Bank Strike Today: ಬ್ಯಾಂಕ್​ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಇಂದು ಕೂಡ ಬ್ಯಾಂಕ್ ನೌಕರರ ಮುಷ್ಕರ

Bank Strike Today: ಸರ್ಕಾರದ ಹೂಡಿಕೆ ಯೋಜನೆಯಡಿ ಎರಡು ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಮಾ. 16): ಭಾರತದ 2 ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ಕೂಡ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ನಿನ್ನೆಯೂ ಮುಷ್ಕರ ನಡೆದಿದ್ದು, ಇಂದು ಪ್ರತಿಭಟನೆ ಮುಂದುವರೆಯಲಿದೆ. ಇದರಿಂದ ಇಂದು ಎಟಿಎಂ ಹಾಗೂ ಬ್ಯಾಂಕ್‌ ಸೇವೆಗಳಲ್ಲಿ ಗ್ರಾಹಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

  ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್​ನಡಿ ಬ್ಯಾಂಕ್ ನೌಕರರು 2ನೇ ದಿನವಾದ ಇಂದು ದೇಶಾದ್ಯಂತ ಮುಷ್ಕರ ಮುಂದುವರೆಸಲಿದ್ದಾರೆ. 9 ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದ್ದು, ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಎಸ್​ಬಿಐ, ಐಸಿಐಸಿಐ, ಹೆಚ್​ಡಿಎಫ್​ಸಿ ಮತ್ತು ಆಕ್ಸಿಸ್ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ.  ಸರ್ಕಾರದ ಹೂಡಿಕೆ ಯೋಜನೆಯಡಿ ಎರಡು ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕಳೆದ ತಿಂಗಳು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಐಡಿಬಿಐ ಬ್ಯಾಂಕನ್ನು ಅದರ ಅತಿ ಹೆಚ್ಚಿನ ಪಾಲಿನ ಷೇರನ್ನು ಎಲ್​ಐಸಿಗೆ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿದೆ. ಹೀಗಾಗಿ, ಮತ್ತೆರಡು ಬ್ಯಾಂಕ್​ಗಳ ಖಾಸಗೀಕರಣಕ್ಕೆ ವಿರೋಧ ಕೇಳಿಬಂದಿದೆ.

  ನಿನ್ನೆಯೂ ಬ್ಯಾಂಕ್ ಮುಷ್ಕರ ನಡೆದಿದ್ದು, ಕೇಂದ್ರ ಸರ್ಕಾರ ಕಳೆದ 4 ವರ್ಷಗಳಲ್ಲಿ 14 ಬ್ಯಾಂಕ್​ಗಳನ್ನು ವಿಲೀನಗೊಳಿಸಿದೆ. ಇದೀಗ ಇನ್ನೂ 2 ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದು, ಗ್ರಾಹಕರು ಪರದಾಡುವಂತಾಯಿತು. ಇಂದು ಕೂಡ ಮುಷ್ಕರ ನಡೆಯಲಿದ್ದು, ಗ್ರಾಹಕರು ಸಮಸ್ಯೆ ಎದುರಿಸಬೇಕಾಗುವ ಸಾಧ್ಯತೆಯಿದೆ.
  Published by:Sushma Chakre
  First published: