ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್ ರೇಪ್!; ವಿಷದ ಇಂಜೆಕ್ಷನ್ ನೀಡಿ, ಮೂಳೆ ಮುರಿದು ಯುವತಿಯ ಹತ್ಯೆ

Uttar Pradesh Gang Rape: ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಸಾವನ್ನಪ್ಪಿದ ದಿನವೇ ಬಲರಾಂಪುರದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದು, ಆಕೆ ಮೃತಪಟ್ಟಿದ್ದಾಳೆ. ಇಂಜೆಕ್ಷನ್ ನೀಡಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿದೆ.

Sushma Chakre | news18-kannada
Updated:October 1, 2020, 8:20 AM IST
ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್ ರೇಪ್!; ವಿಷದ ಇಂಜೆಕ್ಷನ್ ನೀಡಿ, ಮೂಳೆ ಮುರಿದು ಯುವತಿಯ ಹತ್ಯೆ
ಸಾಂದರ್ಭಿಕ ಚಿತ್ರ
  • Share this:
ದೆಹಲಿ (ಅ. 1): ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 19 ವರ್ಷದ ದಲಿತ ಯುವತಿ ಚಿಕಿತ್ಸೆ ಫಲಕಾರಿಯಾಗದೆ 2 ದಿನಗಳ ಹಿಂದೆ ಸಾವನ್ನಪ್ಪಿದ್ದಳು. ಆ ಪ್ರಕರಣದ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ಎಸ್​ಐಟಿ ತನಿಖೆಗೆ ವಹಿಸಿತ್ತು. ಆಕೆ ಸಾವನ್ನಪ್ಪಿದ ದಿನವೇ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಲಿತ ಯುವತಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಒಂದೇ ದಿನ ಇಬ್ಬರು ದಲಿತ ಯುವತಿಯರ ಸಾವು ಸಂಭವಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದು ಸರ್ಕಾರಕ್ಕೂ ಮುಜುಗರ ತಂದಿದೆ.

ಬಲರಾಂಪುರ ಜಿಲ್ಲೆಯ 22 ವರ್ಷದ ದಲಿತ ಯುವತಿಯ ಮೇಲೆ ಮಂಗಳವಾರ ಇಬ್ಬರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆಕೆ ಬಲಾಂಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ಕೆಲಸಕ್ಕೆ ಹೋಗಿದ್ದ ಯುವತಿ ಸಂಜೆ ವಾಪಾಸ್ ಬರಲಿಲ್ಲ. ಆಕೆಯ ಫೋನ್​ಗೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಅವರು ಕಂಗಾಲಾಗಿದ್ದರು.

ಇನ್ನೇನು ಪೊಲೀಸ್ ಠಾಣೆಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ರಾತ್ರಿ ಆಟೋ ರಿಕ್ಷಾದಲ್ಲಿ ಮನೆಗೆ ಬಂದ ಯುವತಿಯ ಮೈಮೇಲೆ ಗಾಯಗಳಾಗಿತ್ತು. ಆಕೆ ನಿಲ್ಲಲೂ ಆಗದಷ್ಟು ನಿತ್ರಾಣಳಾಗಿದ್ದಳು. ಆಕೆಯ ಕೈಗೆ ಗ್ಲೂಕೋಸ್​ ಡ್ರಿಪ್ ಹಾಕಿದ್ದ ಇಂಜೆಕ್ಷನ್ ಹಾಕಲಾಗಿತ್ತು. ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಆಕೆ ಪ್ರಾಣ ಬಿಟ್ಟಳು ಎಂದು ಯುವತಿಯ ಮನೆಯವರು ದೂರು ನೀಡಿದ್ದಾರೆ. ಆಕೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಕೇಸ್; ಎಸ್​ಐಟಿ ತನಿಖೆಗೆ ಆದೇಶಿಸಿದ ಯೋಗಿ ಸರ್ಕಾರ

ಮೃತಳ ತಾಯಿ ನೀಡಿರುವ ದೂರಿನಲ್ಲಿ, ನನ್ನ ಮಗಳ ಮೇಲೆ ಅತ್ಯಾಚಾರ ನಡೆಸುವ ಮೊದಲು ಆಕೆಗೆ ಇಂಜೆಕ್ಷನ್ ಕೊಡಲಾಗಿದೆ. ಆಕೆ ಮನೆಗೆ ಬರುವಾಗ ಆಕೆಯ ಬೆನ್ನಿನ ಮೂಳೆ ಮತ್ತು ಕಾಲುಗಳು ಮುರಿದಿದ್ದವು. ಆಕೆಯ ಮೇಲೆ ಇನ್ನಿಲ್ಲದ ರೀತಿ ದೌರ್ಜನ್ಯ ನಡೆಸಿ, ಆಟೋ ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದರು. ನನ್ನ ಮಗಳು ಸಾಯುವಾಗ 'ನನಗೆ ಸಹಿಸಲಾರದಷ್ಟು ನೋವಾಗ್ತಿದೆ ಅಮ್ಮ, ನಾನಿನ್ನು ಬದುಕಲ್ಲ' ಎಂದು ಹೇಳುತ್ತಲೇ ಪ್ರಾಣ ಬಿಟ್ಟಳು ಎಂದು ಘಟನೆಯನ್ನು ವಿವರಿಸಿದ್ದಾರೆ.

ಇದೇರೀತಿ, ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ದಲಿತ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ನಾಲಿಗೆ ತುಂಡಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮಂಗಳವಾರ ಸಾವನ್ನಪ್ಪಿದ್ದಳು. ಅದೇ ದಿನ ರಾತ್ರಿ ಬಲರಾಂಪುರದ ಯುವತಿಯೂ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ.
Published by: Sushma Chakre
First published: October 1, 2020, 8:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading