ನವದೆಹಲಿ: ಕೊರೋನಾ ವೈರಸ್ ಭೀತಿಯಿಂದ ಇಡೀ ದೇಶ ಸ್ಥಬ್ಧವಾಗಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದರು.
ಕೋರೋನಾ ಭೀತಿಯಲ್ಲಿರುವ ದೇಶದ ಜನತೆಗೆ ಕೇಂದ್ರ ಹಣಕಾಸು ಸಚಿವೆ ಸಾಕಷ್ಟು ವಿನಾಯಿತಿಗಳನ್ನು ನೀಡುವ ಮೂಲಕ ರಿಲೀಫ್ ನೀಡಿದ್ದಾರೆ. ಅದರ ಜತೆಗೆ ಇಷ್ಟು ದಿನಗಳ ಕಾಲ ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡಲು ಇದ್ದ ಲಿಮಿಟ್ಸ್ನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದುವರೆಗೂ ಕೇವಲ ಐದು ಬಾರಿ ಮಾತ್ರ ಎಟಿಎಂನಿಂದ ಪುಕ್ಕಟೆಯಾಗಿ ಹಣ ತೆಗೆಯಬಹುದಿತ್ತು.
ಅದಾದ ನಂತರದ ಎಲ್ಲಾ ವ್ಯವಹಾರಗಳಿಗೂ ಪ್ರತಿ ವಿತ್ಡ್ರಾವಲ್ಗೆ ರೂ. 20 ರೂ ಇಂದ ರೂ. 30ರ ವರೆಗೂ ಬ್ಯಾಂಕ್ಗಳು ಸರ್ವಿಸ್ ಚಾರ್ಜ್ ಆಗಿ ಪಡೆಯುತ್ತಿತ್ತು. ಇದೀಗ ಬಿಗ್ ರಿಲೀಫ್ ಘೋಷಿಸಿರುವ ಸೀತಾರಾಮನ್, ಮುಂದಿನ ಮೂರು ತಿಂಗಳವರೆಗೆ ಟ್ರಾನ್ಸಾಕ್ಷನ್ ಲಿಮಿಟ್ ತೆಗೆದುಹಾಕಿರುವುದಾಗಿ ಮತ್ತು ಎಷ್ಟು ಬಾರಿ ವಿತ್ ಡ್ರಾ ಮಾಡಿದರೂ ಅದಕ್ಕೆ ಚಾರ್ಜ್ ಮಾಡುವುದಿಲ್ಲ ಎಂದಿದ್ದಾರೆ.
ಜತೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31 ಕಡೆಯ ದಿನಾಂಕವಾಗಿತ್ತು, ಇದರಿಂದ ತೆರಿಗೆದಾರರೆಲ್ಲರೂ ಚಿಂತಿತರಾಗಿದ್ದರು. ಒಂದೆಡೆ ಕೊರೋನಾ ಭೀತಿಯಿಂದ ಎಲ್ಲಾ ರೀತಿಯ ವ್ಯವಹಾರಗಳಿಗೆ ನಿರ್ಬಂಧ ಹೇರಲಾಗಿದೆ, ಇನ್ನೊಂದೆಡೆ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಆಧಾರ್ - ಪ್ಯಾನ್ ಕಾರ್ಡ್ ಜೋಡಣೆಗೆ ನೀಡಿದ್ದ ಗಡುವು ಹತ್ತಿರವಾಗಿತ್ತು.
ಇದೀಗ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಆಧಾರ್ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೆ ಸಮಯ ನೀಡಲಾಗಿದೆ. ಈ ಮೂಲಕ ಔದ್ಯೋಗಿಕ ವರ್ಗಕ್ಕೆ ಕೇಂದ್ರ ರಿಲೀಫ್ ನೀಡಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯ ಹೈಲೈಟ್ಸ್:
- ಆದಾಯ ತೆರಿಗೆ ಪಾವತಿಗೆ ಜೂ.30ವರೆಗೆ ಅವಕಾಶ
- ಐಟಿ ರಿಟರ್ನ್ಸ್ ಸಲ್ಲಿಕೆ ಜೂ.30ರವರೆಗೆ ವಿಸ್ತರಣೆ
- 2018-19ರ ವಿತ್ತೀಯ ವರ್ಷದ ಐಟಿ ರಿಟರ್ನ್ಸ್ ಮಾರ್ಚ್ ಅಂತ್ಯಕ್ಕೆ ಸಲ್ಲಿಸಬೇಕಿತ್ತು. ಅದಕ್ಕೆ ಹೆಚ್ಚಿನ ಸಮಯ ನೀಡಿದ ಇಲಾಖೆ
- ಆದಾಯ ತೆರಿಗೆ ಪಾವತಿ ಅವಧಿ ವಿಸ್ತರಣೆ
- ವಿಳಂಬ ಪಾವತಿಯ ಬಡ್ಡಿ ದರದಲ್ಲೂ ಇಳಿಕೆ
- ದಂಡ ಪಾವತಿ ಬಡ್ಡಿ ಶೇ.12ರಿಂದ ಶೇ.9ಕ್ಕೆ ಇಳಿಕೆ
- ಜೂ.30ರವರೆಗೆ ಹೆಚ್ಚುವರಿ ಶುಲ್ಕ ಪಾವತಿಯಿಲ್ಲ
- ಪಾವತಿ ವಿಳಂಬವಾದಲ್ಲಿ ಶೇ. 9 ಬಡ್ಡಿ ಪಾವತಿಸಬೇಕಿತ್ತು. ಆ ಶುಲ್ಕ ಕಟ್ಟಬೇಕಿಲ್ಲ.
- ಆಧಾರ್-ಪಾನ್ ಲಿಂಕಿಂಗ್ ಅವಧಿಯೂ ವಿಸ್ತರಣೆ
- ಜೂನ್ 30ಕ್ಕೆ ಆಧಾರ್ ಲಿಂಕಿಂಗ್ ಅವಧಿ ವಿಸ್ತರಣೆ
- ಆಧಾರ್-ಪಾನ್ ಜೋಡಣೆ ಕೊನೇ ದಿನ ಮುಂದೂಡಿಕೆ
- ಜೂ.30ವರೆಗೆ ವಿವಾದ್ ಸೆ ವಿಶ್ವಾಸ್ ಸ್ಕೀಂ ವಿಸ್ತರಣೆ
- ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಅವಧಿಯೂ ವಿಸ್ತರಣೆ
- ಜೂ.30ರವರೆಗೆ GST ರಿಟರ್ನ್ಸ್ ಸಲ್ಲಿಕೆಗೆ ಅವಕಾಶ
- ಮಾರ್ಚ್, ಏಪ್ರಿಲ್, ಮೇ GST ಪಾವತಿ ಅವಧಿ ಜಿಎಸ್ಟಿ ಪಾವತಿ ವಿಳಂಬಕ್ಕೆ ದಂಡವಿಲ್ಲ
- 5 ಕೋಟಿ ರೂ. ಒಳಗಿನ ಜಿಎಸ್ಟಿಗೆ ದಂಡ ಇಲ್ಲ
- ಸಬ್ ಕಾ ವಿಶ್ವಾಸ್ ಯೋಜನೆಯೂ ವಿಸ್ತರಣೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ