39ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿದ ಬೆಂಗಳೂರಿನ ಟೆಕ್ಕಿ: ಲೆಫ್ಟಿನೆಂಟ್​ ಸತೀಶ್​ ಪಯಣದ ಕತೆ ಹೀಗಿದೆ​

Indian Army: ಒಬ್ಬ ವ್ಯಕ್ತಿ ತನ್ನ 30ನೇ ವಯಸ್ಸನ್ನು ತಲುಪಿದ ನಂತರ ಜೀವನದಲ್ಲಿ ನೆಲೆಗೊಳ್ಳಲು ಪ್ರಾರಂಭಿಸಬೇಕು ಎಂದು ಸಮಾಜದ ಬಹುಪಾಲು ಮಂದಿ ನಂಬುತ್ತಿದ್ದರೆ, ಸತೀಶ್ ಕುಮಾರ್ ತನ್ನ 39ನೇ ವಯಸ್ಸಿನಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಬದುಕಿನ ಹೊಸ ಮಜಲಿಗೆ ಕಾಲಿಟ್ಟಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಕನಸುಗಳಿಗೆ ಯಾವುದೇ ಎಕ್ಸ್‌ಪೈರಿ ಡೇಟ್‌ ಇಲ್ಲ ಎಂದು ಹಲವರು ಹೇಳುತ್ತಾರೆ. ಅದೇ ರೀತಿ, ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಒಂದು ಇದಕ್ಕೆ ಸಾಕ್ಷಿಯಾಗಿದೆ. ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ವ್ಯಕ್ತಿ, ಬಹಳ ವರ್ಷದ ಕನಸನ್ನು ನನಸು ಮಾಡಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ಸ್ಪೂರ್ದಿದಾಯಕ ಪಯಣ. 


  ಒಬ್ಬ ವ್ಯಕ್ತಿ ತನ್ನ 30ನೇ ವಯಸ್ಸನ್ನು ತಲುಪಿದ ನಂತರ ಜೀವನದಲ್ಲಿ ನೆಲೆಗೊಳ್ಳಲು ಪ್ರಾರಂಭಿಸಬೇಕು ಎಂದು ಸಮಾಜದ ಬಹುಪಾಲು ಮಂದಿ ನಂಬುತ್ತಿದ್ದರೆ, ಸತೀಶ್ ಕುಮಾರ್ ತನ್ನ 39ನೇ ವಯಸ್ಸಿನಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಬದುಕಿನ ಹೊಸ ಮಜಲಿಗೆ ಕಾಲಿಟ್ಟಿದ್ದಾರೆ. ಅವರ ಲಿಂಕ್ಡ್‌ಇನ್‌ ಪೋಸ್ಟ್‌ ಈಗ ಸಾಕಷ್ಟು ವೈರಲ್‌ ಆಗಿದೆ. ಅವರ ಈ ಉದಾಹರಣೆಯು ಸೈನ್ಯದ ಭಾಗವಾಗಲು ಬಯಸಿ, ಆದರೆ ವಿವಿಧ ಕಾರಣಗಳಿಗಾಗಿ ಅದನ್ನು ಮಾಡಲು ಸಾಧ್ಯವಾಗದ ಅನೇಕರಿಗೆ ಸ್ಫೂರ್ತಿಯಾಗುತ್ತದೆ.


  "ಸಹ ಸಂದರ್ಶಕರನ್ನು ಸುತ್ತಲೂ ನೋಡಿದಾಗ, ಅವರಲ್ಲಿ ಬಹುತೇಕರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು ಮತ್ತು ಅಲ್ಲಿ ನಾನು 37 ವರ್ಷ ವಯಸ್ಸಿನವನಾಗಿದ್ದೆ. ಸಂದರ್ಶನವು ಕೇವಲ ಔಪಚಾರಿಕವಾಗಿದೆಯೇ ಮತ್ತು ನನ್ನ ವಯಸ್ಸಿನ ಆಧಾರದ ಮೇಲೆ ನನ್ನನ್ನು ತಿರಸ್ಕರಿಸಲಾಗುತ್ತದೆಯೇ ಎಂದು ಸ್ವಯಂ ಅನುಮಾನ ನನ್ನಲ್ಲಿ ಹರಿದಾಡಲು ಪ್ರಾರಂಭಿಸಿತು,'' ಎಂದು ಅವರು ಈ ಪೋಸ್ಟ್‌ನಲ್ಲಿ ಬರೆದಿದ್ದಾರೆ.


  ಅವರು ಬರೆದಿರುವ ಸಂಪೂರ್ಣ ಪೋಸ್ಟ್‌ ಅನ್ನು ಇಲ್ಲಿ ಹುಡುಕಿ:


  https://www.linkedin.com/pulse/how-i-became-army-officer-39-years-sathish-kumar/

  ಅವರ ಈ ಪೋಸ್ಟ್‌ನಿಂದ ಪ್ರಮುಖ ಭಾಗಗಳನ್ನು ಈ ಕೆಳಗೆ ಆಯ್ದುಕೊಳ್ಳಲಾಗಿದೆ..
  ಲಿಖಿತ ಪರೀಕ್ಷೆ: ತಲಾ ಎರಡು ಗಂಟೆಗಳ ಎರಡು ಪೇಪರ್‌ ಇರುತ್ತದೆ. ಈ ಪರೀಕ್ಷೆಯು ಗಣಿತ, ಸಾಮಾನ್ಯ ಜ್ಞಾನ, ಲಾಜಿಕಲ್‌ ರೀಸನಿಂಗ್ ಮತ್ತು ಇಂಗ್ಲಿಷ್‌ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ.

  ಸಂದರ್ಶನ:ಮೇಜರ್ ಜನರಲ್ ದರ್ಜೆಯ ಅಧಿಕಾರಿ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಇಬ್ಬರು ಅಧಿಕಾರಿಗಳು ಮತ್ತು ಮನಶ್ಶಾಸ್ತ್ರಜ್ಞರ ನೇತೃತ್ವದ ಸಂದರ್ಶನ ಸಮಿತಿಯು ಕೆಲವು ಪ್ರಮಾಣಿತ ಪ್ರಶ್ನೆಗಳಿಗೆ ಪ್ರತಿ ಅರ್ಜಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ-

  ನಾನು ಪ್ರಾದೇಶಿಕ ಸೇನೆಗೆ ಏಕೆ ಸೇರಲು ಬಯಸಿದ್ದೆ..?
  ಪ್ರಾದೇಶಿಕ ಸೈನ್ಯದಲ್ಲಿ ಅಧಿಕಾರಿಯಾಗುವುದರಿಂದ ನಾನು ಏನನ್ನು ಗಳಿಸಲು ಆಶಿಸಿದ್ದೆ..?
  ಕಾರ್ಪೊರೇಟ್‌ನಲ್ಲಿ ನನ್ನ ಪ್ರಸ್ತುತ ಅನುಭವವನ್ನು ನಾನು ಹೇಗೆ ಬಳಸಿಕೊಳ್ಳಬಹುದು ಮತ್ತು ಸೇನೆಗೆ ಕೊಡುಗೆ ನೀಡಬಹುದು..?


  ಈ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.


  ಸರ್ವೀಸಸ್‌ ಸೆಲೆಕ್ಷನ್‌ ಬೋರ್ಡ್‌ (SSB):
  ಸಂದರ್ಶನದ ನಂತರ, 2079 ಅಭ್ಯರ್ಥಿಗಳಿಂದ 816 ಜನರನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಮತ್ತೆ 200 ಜನರ ಬ್ಯಾಚ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಬ್ಯಾಚ್‌ಗೆ SSBಗಾಗಿ ಬೇರೆ ಬೇರೆ ರಿಪೋರ್ಟಿಂಗ್‌ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ದಿನ -1 ರಂದು 21-SSB ಭೋಪಾಲ್‌ನಲ್ಲಿ 172 ಅಭ್ಯರ್ಥಿಗಳು ರಿಪೋರ್ಟಿಂಗ್‌ ಮಾಡಿಕೊಂಡಿದ್ದರು. 6 ದೀರ್ಘ ಗಂಟೆಗಳ ಮತ್ತು ಒಂದು ಸ್ಕ್ರೀನಿಂಗ್ ಪರೀಕ್ಷೆಯ ನಂತರ, ಕೇವಲ 16 ಮಂದಿಯನ್ನು ಆಯ್ಕೆ ಮಾಡಿದರು. ಮುಂದಿನ ನಾಲ್ಕು ದಿನಗಳಲ್ಲಿ, ಮೌಲ್ಯಮಾಪಕರು ನಮ್ಮೆಲ್ಲರ ನಾಯಕತ್ವ, ತಂಡದ ಕೆಲಸ ಮತ್ತು ತರ್ಕಬದ್ಧ ಚಿಂತನೆಯ ಮೇಲೆ ಪರಿಸ್ಥಿತಿ ಪ್ರತಿಕ್ರಿಯೆ, ಗುಂಪು ಅಡೆತಡೆಗಳು ಮತ್ತು ವೈಯಕ್ತಿಕ ಸಂದರ್ಶನಗಳ ವಿವಿಧ ಪರೀಕ್ಷೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡಿದರು. ಎಸ್‌ಎಸ್‌ಬಿ ಒಂದು ಜೀವಮಾನದ ಅನುಭವವಾಗಿದ್ದು, ಅದರಲ್ಲಿ ಕಲಿಕಾ ಅವಧಿಯನ್ನು ಐದು ಕಠಿಣ ದಿನಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಕೆಲವೇ ಕೆಲವರಿಗೆ ಮಾತ್ರ ಇದನ್ನು ಶಿಫಾರಸು ಮಾಡಲಾಗುತ್ತದೆ.


  ಹಿನ್ನೆಡೆ:
  SSBಯ ಐದನೇ ದಿನ ಸಮ್ಮೇಳನದ ಕೊನೆಯಲ್ಲಿ 16 ಜನರಲ್ಲಿ ನಾಲ್ವರನ್ನು ಮಾತ್ರ ಶಿಫಾರಸು ಮಾಡಲಾಯಿತು. ಸೇನಾ ವೈದ್ಯರು ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡಲು ಕಠಿಣ ಮಾರ್ಗಸೂಚಿಗಳನ್ನು ಹೊಂದಿದ್ದಾರೆ ಮತ್ತು ನಮ್ಮ ನಾಲ್ವರನ್ನೂ ಹಲವು ಕಾರಣಗಳಿಗಾಗಿ ತಿರಸ್ಕರಿಸಲಾಯಿತು. ಆದರೂ, ನಮ್ಮ ಆಯ್ಕೆಯ ಮಿಲಿಟರಿ ಆಸ್ಪತ್ರೆಗಳಲ್ಲಿ ನಿರಾಕರಣೆಯ ವಿರುದ್ಧ ಮೇಲ್ಮನವಿ ಮಾಡಲು ನಮಗೆ ಅವಕಾಶ ನೀಡಲಾಯಿತು. ನಾನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯನ್ನು ಆಯ್ಕೆ ಮಾಡಿ ಮತ್ತು ಸೆಪ್ಟೆಂಬರ್ 2020ರಲ್ಲಿ ವೈದ್ಯಕೀಯ ಪರೀಕ್ಷೆ ಕ್ಲಿಯರ್ ಮಾಡಿದೆ.

  ಡಾಕ್ಯುಮೆಂಟೇಷನ್‌:
  ಮುಂದಿನ ಹಂತ ಡಾಕ್ಯುಮೆಂಟೇಷನ್‌ - ಗೆಜೆಟೆಡ್ ಅಧಿಕಾರಿ ಪರಿಶೀಲನೆ, ಪೊಲೀಸ್ ಪರಿಶೀಲನೆ, ರಾಜ್ಯ ಗುಪ್ತಚರ ಇಲಾಖೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ. 4-6 ವಾರಗಳಲ್ಲಿ ಎಲ್ಲಾ ದಾಖಲಾತಿಗಳು ಪೂರ್ಣಗೊಳ್ಳುವ ಭರವಸೆಯಲ್ಲಿ, ನಾನು ಡಿಸೆಂಬರ್ 2020ರೊಳಗೆ ಅಧಿಕಾರಿಯಾಗಿ ನೇಮಕಗೊಳ್ಳಲು ಎದುರು ನೋಡುತ್ತಿದ್ದೆ.


  ಅಂತಿಮವಾಗಿ ಯಶಸ್ಸು ದೊರೆತಿದೆ:
  ನಾನು ಅಂತಿಮವಾಗಿ ಏಪ್ರಿಲ್ 2021ರಲ್ಲಿ ಕಮೀಷನಿಂಗ್ ಪತ್ರವನ್ನು ಸ್ವೀಕರಿಸಿದೆ. ಗ್ರೆನೇಡಿಯರ್ಸ್ ರೆಜಿಮೆಂಟ್‌ನ 118 ಕಾಲಾಳುಪಡೆ (TA) ಬೆಟಾಲಿಯನ್‌ಗೆ ನನ್ನನ್ನು ನಿಯೋಜಿಸಲಾಯಿತು ಎಂದು ಬರೆದುಕೊಂಡಿದ್ದಾರೆ.


  ಹೆಚ್ಚಿನ ಮಾಹಿತಿಗಾಗಿ, https://www.jointerritorialarmy.gov.in ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು: ಅವರು ಪ್ರಸ್ತುತ ಆಗಸ್ಟ್ 19 ರವರೆಗೆ ಅರ್ಜಿಗಳನ್ನು ಸ್ವೀಕರಿಸುತ್ತಿದ್ದಾರೆ.

  Published by:Sharath Sharma Kalagaru
  First published: