ಮಹಾರಾಷ್ಟ್ರ: ಔರಂಗಾಬಾದ್ (Aurangabad) ಮತ್ತು ಒಸ್ಮಾನಾಬಾದ್ (Osmanabad) ನಗರಗಳ ಹೆಸರನ್ನು ಮರು ನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ. ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿ ನಗರ (Chhatrapati Sambhaji Nagar) ಎಂದೂ, ಒಸ್ಮಾನಾಬಾದ್ ನಗರವನ್ನು ಧರಾಶಿವ್ ನಗರ (Dharashiv) ಎಂದು ಮರು ನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮತ್ತು ವ್ಯವಹಾರಗಳ ಸಚಿವಾಲಯವು ಅನುಮೋದನೆ ಮಾಡಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರ ಎರಡು ನಗರಗಳ ಹೆಸರನ್ನು ಮರು ನಾಮಕರಣ ಮಾಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅನುಮೋದನೆ ಮಾಡಿರುವ ಕೇಂದ್ರ ಗೃಹ ಮತ್ತು ವ್ಯವಹಾರಗಳ ಸಚಿವಾಲಯವು ಎರಡು ನಗರಗಳ ಹೆಸರುಗಳ ಬದಲಾವಣೆಗೆ ಕೇಂದ್ರ ಸರ್ಕಾರ ಆಕ್ಷೇಪ ಇಲ್ಲ ಎಂದು ಹೇಳಿದೆ.
ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ಮೆಚ್ಚುಗೆ
ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಕೇಂದ್ರದ ಈ ನಿರ್ಧಾರವನ್ನು ಸ್ವಾಗತ ಮಾಡಿ ಟ್ವೀಟ್ ಮಾಡಿರುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರದ ನಾಯಕತ್ವ ಈಗ ಜನರಿಗೆ ತಲುಪುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಧನ್ಯವಾದ
ತಾವು ಮಾಡಿರುವ ಟ್ವೀಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಔರಂಗಾಬಾದ್ ಮತ್ತು ಒಸ್ಮಾನಾಬಾದ್ ನಗರಗಳ ಹೆಸರನ್ನು ಮರು ನಾಮಕರಣ ಮಾಡುವುದಕ್ಕೆ ಅನುಮೋದನೆ ನೀಡಿರುವ ಪತ್ರವನ್ನು ಲಗತ್ತಿಸಿರುವ ಮಹಾರಾಷ್ಟ್ರ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಔರಂಗಾಬಾದ್’ ಅನ್ನು 'ಛತ್ರಪತಿ ಸಂಭಾಜಿನಗರ' ಎಂದು, ಉಸ್ಮಾನಾಬಾದ್ ನಗರವನ್ನು 'ಧಾರಾಶಿವ್' ಎಂದು ಮರು ನಾಮಕರಣ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಮಾನ್ಯ ಪ್ರದಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ನಿಮ್ಮ ನಿರ್ಧಾರ ತಲುಪಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Divorce Case: 4 ವರ್ಷ ಡಿವೋರ್ಸ್ ಪಡೆಯಲು, 8 ವರ್ಷ ಪ್ರಕರಣ ರದ್ದುಗೊಳಿಸಲು; ಗುಜರಾತ್ ದಂಪತಿಯ ಅಪರೂಪದ ಪ್ರಕರಣ!
ಹೆಸರು ಬದಲಾವಣೆಗೆ ನಿರ್ಧಾರ ಕೈಗೊಂಡಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ
ಅಂದ ಹಾಗೆ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಎರಡು ನಗರಗಳ ಹೆಸರನ್ನು ಬದಲಾಯಿಸುವ ಬೇಡಿಕೆಯನ್ನು ಮೊದಲು ಮಾಡಿದ್ದು ದಿವಂಗತ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರು. ಈ ಬೇಡಿಕೆಯನ್ನು ಶಿವಸೇನೆ ಸಂಸ್ಥಾಪಕರು ಹಲವು ದಶಕಗಳಿಂದ ಮಂಡಿಸಿದ್ದರು. ಆದರೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು 2022 ರಲ್ಲಿ ತಮ್ಮ ಸರ್ಕಾರ ಪತನಗೊಳ್ಳುವ ಕೆಲವು ಗಂಟೆಗಳ ಮೊದಲು ಮುಖ್ಯಮಂತ್ರಿಯಾಗಿ ತಮ್ಮ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಈ ಎರಡು ನರಗಳ ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಇನ್ನು ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಎರಡು ನಗರಗಳ ಹೆಸರನ್ನು ಬದಲಾಯಿಸುವ ನಿರ್ಧಾರದ ಬಗ್ಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ