ನವ ದೆಹಲಿ (ಆಗಸ್ಟ್ 26); ಕೊರೋನಾ ಸಂಕಷ್ಟದ ನಡುವೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿ ಕೇಂದ್ರ ಸರ್ಕಾರ NEET ಮತ್ತು JEE ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಹೀಗಾಗಿ ಸರ್ಕಾರದ ಕ್ರಮದ ವಿರುದ್ಧ ನಾವು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸೋಣ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶ ಪರೀಕ್ಷೆ NEET ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ JEE ಯನ್ನು ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸೇರಿ ಹಲವು ಮಂದಿ ಆಗ್ರಹಿಸುತ್ತಿದ್ದಾರೆ.
ಈ ನಡುವೆ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಇಂದು ಬೆಳಿಗ್ಗೆ 8 ರಿಂದ, ಭಾರತದಾದ್ಯಂತ ಪರೀಕ್ಷೆಗಳಿಗೆ ಅರ್ಹರಾದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಮನೆಗಳಿಂದಲೇ ಕಪ್ಪು ಧ್ವಜಗಳನ್ನು ಪ್ರದರ್ಶಿಸುವ, ತೋಳು ಅಥವಾ ಹಣೆಯ ಮೇಲೆ ಕಪ್ಪು ಬ್ಯಾಂಡ್‌ಗಳನ್ನು, ಕಪ್ಪು ಮುಖವಾಡ ಧರಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರೊಫೈಲ್ ಚಿತ್ರಗಳ ಬದಲು ಕಪ್ಪು ಚಿತ್ರವನ್ನು ಹಾಕುವ ಮೂಲಕ ಪ್ರತಿಭಟಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾತ್ರ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಘಂಟಾಘೋಷವಾಗಿ ತಿಳಿಸಿದೆ.
ಹೀಗಾಗಿ ಪಕ್ಷದಲ್ಲಿ ಉಂಟಾದ ಭಿನ್ನಮತದ ಕಾವಿನಿಂದ ಹೊರ ಬಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರವೇಶ ಪರೀಕ್ಷೆ ಮುಂದೂಡಿಕೆ ಕುರಿತು ಚರ್ಚಿಸಲು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಇಂದು ಮಧ್ಯಾಹ್ನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ರಾಜ್ಯಗಳ ಹಣಕಾಸು ಸ್ಥಿತಿಗತಿ ಜೊತೆಗೆ NEET, JEE ಮತ್ತು GST ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
ಈ ವೇಳೆ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್ ಸಿಎಂ ಅಮರೀಂದರ್ ಸಿಂಗ್, “ಇಂತಹ ಸಮಯದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸರಿಯಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ 2 ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಪರೀಕ್ಷೆ ಮುಂದೂಡುವುದನ್ನು ಸರ್ಕಾರ ನಿರಾಕರಿಸಿದೆ. ಅಲ್ಲದೆ, ಸಂಪೂರ್ಣ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದೆ.
ಆದರೆ, ಇದು ಸರಿಯಾದ ನಿರ್ಧಾರವಲ್ಲ. ಅಲ್ಲದೆ, ಇದು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾದ ನಿಲುವಾಗಿದೆ. ಹೀಗಾಗಿ NEET ಮತ್ತು JEE ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹೋರಾಟವನ್ನು ಮುಂದುವರೆಸುವ" ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ