news18-kannada Updated:December 10, 2020, 7:34 PM IST
ದಾಳಿಗೆ ಕಾರಿನ ಗಾಜು ಜಖಂ ಆಗಿರುವುದು.
ಕೋಲ್ಕತ್ತಾ (ಡಿಸೆಂಬರ್ 10); ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಆದರೆ, ಅವರ ಕಾರು ಮತ್ತು ಬೆಂಗಾವಲು ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಜೆಪಿ ನಡ್ಡಾ ಪ್ರಯಾಣಿಸಿರುವ ಕಾರಿನ ಗಾಜು ಸಂಪೂರ್ಣವಾಗಿ ಜಖಂ ಆಗಿದೆ. ಈ ದಾಳಿ ಆಡಳಿತರೂಢ ಟಿಎಂಸಿ ಪಕ್ಷದ ಪ್ರಾಯೋಜಿತ ದಾಳಿಯಾಗಿದ್ದು, ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಘಟನೆ ಸಂಬಂಧ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಇದೊಂದು ಪ್ರಾಯೋಜಿತ ಹಿಂಸಾಚಾರ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭದ್ರತಾ ವೈಫಲ್ಯದ ಕುರಿತು ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದ್ದು, ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಉತ್ತರಿಸಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಮೇಲೆ ದಾಳಿಯಾಗಿದೆ ಎಂದು ತಮ್ಮ ಕಾರಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಘಟನೆಯ ಬಗ್ಗೆ ಮಾತನಾಡಿರುವ ಜೆ.ಪಿ. ನಡ್ಡಾ, "ಇಟ್ಟಿಗೆ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ದಾಳಿ ನಡೆಸಲಾಗಿದ್ದು, ಕಾರಿನ ಗಾಜು ಮತ್ತು ಕಿಟಕಿ ಸಂಪೂರ್ಣ ಜಖಂ ಆಗಿದೆ. ನಾನು ಬದುಕಿ ಸಭೆಗೆ ಹಾಜರಾದದ್ದೇ ದುರ್ಗಾ ಮಾತೆಯ ಕೃಪೆಯಿಂದ" ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಿಗೆ ದಾಳಿ ಖಂಡಿಸಿ ಇದೀಗ ಕೋಲ್ಕತ್ತಾದಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ.
ಆದಾಗ್ಯೂ, ಬಿಜೆಪಿ ನಾಯಕರ ಆರೋಪವನ್ನು ತಳ್ಳಿಹಾಕಿರುವ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ, "ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನು ಸೆಳೆಯುವ ಸಲುವಾಗಿ ರಾಜ್ಯದಲ್ಲಿ ಉದ್ದೇಶಪೂರ್ವಕ ಪ್ರಚೋಧನೆಯನ್ನು ಮಾಡುತ್ತಿದೆ. ಬಿಜೆಪಿ ಹಿಂದೂ ಧರ್ಮವನ್ನು ದ್ವೇಷಪೂರಿತಗೊಳಿಸುತ್ತಿದೆ. ಅಲ್ಲದೆ, ಇಂತಹ ದಾಳಿಗಳ ವಿಡಿಯೋಗಳನ್ನು ಇವರೇ ಸೃಷ್ಟಿಸಿ ಮಾಧ್ಯಮಗಳಿಗೆ ನೀಡುತ್ತಾರೆ, ಅಲ್ಲದೆ ಪಾಕಿಸ್ತಾನ ಇಸ್ರೇಲ್ ನೇಪಾಳ ನಮ್ಮ ಮೇಲೆ ದಾಳಿ ಮಾಡಿದೆ ಎಂದು ನಾಟಕವಾಡುತ್ತಾರೆ" ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕ ಜೆಪಿ ನಡ್ಡಾ ಕೋಲ್ಕತ್ತಾದ ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್ಗೆ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಡೈಮಂಡ್ ಹಾರ್ಬರ್ ಮುಖ್ಯಮಂತ್ರಿಯ ಸೋದರಳಿಯ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಸದೀಯ ಕ್ಷೇತ್ರವಾಗಿದೆ.
ಮೋಟರ್ ಸೈಕಲ್ಗಳಲ್ಲಿ ಆಗಮಿಸಿದ್ದ ಕೆಲವರು ಬಿಜೆಪಿ ಕಾರ್ಯಕರ್ತರ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಲವಾರು ಮಾಧ್ಯಮ ವಾಹನಗಳ ಮೇಲೂ ಸಹ ಕಲ್ಲಿನಿಂದ ದಾಳಿ ನಡೆಸಲಾಗಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಅದೇ ಸ್ಥಳದಲ್ಲಿ ಬಿಜೆಪಿ ಬೆಂಗಾವಲು ಪಡೆ ಹಾದುಹೋದ ಪರಿಣಾಮ ಈ ದಾಳಿಯಾಗಿದೆ ಎಂದು ವರದಿಗಳು ಸೂಚಿಸುತ್ತಿದೆ. ಬಿಜೆಪಿ ನಾಯಕರ ಕಾರುಗಳು ಜನಸಮೂಹದ ನಡುವೆಯೇ ತೆರಳಿದ್ದ ಸಮಯದಲ್ಲಿ ಜನ ಕಲ್ಲು ಮತ್ತು ಕೋಲುಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಯುಪಿಎ ನಾಯಕಿ ಸ್ಥಾನದಿಂದ ಸೋನಿಯಾ ಗಾಂಧಿ ನಿವೃತ್ತಿ ಸಾಧ್ಯತೆ?; ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿ!
ಈ ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತರಾದ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯವರ್ಗಿಯ ಎಂಬವರು ಗಾಯಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ. ನಮ್ಮ ಬೆಂಗಾವಲಿನ ಪಡೆ ಯಾರ ಮೇಲೆಯೂ ದಾಳಿ ನಡೆಸಿರಲಿಲ್ಲ. ಆದರೂ ನಮ್ಮ ಕಾರಿನ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಅದೃಷ್ಟವಶಾತ್ ನಾನು ಗುಂಡು ನಿರೋಧಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಸುರಕ್ಷಿತವಾಗಿದ್ದೇನೆ. ಪಶ್ಚಿಮದಲ್ಲಿರುವ ಈ ಗೂಂಡಾ ರಾಜ್ ಶೀಘ್ರದಲ್ಲೇ ಕೊನೆಗೊಳ್ಳಬೇಕಿದೆ ”ಎಂದು ಜೆಪಿ ನಡ್ಡಾ ಸುದ್ದಿಗಾರರ ಎದುರು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಬಂಗಾಳದ ಸಚಿವ ಸುಬ್ರತಾ ಮುಖರ್ಜಿ, "ಇದು ಬಿಜೆಪಿ ಸೃಷ್ಟಿಸಿರುವ ಗಲಭೆಯಾಗಿದ್ದು, ಜೆಪಿ ನಡ್ಡಾ ಬಂಗಾಳದಲ್ಲಿ ಪ್ರಚೋಧನಾಕಾರಿ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಎಲ್ಲವೂ ಮೊದಲೇ ಯೋಜಿಸಲಾಗಿತ್ತು. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
Published by:
MAshok Kumar
First published:
December 10, 2020, 7:34 PM IST