ಭೋಪಾಲ್: 408.77 ಕಿ.ಮೀ ಉದ್ದದ ಅಟಲ್ ಪ್ರಗತಿ ಪಥ ಅಥವಾ ಪ್ರೋಗ್ರೆಸ್ ವೇ ಚತುಷ್ಪಥ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಸಂಪೂರ್ಣವಾಗಲಿದೆ. ಈ ಹೆದ್ದಾರಿಯಿಂದ ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಹಾಗೂ ಉತ್ತರ ಪ್ರದೇಶಕ್ಕೆ (Uttar Pradesh) ಸಂಚರಿಸಲು ಯಾವುದೇ ಅಡೆ-ತಡೆಗಳಿಲ್ಲದಂತಹ ಸುಲಭ ಸಂಪರ್ಕ ಮಾರ್ಗ ದೊರೆಯಲಿದೆ. ಸದ್ಯ ಭಾರತದಲ್ಲಿ ಈ ವರ್ಷ ರಾಜಕೀಯವಾಗಿ ಬಲು ಮಹತ್ವದ್ದಾಗಿದೆ. ಕಾರಣ ಕರ್ನಾಟಕ (Karnataka Election) ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಈ ವರ್ಷ ಜರುಗಲಿವೆ. ಅಟಲ್ ಪ್ರಗತಿಪಥ (Atal Expressway) ಎಂಬುದು ಒಂದು ಪ್ರತಿಷ್ಠಿತ ಚತುಷ್ಪಥ ಹೆದ್ದಾರಿ ಯೋಜನೆಯಾಗಿದ್ದು ಮಧ್ಯಪ್ರದೇಶದಲ್ಲಿ ಇದರ ಅನುಷ್ಠಾನ ಮಹತ್ವ ಪಡೆದುಕೊಂಡಿದೆ.
ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈ ಯೋಜನೆಗೆ ಸಂಬಂಧಿಸಿದಂತೆ ಬಿಡ್ಗಳನ್ನು ಆಹ್ವಾನಿಸಿದ್ದು ಶೀಘ್ರದಲ್ಲಿಯೇ ಈ ಯೋಜನೆ ಜಾರಿಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಮಧ್ಯಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ಹತ್ತಿರವಾಗಿರುವುದರಿಂದ ಈ ಯೋಜನೆ ರಾಜ್ಯದ ಜನತೆಗೆ ಒಂದು ಉಡುಗೊರೆಯಂತೆಯೇ ಭಾಸವಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಹೆದ್ದಾರಿಯ ವಿವರ ಹೀಗಿದೆ ನೋಡಿ
408.77 ಕಿ.ಮೀ ಉದ್ದದ ಈ ಚತುಷ್ಪಥ ಹೆದ್ದಾರಿ ಯೋಜನೆಯು ರಾಜಸ್ಥಾನದ ಕೋಟಾದಿಂದ ಪ್ರಾರಂಭವಾಗಿ ಉತ್ತರಪ್ರದೇಶದ ಇಟಾವಾದವರೆಗೆ ವ್ಯಾಪ್ತಿಯನ್ನೊಳಗೊಂಡಿದೆ. ಮಧ್ಯಪ್ರದೇಶದ ಮೂಲಕ ರಾಜಸ್ಥಾನ ಹಾಗೂ ಉತ್ತರಪ್ರದೇಶಕ್ಕೆ ಸಂಚರಿಸಲು ಯಾವುದೇ ಅಡೆ-ತಡೆಗಳಿಲ್ಲದಂತಹ ಸುಲಭ ಸಂಪರ್ಕ ಮಾರ್ಗವಾಗಿ ಹೊರಹೊಮ್ಮಲಿದೆ. ಒಟ್ಟಿನಲ್ಲಿ ಈ ರಾಷ್ಟ್ರೀಯ ಹೆದ್ದಾರಿಯು ಮಧ್ಯಪ್ರದೇಶದ ಶಿವಪುರ್, ಮೊರೇನಾ, ಭಿಂಡ್ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ.
ಹೆದ್ದಾರಿ ವ್ಯಾಪ್ತಿ
ಪ್ರಸ್ತಾಪಿಸಲಾದ ಯೋಜನೆಯನುಗುಣವಾಗಿ ಈ ಹೆದ್ದಾರಿಯು ಕೋಟಾ ಜಿಲ್ಲೆಯ ಸೀಮಲ್ಯಾ ಗ್ರಾಮದ ರಾ.ಹೆ. 27 ರ ಮೂಲಕ ಪ್ರಾರಂಭವಾಗಲಿದೆ. ತದನಂತರ ಇದು ಮಧ್ಯಪ್ರದೇಶ ಪ್ರವೇಶಿಸಿ, ಅದನ್ನು ದಾಟಿ ಅಂತಿಮವಾಗಿ ಉತ್ತರಪ್ರದೇಶದ ಇಟಾವಾ ಜಿಲ್ಲೆಯ ನಿನಾವಾ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ.
ಬಿಡ್ಗಳ ಆಹ್ವಾನ
408.77 ಕಿ.ಮೀ ಉದ್ದದ ಈ ಚತುಷ್ಪಥ ಹೆದ್ದಾರಿಯ ಸಿಂಹಪಾಲು ಅಂದರೆ ಸುಮಾರು 300 ಕಿ.ಮೀ ಗಳಷ್ಟು ರಸ್ತೆಯು ಮಧ್ಯಪ್ರದೇಶದ ಮೂಲಕ ಸಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಮಧ್ಯಪ್ರದೇಶದಲ್ಲಿ ಸುಮಾರು 219 ಕಿ.ಮೀ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಬಿಡ್ಗಳನ್ನು ಆಹ್ವಾನಿಸಿದೆ.
ಹಂತ ಹಂತದಲ್ಲಿ ಹೆದ್ದಾರಿ ನಿರ್ಮಾಣ
ಈ ಉದ್ದವು ವಿವಿಧ ಪ್ರದೇಶಗಳ ಕಾಮಗಾರಿಗಳ ಹಂತ ಹಂತಗಳ ನಿರ್ಮಾಣಗಳನ್ನು ಒಳಗೊಂಡಿದೆ. ಶಿವಪುರ್ ಜಿಲ್ಲೆಯ 60.9 ಕಿ.ಮೀ( ಪ್ಯಾಕೇಜ್ III), ಶಿವಪುರ್ ಮತ್ತು ಮೊರೇನಾ ಜಿಲ್ಲೆಗಳ 50.6 ಕಿ.ಮೀ (ಪ್ಯಾಕೇಜ್ IV), ಮೊರೇನಾ ಜಿಲ್ಲೆಯ 59 ಕಿ.ಮೀ (ಪ್ಯಾಕೇಜ್ V) ಹಾಗೂ ಪ್ಯಾಕೇಜ್ VI ಅಡಿ ಮೊರೇನಾ ಜಿಲ್ಲೆಯ 47.95 ಕಿ.ಮೀ ರಸ್ತೆ ಕಾಮಗಾರಿಗಳಾಗಿವೆ. ಇನ್ನು ಹೆದ್ದಾರಿಯ ಉಳಿದ ಉದ್ದದ ಕಾಮಾಗಾರಿಗಾಗಿ ಟೆಂಡರ್ ಗಳು ತಯಾರಿಸುವ ಪ್ರಕ್ರಿಯೆಯಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಹೊರಡಿಸಲಾಗುವುದೆಂದು ತಿಳಿದುಬಂದಿದೆ.
ಚಂಬಲ್ ಎಕ್ಸ್ ಪ್ರೆಸ್ ವೇ
ಮಧ್ಯಪ್ರದೇಶದಲ್ಲಿ ಹಾದು ಹೋಗುತ್ತಿರುವ ಈ ಹೆದ್ದಾರಿಯು ಹಿಂದೆ ಡಕಾಯಿತಿಗಳಿಗಾಗಿ ಕುಖ್ಯಾತಿ ಪಡೆದಿದ್ದ ಚಂಬಲ್ ಕಣಿವೆಯ ಮೂಲಕ ಹಾದು ಹೋಗುವುದರಿಂದ ಇದನ್ನು ಚಂಬಲ್ ಎಕ್ಸ್ ಪ್ರೆಸ್ ವೇ ಎಂದು ಹೆಸರಿಸಲಾಗಿದೆ.
ಚಂಬಲ್ ನದಿಯಗುಂಟ ಹರಡಿರುವ ಚಂಬಲ್ ಕಣಿವೆಯು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶಗಳ ಗಡಿಗಳು ಒಂದಕ್ಕೊಂದು ಸಂಧಿಸುವ ಸ್ಥಳದಲ್ಲಿ ನೆಲೆಗೊಂಡಿದೆ. ಚಂಬಲ್ ನದಿವೆ ಇಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ರಾಜ್ಯಗಳ ಗಡಿಯಂತಿದೆ. ನದಿಯ ಸುತ್ತಮುತ್ತಲಿರುವ ಕಣಿವೆ ಭಾಗವು ಅತಿ ಹೆಚ್ಚು ಭಾಗ ಅಂದರೆ 12000 ಚ.ಕಿ.ಮೀ ಗಳಷ್ಟು ಉತ್ತರ ಪ್ರದೇಶದ ಇಟಾವಾ, ರಾಜಸ್ಥಾನದ ಕೋಟಾ, ಸವಾಯಿ ಮಾಧೋಪುರ್, ಢೋಲಪುರ್ ಜಿಲ್ಲೆಗಳು ಮತ್ತು ಮಧ್ಯಪ್ರದೇಶದ ಭಿಂಡ್, ಮೊರೇನಾ, ಹಾಗೂ ಶಿವಪುರ್ ಜಿಲ್ಲೆಗಳನ್ನು ವ್ಯಾಪಿಸಿದೆ.
ಚಂಬಲ್ ಕಣಿವೆಯು ವಿಲಕ್ಷಣವಾದ ಭೌಗೋಳಿಕತೆಯೊಂದಿಗೆ ಅರೆ ಒಣ ಅಥವಾ ಅರೆ-ಶುಷ್ಕ ಪ್ರದೇಶವಾಗಿದೆ. ಸಾಕಷ್ಟು ಕಂದರುಗಳು ಅಥವಾ ಕಮರಿಗಳನ್ನೊಳಗೊಂಡ ಪ್ರದೇಶವಾಗಿದೆ. ಹಿಂದೊಮ್ಮೆ ಚಂಬಲ್ ಕಣಿವೆ ಎಂದರೆ ಜನಸಾಮಾನ್ಯರು ನಡುಗುವಂತಹ ಪರಿಸ್ಥಿತಿ ಇತ್ತು. ಕಾರಣ ಈ ಕಣಿವೆಯು ಸುಲಿಗೆ ಮಾಡುವ ಡಕಾಯಿತರಿಗಾಗಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಅಲ್ಲದೆ, ಇಲ್ಲಿ ಬಹುಕಾಲದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗದೆ ಇಲ್ಲಿನ ಜನರು ಸಾಕಷ್ಟು ಬಡತನದಿಂದ ಪರದಾಡುತ್ತಿದ್ದರು.
ಇದನ್ನೂ ಓದಿ: Kerala: ಹದ್ದುಗಳ ದಾಳಿಗೆ ಬೇಸತ್ತ ಕೇರಳದ ಈ ಗ್ರಾಮದ ಜನರು!
ಹಾಗಾಗಿ ಒಂದೊಮ್ಮೆ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣಗೊಂಡ ನಂತರ ಈ ಪ್ರದೇಶವು ಸಾಕಷ್ಟು ಅಭಿವೃದ್ಧಿ ಕಾಣಬಹುದು. ಇದರಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸಾಕಷ್ಟು ಅನುಕೂಲವಾಗಬಹುದೆಂದು ಭಾವಿಸಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಲ್ಲಿದೆ ಇಲ್ಲಿನ ಜನತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ