news18-kannada Updated:October 16, 2020, 1:16 PM IST
ಸಾಂದರ್ಭಿಕ ಚಿತ್ರ
ಪಂಜಾಬ್ (ಅಕ್ಟೋಬರ್ 16); ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್ ಸಿಂಗ್ ಎಂಬ ಮಾಜಿ ಯೋಧನನ್ನು ಪಂಜಾಬ್ನ ತಾರ್ನ್ ತರಣ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಅಥವಾ ಭಯೋತ್ಪಾದಕರು ಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಭಿಖಿವಿಂದ್ ಗ್ರಾಮದಲ್ಲಿ ಬಲ್ವಿಂದರ್ ಸಿಂಗ್ ತಮ್ಮ ಕಚೇರಿಯಲ್ಲಿದ್ದಾಗ ಮೋಟಾರ್ ಸೈಕಲ್ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಯೋಧ ಬಲ್ವಿಂದರ್ ಸಿಂಗ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
62 ವರ್ಷದ ಬಲ್ವಿಂದರ್ ಸಿಂಗ್ ಅವರು ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ಧೈರ್ಯದಿಂದ ಹೋರಾಡಿ ಅವರನ್ನು ಸದೆಬಡಿದಿದ್ದರು. ಇದೇ ಕಾರಣಕ್ಕೆ ಇವರ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ಗೌರವವಾದ ಶೌರ್ಯ ಚಕ್ರ ಪ್ರಶಸ್ತಿ ನೀಡಿತ್ತು. ಆದರೆ, ಬಲ್ವಿಂದರ್ ಸಿಂಗ್ ಕೊಲೆಯಾಗಿದ್ದಾರೆ. ಈ ಹಿಂದೆಯೂ ಸಹ ಅನೇಕ ಬಾರಿ ಭಯೋತ್ಪಾದಕರು ಇವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಹೀಗಾಗಿ ಇದೂ ಸಹ ಭಯೋತ್ಪಾದಕರ ಕೃತ್ಯವೇ ಇರಬಹುದು ಎಂದು ಅನುಮಾನಿಸಲಾಗುತ್ತಿದೆ.
ಇದನ್ನೂ ಓದಿ : ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕವನ್ನೂ ಮೀರಿಸಲಿದೆ ಭಾರತ; ದೇಶಕ್ಕೆ ಹಬ್ಬಗಳ ಆತಂಕ
ಟಾರ್ನ್ ತರಣ್ ಪೊಲೀಸರ ಶಿಫಾರಸಿನ ಮೇರೆಗೆ ಸಿಂಗ್ ಅವರ ಭದ್ರತಾ ರಕ್ಷಣೆಯನ್ನು ಒಂದು ವರ್ಷದ ಹಿಂದೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ಅವರ ಸಹೋದರ ರಂಜಿತ್, ಅವರ ಇಡೀ ಕುಟುಂಬ ಭಯೋತ್ಪಾದಕರ ಹಿಟ್ ಪಟ್ಟಿಯಲ್ಲಿದೆ ಎಂದು ಹೇಳಿದ್ದರೂ ಸಹ ಭದ್ರತೆಯನ್ನು ಹಿಂಪಡೆದಿದ್ದು, ಈ ಕೊಲೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ರಕ್ಷಣಾ ಸಚಿವಾಲಯವು 1993 ರಲ್ಲಿ ಯೋಧ ಬಲ್ವಿಂದರ್ ಸಿಂಗ್ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅವರ ಧೈರ್ಯದ ಬಗ್ಗೆ ಪಂಜಾಬ್ನಲ್ಲಿ ಅನೇಕ ಸಾಕ್ಷ್ಯಚಿತ್ರಗಳನ್ನು ಸಹ ಮಾಡಲಾಗಿದೆ
Published by:
MAshok Kumar
First published:
October 16, 2020, 1:15 PM IST