ನವದೆಹಲಿ(ಸೆ.16): ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ವಿವಾದಿತ ಇಪ್ಪತ್ತೇಳು ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಲು ಸಿಬಿಐ ವಿಶೇಷ ನ್ಯಾಯಾಲಯ ನಿರ್ಧರಿಸಿದೆ. ಇದೇ ಸೆಪ್ಟೆಂಬರ್ 30 ರಂದು ಸಿಬಿಐ ವಿಶೇಷ ನ್ಯಾಯಲಯ ಪ್ರಕರಣದ ತೀರ್ಪು ಪ್ರಕಟಿಸಲಿದೆ. ಸಿಸಿಬಿ ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠ 27 ವರ್ಷಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆ.30ಕ್ಕೆ ಪ್ರಕಟಿಸುವುದಾಗಿ ಹೇಳಿದೆ. ಹೀಗಾಗಿ ಅಂದು ಪ್ರಕರಣದ ಎಲ್ಲಾ 32 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದೆ. ಆದ್ದರಿಂದಲೇ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತು ಎಂ ಎಂ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗೂ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಕೋರ್ಟ್ಗೆ ಹಾಜರಾಗಲಿದ್ದಾರೆ.
ಎರಡು ವಾರಗಳ ಹಿಂದೆಯೇ ಸೆ.01ರಂದೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದೆ. ಹೀಗಾಗಿ ವಿಶೇಷ ನ್ಯಾಯಾಧೀಶರು ಇದರ ತೀರ್ಪು ಬರೆಯಲು ಪ್ರಾರಂಭಿಸಿದ್ದಾರೆನ್ನಲಾಗಿದೆ. ಸಿಬಿಐ ಒಟ್ಟು 351 ಸಾಕ್ಷಿಗಳು ಮತ್ತು ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕರ ಸೇವಕರು 1992 ರ ಡಿಸೆಂಬರ್ 6 ರಂದು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳು ಇವಾಗಿವೆ
ಏನಿದು ಪ್ರಕರಣ?: ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಸಾರ್ವಜನಿಕರ ಬೆಂಬಲ ತೆಗೆದುಕೊಳ್ಳಲು ಆಂದೋಲನ ಆರಂಭಿಸಿತ್ತು. ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. 1992ರಲ್ಲಿ ಅನೇಕ ಹಿಂದು ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದರು. ಇದರಿಂದ ದೇಶಾದ್ಯಂತ ಸಾಕಷ್ಟು ಹಿಂಸಾಚಾರಗಳು ನಡೆದವು.
ಇನ್ನು, ಪ್ರತೀ ವರ್ಷವೂ ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಮಾಡಿದ ದಿನವನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ‘ಶೌರ್ಯದ ದಿನ’ ಎಂದು ಆಚರಣೆ ಮಾಡುತ್ತವೆ. ಅಂತೆಯೇ ಇನ್ನೊಂದೆಡೆ ಈ ದಿನವನ್ನು ‘ಕಪ್ಪು ದಿನ’ ಎಂದು ಮುಸ್ಲಿಂ ಸಂಘಟನೆಗಳು ಬೀದಿಗಿಳಿಯುತ್ತವೆ. ಆದ್ದರಿಂದ ಯಾವುದೇ ಅನಾಹುತ ಸಂಭವಿಸಿದಂತೆ ತಡೆಯಲು ದೇಶಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗುತ್ತದೆ. ಅಯೋಧ್ಯೆ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ