ಶಂಕರ್​ನಾಗ್​ ಅವರ ಮಾಲ್ಗುಡಿ ಡೇಸ್​ ಕನ್ನಡಕ್ಕೆ ತರಲು ಯತ್ನ; ಮತ್ತೆ ಹೊತ್ತಿಕೊಂಡಿದೆ ಡಬ್ಬಿಂಗ್ ಕಿಡಿ

news18
Updated:August 9, 2018, 9:24 AM IST
ಶಂಕರ್​ನಾಗ್​ ಅವರ ಮಾಲ್ಗುಡಿ ಡೇಸ್​ ಕನ್ನಡಕ್ಕೆ ತರಲು ಯತ್ನ; ಮತ್ತೆ ಹೊತ್ತಿಕೊಂಡಿದೆ ಡಬ್ಬಿಂಗ್ ಕಿಡಿ
news18
Updated: August 9, 2018, 9:24 AM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಕನ್ನಡ ಚಿತ್ರರಂಗದಲ್ಲೇ ಕ್ರಿಯಾಶೀಲತೆಯ ಚಿಲುಮೆಯಾಗಿದ್ದ ಶಂಕರ್​ನಾಗ್​ ನಮ್ಮನ್ನೆಲ್ಲ ಅಗಲಿ ದಶಕಗಳೇ ಕಳೆದಿವೆ. ಆದರೂ ಇಂದಿಗೂ ಅವರು ಮಾಡಿರುವ ಕೆಲಸಗಳು ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿವೆ. ಹೌದು ಅವರ ಕ್ರಿಯಾಶೀಲತೆಗೆ ಗುರುತಾಗಿರುವುದರಲ್ಲಿ 'ಮಾಲ್ಗುಡಿ ಡೇಸ್'​ ಧಾರಾವಾಹಿ ಸಹ ಒಂದು.

ಕನ್ನಡದ ಆಟೋರಾಜ ಶಂಕರ್​ನಾಗ್​ ಅವರು ಹಿಂದಿ ಭಾಷೆಯಲ್ಲಿ ನಿರ್ದೇಶನ ಮಾಡಿರುವ ಮಾಲ್ಗುಡಿ ಡೇಸ್​ ಅನ್ನು ಕನ್ನಡದ ಹೊರತಾಗಿ ಹಿಂದಿ, ಇಂಗ್ಲಿಷ್​, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹತೇಕ ಭಾಷೆಗಳಿಗೆ ಡಬ್​ ಮಾಡಲಾಗಿದೆ.

ಕನ್ನಡದವರೇ ನಿರ್ದೇಶಿಸಿ, ನಿರ್ಮಿಸಿ, ಅಭಿನಯಿಸಿರುವ ಮಾಲ್ಗುಡಿ ಡೇಸ್ ಧಾರಾವಾಹಿಯನ್ನುಕನ್ನಡಕ್ಕೆ ಡಬ್​ ಮಾಡಿ, ಪ್ರಸಾರ ಮಾಡಬೇಕೆಂದು ಬನವಾಸಿ ಬಳಗ ಎಂಬ ಕನ್ನಡ ಪರ ಸಂಘಟನೆಯೊಂದು ಟ್ವಿಟರ್​ ಹಾಗೂ ಫೇಸ್​ಬುಕ್​ನಲ್ಲಿ  ಎಂಬ ಅಭಿಯಾನವನ್ನು ಆರಂಭಿಸಿದೆ.

ಕನ್ನಡದಲ್ಲಿ ಡಬ್ಬಿಂಗ್ ಪರವಾಗಿ ನಡೆದ ಹೋರಾಟದಲ್ಲಿ ಗಟ್ಟಿಯಾಗಿ ಜೋಡಿಸಿಕೊಂಡಿದ್ದ ಬನವಾಸಿ ಬಳಗದ ಸದಸ್ಯರು ಇದೀಗ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಕ್ಕೆ  ಡಬ್ ಮಾಡಬೇಕೆಂಬ ಅಭಿಯಾನ ಕೈಗೊಂಡಿದ್ಧಾರೆ.

'ಸದ್ಯ ಮಾಲ್ಗುಡಿ ಡೇಸ್​ ಡಬ್ಬಿಂಗ್​ ಹಕ್ಕನ್ನು ಹೀರಾ ಲಾಲ್​ ಹೊಂದಿದ್ದು, ಅದನ್ನು ಕೊಡಲು ಅವರೂ ಸಿದ್ದರಿದ್ದಾರೆ. ಅವರಿಂದ ಯಾವುದಾದರೊಂದು ಟಿವಿಯವರು ಅದನ್ನು ಖರೀದಿಸಿ, ಡಬ್ಬಿಂಗ್​ ಮಾಡಬೆಕು. ಕನ್ನಡದವರಿಂದಲೇ ನಿರ್ಮಿಸಿ, ನಿರ್ದೇಸಿರುವ ಈ ಧಾರಾವಾಹಿಯನ್ನು ನಾವು ಕನ್ನಡದಲ್ಲೇ ನೋಡುವ ಅವಕಾಶ ಸಿಗಲಿದೆ' ಎನ್ನುತ್ತಾರೆ ಬನವಾಸಿ ಬಳಗದ ಅರುಣ್​ ಜಾವಗಲ್​.
Loading...

 ನಮ್ಮ ದೇಶದಲ್ಲಿ ಆಗಷ್ಟೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಿರುತೆರೆಗಾಗಿ ಶಂಕರ್​ನಾಗ್​ ಹಾಗೂ ಟಿ.ಎಸ್​. ನರಸಿಂಹನ್​ ಅವರು 1986ರಲ್ಲಿ `ಮಾಲ್ಗುಡಿ ಡೇಸ್' ಧಾರಾವಾಹಿಯ ನಿರ್ಮಾಣಕ್ಕೆ ಮುಂದಾಗಿದ್ದರು. ದೂರದರ್ಶನಕ್ಕಾಗಿ ಆಗ ನಿರ್ಮಿಸಿದ ಈ ಧಾರವಾಹಿಯನ್ನು ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಮಾಡಲಾಗಿತ್ತು. ಶಂಕರ್​ನಾಗ್​ ಅವರ ನಿರ್ದೇಶನದ ಹಾಗೂ ನರಸಿಂಹನ್​ ಅವರ ನಿರ್ಮಾಣದ ಈ ಧಾರಾವಾಹಿಗೆ ಕನ್ನಡದ ನಟ ಹಾಗೂ ಶಂಕರ್​ನಾಗ್​ ಅವರ ಆಪ್ತ ರಮೇಶ್​ ಭಟ್​ ಸಹಾಯಕ ನಿರ್ದೇಶಕರಾಗಿದ್ದರು.ಶಂಕರ್​ನಾಗ್​, ಅನಂತ್​ನಾಗ್​, ವಿಷ್ಣುವರ್ಧನ್​, ಅರುಂಧತಿ ನಾಗ್​,  ಗಿರೀಶ್​ ಕಾರ್ನಾಡ್​, ಮಾಸ್ಟರ್​ ಮಂಜುನಾಥ್, ಬಿ. ಜಯಶ್ರೀ, ರಮೇಶ್​ ಭಟ್​, ​ ಅಭಿನಯಿಸಿದ್ದ ಈ ಧಾರಾವಾಹಿಯನ್ನು ದೂರದರ್ಶನ 39 ಕಂತುಗಳಲ್ಲಿ ಪ್ರಸಾರ ಮಾಡಿತ್ತು. ಅಲ್ಲದೆ ಇದರಿಂದಾಗಿ ಶಂಕರ್‌ನಾಗ್ ಹಾಗೂ ನರಸಿಂಹನ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮನ್ನಣೆ ತಂದುಕೊಟ್ಟಿತ್ತು.

ಆರ್​.ಕೆ. ನಾರಾಯಣ್​ ಅವರ ಸಣ್ಣಕತೆಗಳ ಸಂಕಲನವೇ 'ಮಾಲ್ಗುಡಿ ಡೇಸ್​'. ಈ ಧಾರಾವಾಹಿಯ ಮೂಲಕ ಕರ್ನಾಟಕದ ಸೊಬಗನ್ನು ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲಾಗಿತ್ತು. ಈ ಧಾರಾವಾಹಿಯ ಬಹುಪಾಲನ್ನು ಆಗುಂಬೆ, ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಿಸಲಾಗಿತ್ತು.

ಡಬ್ಬಿಂಗ್ ಬೇಡವೆನ್ನುವ ರಮೇಶ್ ಭಟ್:

'ಮಾಲ್ಗುಡಿ ಡೇಸ್​' ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿದ್ದ ರಮೇಶ್ ಭಟ್​ ಅವರು ನ್ಯೂಸ್​ 18 ಜತೆ ಮಾತನಾಡಿ, ಈ ಧಾರಾವಾಹಿಯನ್ನು ಕನ್ನಡಕ್ಕೆ ಡಬ್​ ಮಾಡಬಾರದು. ಇದರಿಂದ ಬಹಳ ಹಿಂದಿನಿಂದ ಡಬ್ಬಿಂಗ್​ ಬೇಡವೆಂದು ನಾವು ನಡೆಸಿಕೊಂಡು ಬಂದಿರುವ ಹೋರಾಟ ಹಾದಿ ತಪ್ಪುತ್ತದೆ. ಯಾರಾದರೂ ಇಷ್ಟಪಟ್ಟರೆ ಅದನ್ನು ಹೊಸದಾಗಿ ನಾವು ಕನ್ನಡದಲ್ಲೇ ನಿರ್ಮಿಸಬಹುದು' ಎನ್ನುತ್ತಾರೆ.

ಇನ್ನು, ಶಂಕರ್​ನಾಗ್ ಅವರ ಅಭಿಮಾನಿಗಳು ಮಾತ್ರ ಇದನ್ನು ಡಬ್ಬಿಂಗ್​ ವಿವಾದದಿಂದ ದೂರವಿಟ್ಟು, ಕನ್ನಡಕ್ಕೆ ತರಬೇಕು ಎಂದು ಒತ್ತಾಯಿಸುತ್ತಾರೆ. ಆದರೆ ಈ ಡಬ್ಬಿಂಗ್​ ಬೇಕು-ಬೇಡ ಎನ್ನುವ ವಾದದ ನಡುವೆ ನಿಜಕ್ಕೂ ಈ ಧಾರಾವಾಹಿ ಕನ್ನಡಕ್ಕೆ ಬರುತ್ತಾ ಎಂದು ಕಾದು ನೋಡಬೇಕಷ್ಟೆ.

 

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...