ಕ್ವೆಟ್ಟಾ, ಪಾಕಿಸ್ತಾನ: ಆರ್ಥಿಕ ಭಿಕ್ಕಟ್ಟಿಗೆ (Economic Crisis ) ಒಳಗಾಗಿರುವ ಪಾಕಿಸ್ತಾನದಲ್ಲಿ (Pakistan) ಪ್ರತಿಭಟನೆ ದಿನದಿಂದ ಹೆಚ್ಚಾಗುತ್ತಿದೆ. ಇದರ ದೇಶದ ಕ್ರಿಕೆಟ್ (Cricket) ಮೇಲೂ ಪರಿಣಾಮ ಬೀರುತ್ತಿದೆ. ಇಂದು ಕ್ವೆಟ್ಟಾದ (Quetta) ಬುಗ್ಟಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ್ ಸೂಪರ್ ಲೀಗ್ನ (Pakistan Super League) ಪ್ರದರ್ಶನ ಪಂದ್ಯದ ವೇಳೆ ಸ್ಟೇಡಿಯಂಗೆ ಸಮೀಪದಲ್ಲೇ ಬಾಂಬ್ ಬ್ಲಾಸ್ಟ್ ಆಗಿದ್ದು, ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ. ಸ್ಫೋಟ ಸಂಭವಿಸಿದ ತಕ್ಷಣವೇ ಮುನ್ನೆಚ್ಚರಿಕೆ ಕ್ರಮವಾಗಿ ಬಾಬರ್ ಅಜಮ್ (Babar Azam) ನೇತೃತ್ವದ ಪೇಶಾವರ್ ಝಲ್ಮಿ ಮತ್ತು ಸರ್ಫರಾಜ್ ಖಾನ್ (Sarfaraz Ahmed) ನೇತೃತ್ವದ ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಣ ಪಂದ್ಯವನ್ನು ನಿಲ್ಲಿಸಿ ಎರಡೂ ತಂಡದ ಆಟಗಾರರನ್ನು ಸುರಕ್ಷಿತವಾಗಿ ಸ್ಟೇಡಿಯಂನಿಂದ ಹೊರಕ್ಕೆ ಕರೆದೊಯ್ಯಲಾಗಿದೆ.
ಸ್ಟೇಡಿಯಂ ಮೇಲೆ ಕಲ್ಲು ತೂರಾಟ
ವರದಿಗಳ ಪ್ರಕಾರ ಸ್ಟೇಡಿಯಂ ಹೊರನಿಂದ ಕೆಲವರು ಮೈದಾನದತ್ತ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಕೆಲವು ಪ್ರೇಕ್ಷಕರು ಬುಗ್ಟಿ ಕ್ರೀಡಾಂಗಣದ ಹೊರಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಮೈದಾನದ ಒಳಗಿದ್ದ ಪ್ರೇಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಪಂದ್ಯವನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿ, ಆಟಗಾರರನ್ನು ಡ್ರೆಸ್ಸಿಂಗ್ ರೂಮ್ಗೆ ಕಳುಹಿಸಲಾಗಿದೆ.
ಐವರಿಗೆ ಗಾಯ
ಇನ್ನೂ ಕ್ವೆಟ್ಟಾದ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ, ಸ್ಟೇಡಿಯಂ ಅರ್ಧ ಕಿಮೀ ದೂರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದಾಳಿಯ ಹೊಣೆ ಹೊತ್ತ ಟಿಟಿಪಿ
ಕ್ವೆಟ್ಟಾದಲ್ಲಿ ಬಾಂಬ್ ಬ್ಲಾಸ್ಟ್ನ ಹೊಣೆಗಾರಿಕೆಯನ್ನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡೇ ಈ ಸ್ಫೋಟವನ್ನು ನಡೆಸಿದ್ದೇವೆ ಎಂದು ತಿಳಿಸಿದೆ. ವಾರದ ಹಿಂದೆಯಷ್ಟೆ ಪೇಶಾವರದಲ್ಲಿ ಅತ್ಮಾಹುತಿ ದಾಳಿ ನಡೆದಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಇದೀಗ ವಾರದ ಅಂತರದಲ್ಲಿ ಮತ್ತೊಂದು ದಾಳಿ ನಡೆದಿದೆ.
ಪಿಎಸ್‌ಎಲ್ ನಡೆಯುವ ಬಗ್ಗೆ ಆತಂಕ
ಇನ್ನು ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಇದೇ ಕಾರಣದಿಂದ ಈಗಾಗಲೆ ಏಷ್ಯಾಕಪ್ ಪಾಕಿಸ್ತಾನದಿಂದ ಸ್ಥಳಾಂತರಗೊಂಡಿದೆ. ಇನ್ನೂ ಈ ಘಟನೆ ಪಾಕಿಸ್ತಾನ ಸೂಪರ್ ಲೀಗ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಕಳೆದ ಎರಡು ಆವೃತ್ತಿಗಳಿಂದ ಪಿಎಸ್ಎಲ್ಅನ್ನು ಪಾಕಿಸ್ತಾನದಲ್ಲೇ ಆಯೋಜಿಸಲಾಗುತ್ತಿತ್ತು. ಒಂದು ಈ ಬಾರಿ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬರಲು ಒಪ್ಪದಿದ್ದರೆ ಮತ್ತು ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.
Exclusive scenes from Bugti Stadium Quetta, PSL exhibition match was stopped because few people from crowd have pelted stones in the ground. Also an bomb has blasted in Quetta but that was far away from venue. Some people also burned fire outside the ground. #PSL2023 #PSL8 #PZvQG pic.twitter.com/FjE7Hx61p3
— Ahmad Haseeb (@iamAhmadhaseeb) February 5, 2023
ಇನ್ನು ಪ್ರದರ್ಶನ ಪಂದ್ಯಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ಆಕ್ರಮಣ ಕಾರಿ ಬ್ಯಾಟಿಂಗ್ ಪ್ರದರ್ಶಿಸಿ 184 ರನ್ಗಳ ಬೃಹತ್ ಮೊತ್ತ ಕಲೆಯಾಕಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕಾರ್ ಅಹ್ಮದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 50 ಎಸೆತಗಳಲ್ಲಿ 94 ರನ್ಗಳಿಸಿದರು. ವಹಾಬ್ ರಿಯಾಜ್ ಬೌಲಿಂಗ್ನಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿದ್ದು ಮತ್ತೊಂದು ವಿಶೇಷವಾಗಿತ್ತು.
ಕ್ವೆಟ್ಟಾ ತಂಡಕ್ಕೆ ಗೆಲುವು
185 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪೇಜಾವರ್ ಝಲ್ಮಿ ತಂಡ 20 ಓವರ್ಗಳಲ್ಲಿ 181 ರನ್ಗಳಿಸಿ 3 ರನ್ಗಳ ರೋಚಕ ಸೋಲು ಕಂಡಿತು. ಮೊಹ್ಮದ್ ಹ್ಯಾರಿಸ್ 53, ಅಫ್ರಿದಿ 25 ರನ್ಗಳಿಸಿದರು. ಮೊಹಮದ್ ಹಸ್ನೈನ್ 3 ವಿಕೆಟ್ ಪಡೆದು ಮಿಂಚಿದರು.
ಫೆ. 13 ರಿಂದ ಪಿಎಸ್‌ಎಲ್ ಆರಂಭ
ಇನ್ನು 8ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಫೆಬ್ರವರಿ 13 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಈ ಬಾರಿ ಟೂರ್ನಿಯ ಎಲ್ಲಾ ಪಂದ್ಯಗಳು ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿವೆ. ಆದರೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ