ಬರಿ 1.76 ಲಕ್ಷ ಕೋಟಿ. ವಾಣಿಜ್ಯ ಬ್ಯಾಂಕುಗಳು ಇಷ್ಟು ಹಣವನ್ನು ಕೆಟ್ಟ ಸಾಲಗಳೆಂದು ಹೇಳಿ ಕೈಬಿಟ್ಟಿವೆ. ಅಂದರೆ, ಮೂರು ವರ್ಷದಲ್ಲಿ 416 ವಿಶೇಷ ಸಾಲಗಾರರಿಂದಾಗಿ ಬ್ಯಾಂಕುಗಳಿಗೆ ಆದ ನಷ್ಟ 1.76 ಲಕ್ಷ ಕೋಟಿ ರೂಪಾಯಿ ಆಗಿದೆ. ಅಂದರೆ, ಸರಾಸರಿ ಲೆಕ್ಕಾಚಾರದಲ್ಲಿ ಒಬ್ಬ ವಿಶೇಷ ಸಾಲಗಾರನಿಂದ ಆದ ನಷ್ಟ 424 ಕೋಟಿ ರೂ ಆಗುತ್ತದೆ. ನ್ಯೂಸ್18 ವಾಹಿನಿ ಪಡೆದ ವಿವಿಧ ಆರ್​ಟಿಐ ಅರ್ಜಿಗಳಿಂದ ಬಂದಿರುವ ಮಾಹಿತಿ ಇದಾಗಿದೆ.

ನಿಖರವಾಗಿ ಎಷ್ಟು ಸಾಲಗಳನ್ನ ರೈಟ್ ಆಫ್ ಮಾಡಿವೆ ಎಂದು ಸ್ಪಷ್ಟವಾಗಿ ತಿಳಿಸುವಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೂ ಆರ್​ಬಿಐ ನಿರ್ದೇಶನ ನೀಡಿತ್ತು. ಈ ಅಂಕಿ ಅಂಶವನ್ನೇ ನ್ಯೂಸ್18 ವಾಹಿನಿ ಆರ್​ಟಿಐ ಅರ್ಜಿಗಳ ಮೂಲಕ ಪಡೆದುಕೊಂಡಿದ್ದು. 2014ರಿಂದೀಚೆ ಸರ್ಕಾರಿ ಬ್ಯಾಂಕು ಹಾಗೂ ಖಾಸಗಿ ಬ್ಯಾಂಕುಗಳು ಕೈಬಿಟ್ಟ ಕೆಟ್ಟ ಸಾಲದ ಪ್ರಮಾಣದಲ್ಲಿ ಸತತ ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿದೆ. 2015ರಿಂದ 2018ರವರೆಗೆ ಮೂರು ವರ್ಷದಲ್ಲಿ ವಾಣಿಜ್ಯ ಬ್ಯಾಂಕುಗಳು 2.17 ಲಕ್ಷ ಕೋಟಿಯಷ್ಟು ಮೊತ್ತವನ್ನು ಕೆಟ್ಟ ಸಾಲವೆಂದು ಪರಿಗಣಿಸಿ ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ.

2008ಕ್ಕೂ ಮೊದಲು 18 ಲಕ್ಷ ಕೋಟಿಯಷ್ಟು ಲೋನ್​ ಇತ್ತು. ಆದರೆ 2008 ರಿಂದ 2014ರ ಬಳಿಕ ಇದು 55 ಲಕ್ಷ ಕೋಟಿಗೆ ತಲುಪಿತು. 2008ರಿಂದ 2014ರವರೆಗಿನ ಅವಧಿಯಲ್ಲಿ ಇದು ಅರ್ಥ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿತ್ತು. ಎನ್​ಪಿಎ, ಅಂದರೆ ಕೆಟ್ಟ ಸಾಲಗಳ ಮೊತ್ತ 2.5 ಲಕ್ಷ ಕೋಟಿ ಎಂದು ಯುಪಿಎ ಸರ್ಕಾರ ಹೇಳಿತ್ತು. ವಾಸ್ತವವಾಗಿ ಅದು 8.5 ಲಕ್ಷ ಕೋಟಿ ಕೆಟ್ಟ ಸಾಲವಿತ್ತೆಂಬ ಅಂದಾಜಿದೆ. ಯುಪಿಎ ಸರ್ಕಾರದ ಅವಧಿಯಲ್ಲಾದ ಕರ್ಮದ ಫಲವು 2015ರಲ್ಲಿ ಕಾಣಿಸಲಾರಂಭಿಸಿತು ಎಂದು ಕಳೆದ ವರ್ಷ ದಿವಂಗತ ಅರುಣ್ ಜೇಟ್ಲಿ ವಿಶ್ಲೇಷಿಸಿದ್ದರು.

ಆದರೆ, 2014ರ ಸೆಪ್ಟೆಂಬರ್​​ಗಿಂತ ಮುಂಚೆ ನೂರಕ್ಕೂ ಹೆಚ್ಚು ಕೋಟಿ ಮೊತ್ತದ ದೊಡ್ಡ ಸಾಲಗಳನ್ನು ರೈಟ್ ಆಫ್ ಮಾಡಿದ ಪ್ರಮಾಣ ಎಷ್ಟು ಎಂಬ ಅಂಕಿ ಅಂಶ ತಿಳಿದುಕೊಳ್ಳಲು ನ್ಯೂಸ್18 ವಾಹಿನಿ ಸಲ್ಲಿಸಿದ ಆರ್​ಟಿಐ ಅರ್ಜಿಗೆ ಉತ್ತರ ಸಿಕ್ಕಿಲ್ಲ. ಇದರ ಮಾಹಿತಿ ಸಿಕ್ಕಿದರೆ ಯುಪಿಎ ಸರ್ಕಾರದ ಅವಧಿಯಲ್ಲಾಗಿದ್ದ ಕೆಟ್ಟ ಸಾಲಗಳ ಚಿತ್ರಣ ಸ್ಪಷ್ಟವಾಗಿರುತ್ತಿತ್ತು.

ಇದನ್ನೂ ಓದಿ: ನೋಟ್ ಬ್ಯಾನ್ ಆದ ನಂತರ 50 ಲಕ್ಷ ಜನರಿಗೆ ಉದ್ಯೋಗ ನಷ್ಟ: ಶಾಕ್ ಕೊಟ್ಟಿದೆ ವರದಿ

2015ರಲ್ಲಿ 109 ದೊಡ್ಡ ಸಾಲಗಾರರ 40,798 ಸಾಲವನ್ನು ರೈಟ್ ಆಫ್ ಮಾಡಲಾಗಿತ್ತು. ಮುಂದಿನ ಒಂದು ವರ್ಷದಲ್ಲಿ ದೊಡ್ಡ ಸಾಲಗಾರರ  ಪ್ರಮಾಣ 199ಕ್ಕೆ ಏರಿತು. ಇವರು ಮಾಡಿದ ಅನುತ್ಪಾದಕ ಸಾಲ 69,976 ಕೋಟಿಗೆ ಏರಿತು. ಆಗ ನೋಟ್ ಬ್ಯಾನ್ ಆಯಿತು. ಅದಾಗಿ ಮುಂದಿನ ಎರಡು ವರ್ಷದಲ್ಲಿ ತೀರಾ ಮೇಲ್ಮುಖವಾಗಿ ಕೆಟ್ಟ ಸಾಲಗಳ ಪ್ರಮಾಣ ಹೆಚ್ಚಾದವು. ಈ ಅವಧಿಯಲ್ಲಿ 343 ದೊಡ್ಡ ಸಾಲಗಾರರಿಂದ ಬರೋಬ್ಬರಿ 1.27 ಲಕ್ಷ ಕೋಟಿ ರೂ ಕೆಟ್ಟ ಸಾಲ ಸೃಷ್ಟಿಯಾಗಿದ್ದವು.

2018ರಲ್ಲಿ ಅನುತ್ಪಾದಕ ಸಾಲದ ಪ್ರಮಾಣ 2.17 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚೂಕಡಿಮೆ 90 ಸಾವಿರ ಕೋಟಿಯಷ್ಟು ಹೆಚ್ಚು ಕೆಟ್ಟ ಸಾಲಗಳು ಸೃಷ್ಟಿಯಾಗಿವೆ. ಇವೆಲ್ಲ ಮಾಹಿತಿಯು ಆರ್​ಟಿಐ ಅರ್ಜಿಯಿಂದ ಸಿಕ್ಕಿದೆ.ಇತ್ತ ಬ್ಯಾಂಕ್​​ಗಳು ನೀಡಿದ ಸಾಲ ರೀಕವರ್​​ ಮಾಡುತ್ತೇವೆ ಎನ್ನುತ್ತಿದ್ದಾರೆಯೇ ಹೊರತು, ಇಲ್ಲಿಯವರೆಗೂ ನ್ಯೂಸ್​​-18ಗೆ ಸಿಕ್ಕ ಮಾಹಿತಿ ಪ್ರಕಾರ ಕನಿಷ್ಠ ಶೇ.15ರಿಂದ 20ರವರೆಗೂ ರೀಕವರ್​​ ಮಾಡಿಲ್ಲ.

ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಮಾಡಿದ ನೋಟು ರದ್ದು ಮತ್ತು ಜಿ.ಎಸ್.ಟಿ. ದೇಶವನ್ನೂ ಕಾಡತೊಡಗಿದೆ. ಅದಾಗಲೇ ಚಾಲ್ತಿಯಲ್ಲಿದ್ದ ಆರ್ಥಿಕ ಹಿಂಜರಿತಕ್ಕೆ ನೋಟು ರದ್ದು 'ಘನ ಕೊಡುಗೆ'ಯನ್ನು ನೀಡಿದ ಕುರಿತು ಯಾವ ಸಂಶಯವೂ ಉಳಿದಿಲ್ಲ. ಈ ಮಧ್ಯೆ ನ್ಯೂಸ್​​-18 ಬಿಚ್ಚಿಟ್ಟ ಈ ಕೆಟ್ಟ ಸಾಲ ಅಂಕಿಅಂಶವೂ ದೇಶದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಎಂದರೇ ಅತಿಶಯೋಕ್ತಿಯಾಗಲಾರದು.
-------------
First published: October 10, 2019, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading