Explainer: ಮಾರ್ಚ್ 15 ಮತ್ತು 16 ರಂದು ಬ್ಯಾಂಕ್ ಮುಷ್ಕರ: ಬ್ಯಾಂಕಿಂಗ್‌ ಸೇವೆಗಳ ಮೇಲೆ ಭಾರೀ ವ್ಯತ್ಯಯ?

4 ದಿನಗಳ ಕಾಲ ಚೆಕ್ ಕ್ಲಿಯರೆನ್ಸ್, ಹೊಸ ಖಾತೆಗಳ ತೆರೆಯುವಿಕೆ, ಬೇಡಿಕೆ ಕರಡುಗಳ ವಿತರಣೆ ಮತ್ತು ಸಾಲ ಸಂಸ್ಕರಣೆ ಮುಂತಾದ ಬ್ಯಾಂಕಿಂಗ್‌ ಸೇವೆಗಳ ಮೇಲೆ ಮಾರ್ಚ್ 17 ರವರೆಗೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಾರ್ಚ್ 15 ಮತ್ತು 16 ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರ ನಡೆಸಲು ಹಲವು ಯೂನಿಯನ್‌ಗಳು ಮುಂದಾಗಿವೆ. ದೇಶದಲ್ಲಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಒಂದು ಕ್ರಮದಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಳೆಯ ತಲೆಮಾರಿನ ಖಾಸಗಿ ಬ್ಯಾಂಕುಗಳ ಸುಮಾರು 10 ಲಕ್ಷ ಉದ್ಯೋಗಿಗಳು ಮಾರ್ಚ್ 15 ಮತ್ತು 16 ರಂದು ಮುಷ್ಕರ ನಡೆಸಲಿದ್ದಾರೆ.


    ಬ್ಯಾಂಕ್ ನೌಕರರು ಏಕೆ ಮುಷ್ಕರ ಮಾಡುತ್ತಿದ್ದಾರೆ?

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2021 - 22 ರ ಕೇಂದ್ರ ಬಜೆಟ್‌ ಮಂಡನೆ ವೇಳೆ, 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಐಡಿಬಿಐ ಬ್ಯಾಂಕ್ ಹೊರತುಪಡಿಸಿ, 2021-22ರಲ್ಲಿ ಎರಡು ಪಿಎಸ್‌ಯು ಬ್ಯಾಂಕುಗಳು ಮತ್ತು ಒಂದು ಜನರಲ್‌ ಇನ್ಶೂರೆನ್ಸ್‌ ಕಂಪನಿಯ ಖಾಸಗೀಕರಣ ಮಾಡಲು ಸರ್ಕಾರ ಪ್ರಸ್ತಾಪಿಸಿದೆ. ಈ ಹಿನ್ನೆಲೆ 9 ಬ್ಯಾಂಕ್‌ ಒಕ್ಕೂಟಗಳ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಈ ನಿರ್ಧಾರದ ವಿರುದ್ಧ ಮಾರ್ಚ್ 15 ಮತ್ತು 16 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.


    ಮುಷ್ಕರದಿಂದ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿ..?

    ಮಾರ್ಚ್ 15 ಮತ್ತು 16 ರಂದು ದೇಶವ್ಯಾಪಿ ಮುಷ್ಕರ ಇದ್ದರೆ. ಅದಕ್ಕೂ ಮುನ್ನ, ಮಾರ್ಚ್ 13 ರಂದು - ಎರಡನೇ ಶನಿವಾರ - ಮತ್ತು ಮಾರ್ಚ್ 14, ಭಾನುವಾರ ಆದ್ದರಿಂದ ಬ್ಯಾಂಕ್‌ಗೆ ರಜೆ ಇರುತ್ತದೆ. ಈ ಹಿನ್ನೆಲೆ ಸಂಕ್ಷಿಪ್ತವಾಗಿ, ಬ್ಯಾಂಕಿಂಗ್ ಸೇವೆಗಳು ನಾಲ್ಕು ದಿನಗಳವರೆಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೂ, ಈ ನಾಲ್ಕು ದಿನಗಳಲ್ಲಿ ಎಟಿಎಂಗಳು ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.


    ಇನ್ನು, 4 ದಿನಗಳ ಕಾಲ ಚೆಕ್ ಕ್ಲಿಯರೆನ್ಸ್, ಹೊಸ ಖಾತೆಗಳ ತೆರೆಯುವಿಕೆ, ಬೇಡಿಕೆ ಕರಡುಗಳ ವಿತರಣೆ ಮತ್ತು ಸಾಲ ಸಂಸ್ಕರಣೆ ಮುಂತಾದ ಬ್ಯಾಂಕಿಂಗ್‌ ಸೇವೆಗಳ ಮೇಲೆ ಮಾರ್ಚ್ 17 ರವರೆಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ಎಲ್ಲಾ ಶಾಖೆಗಳು ಮತ್ತು ಕಚೇರಿಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಗೆ ಬ್ಯಾಂಕ್ ವ್ಯವಸ್ಥೆ ಮಾಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದ್ದರೂ, ಮುಷ್ಕರದಿಂದ ಕಾರ್ಯನಿರ್ವಹಣೆ ಮೇಲೆ ಪ್ರಭಾವ ಬೀರಬಹುದು ಎಂದೂ ಹೇಳಿದೆ.




    ಖಾಸಗಿ ಬ್ಯಾಂಕ್ ಉದ್ಯೋಗಿಗಳೂ ಮುಷ್ಕರದಲ್ಲಿ ಭಾಗಿ..?

    ಖಾಸಗಿ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಆದರೆ, ಒಟ್ಟಾರೆ ಬ್ಯಾಂಕಿಂಗ್ ಸೇವೆಗಳಲ್ಲಿ ಈ ಖಾಸಗಿ ಬ್ಯಾಂಕ್‌ಗಳ ಪಾತ್ರ ಮೂರನೇ ಒಂದು ಭಾಗದಷ್ಟು ಮಾತ್ರ.


    ಸರ್ಕಾರ ಮತ್ತು ಒಕ್ಕೂಟಗಳ ನಡುವೆ ಮಾತುಕತೆ ನಡೆದಿದೆಯೇ?

    ಹೆಚ್ಚುವರಿ ಮುಖ್ಯ ಕಾರ್ಮಿಕ ಆಯುಕ್ತ ಎಸ್‌ಸಿ ಜೋಶಿ ಮಾರ್ಚ್ 4, 9 ಮತ್ತು 10 ರಂದು ಸರ್ಕಾರ ಮತ್ತು ಒಕ್ಕೂಟಗಳ ನಡುವೆ ರಾಜಿ ಸಂಧಾನ ಸಭೆ ನಡೆಸಿದ್ದಾರೆ ಎಂದು ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ತಿಳಿಸಿದೆ. "ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಲು ಸರ್ಕಾರ ಒಪ್ಪಿದರೆ ಮುಷ್ಕರವನ್ನು ಮರುಪರಿಶೀಲಿಸಲು ನಾವು ಒಕ್ಕೂಟಗಳಿಂದ ಮುಂದಾಗಿದ್ದೇವೆ. ಆದರೆ, ಹಣಕಾಸು ಸಚಿವಾಲಯದ ಪ್ರತಿನಿಧಿ ಅಂತಹ ಯಾವುದೇ ಬದ್ಧತೆಯನ್ನು ನೀಡಲಿಲ್ಲ. ಈ ಹಿನ್ನೆಲೆ ರಾಜಿ ಸಭೆ ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಲಿಲ್ಲ. ಆದ್ದರಿಂದ ಮಾರ್ಚ್ 15 ಮತ್ತು 16 ರಂದು ಸತತ ಎರಡು ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ, ” ಎಂದು ಎಐಬಿಇಎ ತಿಳಿಸಿದೆ.





    ಮುಷ್ಕರಕ್ಕೆ ಬೆಂಬಲಿಸುವ ಸಂಘಟನೆಗಳು ಯಾವುವು..?

    ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (NCBE), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA), ಬ್ಯಾಂಕ್ ನೌಕರರ ಒಕ್ಕೂಟ (BEFI), ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ (INBEF), ಕೆನರಾ ಬ್ಯಾಂಕ್ ನೌಕರರ ಕಾಂಗ್ರೆಸ್ ಫೆಡರೇಷನ್‌, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (INBOC), ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (NOBW), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (NOBO), ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AINBOF) ಸೇರಿ ಹಲವು ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿವೆ.


    Published by:Latha CG
    First published: