ರಾಮಗಢ (ಜ. 11): ಮೊದಲೆಲ್ಲ ಹೆರಿಗೆ, ಬಾಣಂತನ ಎಂಬುದೆಲ್ಲ ದೊಡ್ಡ ವಿಷಯವೇ ಆಗಿರಲಿಲ್ಲ. ಆಗ ಅದರ ಬಗ್ಗೆ ಹೆಚ್ಚಿನ ಆತಂಕವೂ ಇರುತ್ತಿರಲಿಲ್ಲ. ಹೆಚ್ಚಿನವರು ಆಸ್ಪತ್ರೆಗೂ ಹೋಗದೆ ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದರು. ಆದರೂ ಮಗು ಆರೋಗ್ಯವಂತವಾಗಿರುತ್ತಿತ್ತು.
ಆದರೆ, ಈಗ ಆಧುನಿಕತೆ ಬೆಳೆದಂತೆ ಎಲ್ಲವೂ ವಾಣಿಜ್ಯೀಕರಣಗೊಂಡು ವೈದ್ಯರ ಬಗ್ಗೆಯೂ ನಂಬಿಕೆ ಉಳಿಸಿಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ತಾಜಾ ಉದಾಹರಣೆಯೆಂಬಂತೆ ರಾಜಸ್ಥಾನದ ರಾಮಗಢದಲ್ಲಿ ಒಂದು ಘಟನೆ ನಡೆದಿದೆ.
ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಾಗ ನರ್ಸ್ ನಿರ್ಲಕ್ಷ್ಯ ತೋರಿದ್ದರಿಂದ ಆ ಹಸುಗೂಸಿನ ದೇಹ ಅರ್ಧ ಭಾಗವಾದ ದುರಂತ ನಡೆದಿದೆ. ಹೆರಿಗೆ ಮಾಡಿಸುವಾಗ ಪುರುಷ ನರ್ಸ್ ಮಗುವನ್ನು ಜೋರಾಗಿ ಎಳೆದಿದ್ದಾರೆ. ಇದರಿಂದ ಮಗುವಿನ ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡಿದ್ದು, ಕೆಳಭಾಗ ಮಾತ್ರ ಹೊರಗೆ ಬಂದಿದೆ. ಮಗುವಿನ ದೇಹ ಇಬ್ಭಾಗವಾದ ಘಟನೆಯನ್ನು ಮುಚ್ಚಿಹಾಕಲು ಆ ಪುರುಷ ನರ್ಸ್ ಮತ್ತು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಇದು ಬೆಕ್ಕು ಹುಡುಕಲು ಹೋದವರಿಗೆ ಮೊಸಳೆ ಸಿಕ್ಕ ಕಥೆ
ಎರಡು ಭಾಗವಾದ ಹಸುಗೂಸು:
ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದ್ದು, ಮಗುವಿನ ತಲೆ ಮಾತ್ರ ಗರ್ಭದೊಳಗೆ ಉಳಿದುಕೊಂಡಿದ್ದರಿಂದ ಆಕೆಯ ಜೀವಕ್ಕೂ ಅಪಾಯ ಉಂಟಾಗಿದೆ. ಆಸ್ಪತ್ರೆಯ ಯಾವ ವೈದ್ಯರ ಗಮನಕ್ಕೂ ತಾರದೆ ಮಗುವಿನ ಅರ್ಧ ದೇಹವನ್ನು ಶವಾಗಾರದಲ್ಲಿಟ್ಟ ಪುರುಷ ನರ್ಸ್ ವಿರುದ್ಧ ದೂರು ದಾಖಲಾಗಿದೆ.
ಮಗು ಸತ್ತುಹೋದ ವಿಷಯವನ್ನು ಮಹಿಳೆಯ ಕುಟುಂಬಸ್ಥರಿಗೆ ತಿಳಿಸದೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಜೋಧ್ಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನರ್ಸ್ ಸೂಚಿಸಿದ್ದಾನೆ. ಬಳಿಕ, ಆ ಮಹಿಳೆಯನ್ನು ಜೋಧ್ಪುರದ ಉಮೈದ್ ಹಾಸ್ಪಿಟಲ್ಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿನ ಗೈನಕಾಲಜಿಸ್ಟ್ ಬಳಿ ತಾವು ಈಗಾಗಲೇ ಹೆರಿಗೆ ಮಾಡಿಸಿದ್ದು, ಪ್ಲಸೆಂಟಾವನ್ನು ಮಾತ್ರ ದಿಂದ ಹೊರತೆಗೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: ಇನ್ನೂ ಮನೆ ತಲುಪಿಲ್ಲ ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯರು..!
ಬಳಿಕ, ಅಲ್ಲಿನ ವೈದ್ಯರ ತಂಡ ಗರ್ಭಕೋಶದ ತಪಾಸಣೆ ನಡೆಸಿದಾಗ ಮಗುವಿನ ಹೊಟ್ಟೆ ಅಲ್ಲೇ ಉಳಿದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ತಕ್ಷಣ, ಆ ಮಹಿಳೆಯ ಸಂಬಂಧಿಕರಿಗೆ ವಿಷಯ ತಿಳಿಸಿದ ವೈದ್ಯರು ಮಹಿಳೆಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಆ ಮಹಿಳೆಯ ಗಂಡ ರಾಮಗಢದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆ ಮಹಿಳೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಇದುವರೆಗೂ ಯಾರನ್ನೂ ಈ ಪ್ರಕರಣದಲ್ಲಿ ಬಂಧಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ