ಧಮ್ತಾರಿ (ಏ. 3): ತಾಯಿಯನ್ನು ದೇವರು ಅಂತಾರೆ. ಜಗತ್ತಿನಲ್ಲಿ ಕೆಟ್ಟ ತಾಯಿ ಇಲ್ಲವೇ ಇಲ್ಲ ಎಂಬ ಮಾತೂ ಇದೆ. ಆದರೆ, ಇದಕ್ಕೆ ಅಪವಾದವೆಂಬಂತೆ ಪುಟ್ಟ ಕಂದಮ್ಮನಿಗೆ ಹಾಲು ಕುಡಿಸದೆ, ತಾಯಿ ಆಲ್ಕೋಹಾಲ್ ಸೇವಿಸುವುದನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದಾಳೆ. ಇದರಿಂದ ನವಜಾತ ಶಿಶು ಬಲಿಯಾಗಿರುವ ಕರುಣಾಜನಕ ಘಟನೆ ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಸುಂದರ್‌ಗಂಜ್ ವಾರ್ಡ್ ಪ್ರದೇಶದಲ್ಲಿ ವರದಿಯಾಗಿದೆ. ತಾಯಿ ತನ್ನ ಮಗುವಿನ ಕಡೆ ಗಮನ ತೋರದೆ, ಎದೆ ಹಾಲು ಕುಡಿಸುವುದನ್ನೇ ಮರೆತಿದ್ದಕ್ಕೆ ಈ ಮಗು ಹಸಿವಿನಿಂದ ಮೃತಪಟ್ಟಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಂದೆ ಮೆಕ್ಯಾನಿಕ್ ಆಗಿದ್ದು, ತಾಯಿ ಕುಡಿತದ ಚಟ ಹೊಂದಿದ್ದಳು. ತಂದೆ ಆಗಾಗ ಕೆಲಸಕ್ಕೆಂದು ಬೇರೆ ಊರಿಗೆ ಹೋಗುತ್ತಿದ್ದರು. ಈ ಹಿನ್ನೆಲೆ ತಾಯಿ ನಶೆಯಲ್ಲೇ ಹೆಚ್ಚು ಕಾಲ ತೇಲುತ್ತಿದ್ದಳು.. ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಲ್ಲದೆ, ಈ ದಂಪತಿಗೆ ಇದು ಮೊದಲನೆಯ ಮಗು ಆಗಿತ್ತು ಎಂದು ಧಮ್ತಾರಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಳೆದ ಶುಕ್ರವಾರ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಕೆಲಸಗಳ ಹಿನ್ನೆಲೆ ಪತಿ ಬೇರೆ ಊರಿಗೆ ಹೋಗಿದ್ದರು. ತಾಯಿ ಸಂಜೆ ಮದ್ಯಪಾನ ಮಾಡಲು ಆರಂಭಿಸಿದವರು ತಡರಾತ್ರಿಯಾದರೂ ನಿಲ್ಲಿಸಲಿಲ್ಲ. ನಂತರ ಆ ಕುಡಿತದ ನಶೆಗೆ ನವಜಾತ ಶಿಶುವಿನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ಹಿನ್ನೆಲೆ ಮಗುವಿಗೆ ಹಾಲು ಕುಡಿಸಬೇಕೆಂಬ ಅರಿವು ಇರಲೇ ಇಲ್ಲ. ಈ ಕಾರಣದಿಂದ ರಾತ್ರಿಯಿಡೀ ಮಗು ಹಸಿವಿನಿಂದ ಅಳುತ್ತಲೇ ಇತ್ತು. ಈ ಮಗುವಿನ ಅಳುವಿನ ಸದ್ದು ನೆರೆಮನೆಯವರಿಗೂ ಕೇಳಿಸಿದೆ. ಆದರೆ, ಮರುದಿನ ಬೆಳಗ್ಗೆ ಆ ಕಂದಮ್ಮನ ಅಳುವಿನ ಸದ್ದು ಕೇಳದ ಕಾರಣ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಅಲ್ಲದೆ, ಹಲವರಿಗೆ ಆಕೆಯ ಕುಡಿತದ ಚಟದ ಬಗ್ಗೆ ಮೊದಲೇ ಗೊತ್ತಿತ್ತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Kodagu Crime: ಕೊಡಗಿನಲ್ಲಿ ಹೆಂಡತಿ, ಮಕ್ಕಳನ್ನು ಕೂಡಿಹಾಕಿ ಮನೆಗೆ ಬೆಂಕಿ ಹಚ್ಚಿದ ಕುಡುಕ; 6 ಜನ ಸಜೀವ ದಹನ!
ಆ ಮಹಿಳೆಯ ಮದ್ಯಪಾನದ ದುರಭ್ಯಾಸದ ಬಗ್ಗೆ ತಿಳಿದಿದ್ದ ಕೆಲವು ನೆರೆಹೊರೆಯವರು ಅವರ ಮನೆಗೆ ಹೋಗಿದ್ದಾರೆ. ಆ ವೇಳೆ ಮಗು ಸತ್ತಿದ್ದನ್ನು ಕಂಡುಕೊಂಡರು. ಅಲ್ಲದೆ, ತಾಯಿಗೆ ಇನ್ನೂ ನಶೆ ಇಳಿದಿರಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ನಂತರ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ನಂತರ, ಪೊಲೀಸರು ಸ್ಥಳಕ್ಕೆ ಭಂದು ಭೇಟಿ ನೀಡಿದ ಬಳಿಕವೂ ಮಹಿಳೆ ಮದ್ಯದ ಅಮಲಿನಲ್ಲಿಯೇ ಇದ್ದಳು, ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸ್ಥಳೀಯ ಪೊಲೀಸರು ಸಹ ಮಾಹಿತಿ ನೀಡಿದರು. ಆದರೆ, ಈ ಪ್ರಕರಣದಲ್ಲಿ ಧಮ್ತಾರಿ ಪೊಲೀಸರು ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಈ ಹೃದಯ ವಿದ್ರಾವಕ ಘಟನೆಯಿಂದ ಧಮ್ತಾರಿಯ ಸುಂದರ್‌ಗಂಜ್ ಪ್ರದೇಶದ ಜನರು ಆಘಾತಕ್ಕೊಳಗಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ