• Home
  • »
  • News
  • »
  • national-international
  • »
  • Assembly Election 2023: ಲೋಕಸಭೆ ಚುನಾವಣೆಗೂ ಮುನ್ನ ಪಕ್ಷಗಳಿಗೆ ಅಗ್ನಿಪರೀಕ್ಷೆ, ಈ ವರ್ಷ ದೇಶದ 9 ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್‌

Assembly Election 2023: ಲೋಕಸಭೆ ಚುನಾವಣೆಗೂ ಮುನ್ನ ಪಕ್ಷಗಳಿಗೆ ಅಗ್ನಿಪರೀಕ್ಷೆ, ಈ ವರ್ಷ ದೇಶದ 9 ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಶಾನ್ಯ, ಮಧ್ಯದಿಂದ ದಕ್ಷಿಣ ಭಾರತದವರೆಗೆ ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ತೆಲಂಗಾಣ, ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಸೇರಿ ಒಂಭತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

  • Trending Desk
  • Last Updated :
  • New Delhi, India
  • Share this:

ಈ ವರ್ಷ ದೇಶ ದೊಡ್ಡ ರಾಜಕೀಯ ಬೆಳವಣಿಗೆಗೆ(Political Progress) ಸಾಕ್ಷಿಯಾಗಲಿದೆ. ಕಾರಣ ಇಷ್ಟೇ, ಈ ವರ್ಷ ದೇಶದ ಒಂಭತ್ತು ರಾಜ್ಯಗಳಲ್ಲಿ ಎಲೆಕ್ಷನ್‌ ಸಮರ(Election War) ನಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಈ ಎಲೆಕ್ಷನ್‌ಗಳು ದೊಡ್ಡ ಮುನ್ನಡಿಯಾಗಿದ್ದು ಈ ಕಾರಣಕ್ಕೆ ಸಾಕಷ್ಟು ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ.


ದೇಶದ ಒಂಭತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ


ಈಶಾನ್ಯ, ಮಧ್ಯದಿಂದ ದಕ್ಷಿಣ ಭಾರತದವರೆಗೆ ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಢ, ತೆಲಂಗಾಣ, ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಸೇರಿ ಒಂಭತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.


ಈಗಾಗ್ಲೇ ಪಕ್ಷದ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದು ರಾಜಕೀಯ ಅಖಾಡದ ರಣಕಲಿಗಳು ವೋಟ್‌ ಭೇಟೆಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ.


ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ರಣಕಲಿಗಳು


ಬಿಜೆಪಿ, ಕಾಂಗ್ರೆಸ್‌ ಸೇರಿ ಎಲ್ಲಾ ಪಕ್ಷಗಳು ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿವೆ. ಇತ್ತ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಆರಂಭಿಸಿರುವ ಬಿಜೆಪಿಯ ಪ್ರಮುಖರು, ಕಳೆದ ವರ್ಷದ ಛಾಪನ್ನೇ 2023 ರಲ್ಲೂ ಮುಂದುವರಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.


ಮತ್ತೊಂದೆಡೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಸಾಕಷ್ಟು ಮನ್ನಣೆ ಪಡೆದುಕೊಳ್ಳುತ್ತಿದ್ದು ಹೆಚ್ಚಿನ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲು ಎದುರು ನೋಡುತ್ತಿದೆ.


ಇತ್ತೀಚೆಗೆ ಮುಕ್ತಾಯಗೊಂಡ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ ಪ್ರಮುಖ ಭಾಗವನ್ನು ಆಕ್ರಮಿಸಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ರಣತಂತ್ರಗಳನ್ನು ರೂಪಿಸುತ್ತಿದೆ.


ಈ ವರ್ಷ ಎಲ್ಲೆಲ್ಲಿ ನಡೆಯಲಿವೆ ವಿಧಾನಸಭೆ ಚುನಾವಣೆ?


ತ್ರಿಪುರ


ತ್ರಿಪುರಾ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 22 ರಂದು ಕೊನೆಗೊಳ್ಳಲಿದ್ದು, ಅದೇ ಸಮಯದಲ್ಲಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದೆ. ಈ ಹಿಂದೆ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.


ಕಳೆದ ಬಾರಿಯಂತೆ ಬಿಜೆಪಿಗೆ ಈ ವರ್ಷದ ಎಲೆಕ್ಷನ್‌ ಸುಲಭವಾಗಿಲ್ಲ. ತ್ರಿಪುರಾದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ ಎಂಟ್ರಿ ನೀಡಿದ್ದು, ಕೇಸರಿ ಪಡೆಗೆ ಸಾಕಷ್ಟು ಸವಾಲುಗಳನ್ನು ನೀಡಬಹುದು ಎನ್ನಲಾಗಿದೆ.


ಹಾಗೆಯೇ ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಒಳಜಗಳಗಳೂ ಪಕ್ಷಕ್ಕೆ ಮೈನಸ್‌ ಆಗಬಹುದು ಎನ್ನಲಾಗಿದೆ.


ಮೇಘಾಲಯ


2023 ರ ಮೇಘಾಲಯ ಚುನಾವಣೆಯು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದ್ದು, ಪ್ರಸ್ತುತ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 15 ರಂದು ಕೊನೆಗೊಳ್ಳಲಿದೆ.


ಇದಕ್ಕೂ ಮೊದಲು 2018 ರ ಚುನಾವಣೆಯಲ್ಲಿ, 60 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದು ಹೊರಹೊಮ್ಮಿತ್ತು. ಆದರೆ ಬಳಿಕ ಬಿಜೆಪಿ, ಎನ್‌ಪಿಪಿ ಪಕ್ಷದ ಜೊತ ಸೇರಿಕೊಂಡು ಮೇಘಾಲಯದಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು.


ಮೇಘಾಲಯದಲ್ಲಿ ಕಳೆದ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ನಂತರ ಸರ್ಕಾರ ರಚಿಸಲು ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.


ಎನ್‌ಪಿಪಿ 20 ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ವರ್ಷ, ಮೇಘಾಲಯವು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ ಏಕೆಂದರೆ ಎನ್‌ಪಿಪಿ ಈಗಾಗ್ಲೇ ಯಾರ ಮೈತ್ರಿಯೂ ಇಲ್ಲದೇ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.


ಇದನ್ನೂ ಓದಿ: Karnataka Politics: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇಲ್ಲ; ಮಿಷನ್ 150+ ಟಾರ್ಗೆಟ್​ ಎಂದ ಅಮಿತ್​ ಶಾ!


ನಾಗಾಲ್ಯಾಂಡ್


ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಕೂಡ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ನಿರೀಕ್ಷೆಯಿದೆ. ಪ್ರಸ್ತುತ ನಾಗಾಲ್ಯಾಂಡ್ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 12 ರಂದು ಕೊನೆಗೊಳ್ಳಲಿದೆ.


ನಾಗಾಲ್ಯಾಂಡ್‌ನಲ್ಲಿ ಬಿಜೆಪಿ 2018 ರ ಚುನಾವಣೆಗೆ ಮುನ್ನ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಜೊತೆ ಕೈಜೋಡಿಸಿ ಸರ್ಕಾರ ರಚಿಸಿತ್ತು.


60 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಪಿಪಿ 18 ಸ್ಥಾನ ಗಳಿಸಿದ್ದರೆ, ಬಿಜೆಪಿ 12 ಸ್ಥಾನ ಗಳಿಸಿತ್ತು. ಇನ್ನೂ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) 26 ಸ್ಥಾನಗಳನ್ನು ಪಡೆದುಕೊಂಡಿತ್ತು, ಆದರೆ ಸರ್ಕಾರ ರಚಿಸಲು ವಿಫಲವಾಗಿತ್ತು.


ಕರ್ನಾಟಕ


2023 ರಲ್ಲಿ ಚುನಾವಣೆ ನಡೆಯಲಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ಕ್ಕೆ ಕೊನೆಗೊಳ್ಳಲಿದ್ದು, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.


ಈ ಹಿಂದೆ 2018 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ ಮತ್ತು ಹಂಗ್ ಅಸೆಂಬ್ಲಿ ನಂತರ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲರಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡಿದ್ದರು.


ತರುವಾಯ, ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಮೈತ್ರಿ ಮಾಡಿಕೊಂಡವು.


ಆದರೆ, 14 ತಿಂಗಳ ನಂತರ, ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಹನ್ನೆರಡು ಶಾಸಕರು ರಾಜೀನಾಮೆ ನೀಡಿದ ನಂತರ ಕುಮಾರಸ್ವಾಮಿ ಸರ್ಕಾರ ಪತನವಾಯಿತು.


ಜುಲೈ 2019 ರಲ್ಲಿ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಬಸವರಾಜ ಬೊಮ್ಮಾಯಿ ಸಿಎಂ ಪಟ್ಟ ಏರಿದರು.


ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದಲ್ಲಿ ಚುನಾವಣೆಗೆ ಭಾರಿ ಸಿದ್ದತೆ ನಡೆಸುತ್ತಿದೆ. ಜೆಡಿಎಸ್ ಕೂಡಾ ತಮ್ಮ ಸಿದ್ಧತೆಗಳನ್ನು ಮುಂದುವರಿಸಿದೆ.


ಲೋಕಸಭಾ ಚುನಾವಣೆ ದೃಷ್ಟಿಯಿಂದ ಕರ್ನಾಟಕ ಬಿಜೆಪಿಗೆ ಪ್ರಮುಖವಾದ ಅಖಾಡವಾಗಿದ್ದು, 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕರ್ನಾಟಕವನ್ನು ಉಳಿಸಿಕೊಳ್ಳಲು ಕೇಸರಿ ಕಲಿಗಳು ಶ್ರಮ ಪಡುತ್ತಿದ್ದಾರೆ. ಏಕೆಂದರೆ ಕರ್ನಾಟಕ ಬಿಜೆಪಿ ಪಕ್ಷವು ಅಧಿಕಾರದಲ್ಲಿರುವ ಏಕೈಕ ದಕ್ಷಿಣ ರಾಜ್ಯವಾಗಿದೆ.


ಛತ್ತೀಸ್‌ಗಢ


ಛತ್ತೀಸ್‌ಗಢ ಶಾಸಕಾಂಗ ಸಭೆಯ ಅವಧಿಯು ಜನವರಿ 3, 2024 ರಂದು ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯವು ಈ ವರ್ಷದ ಡಿಸೆಂಬರ್‌ನಲ್ಲಿ ಚುನಾವಣೆಗೆ ಸಾಕ್ಷಿಯಾಗಬಹುದು.


2018 ರಲ್ಲಿ, 91 ಸದಸ್ಯ ಬಲದ ಅಸೆಂಬ್ಲಿಯಲ್ಲಿ 68 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕಾಂಗ್ರೇಸ್ ಬೇರುಸಹಿತ ಕಿತ್ತುಹಾಕಿತ್ತು. ‌ ಇದೀಗ ʼಕಮಲʼ ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.


ಮಧ್ಯಪ್ರದೇಶ


ಈ ವರ್ಷ ಮತದಾನ ನಡೆಯಲಿರುವ ಮತ್ತೊಂದು ನಿರ್ಣಾಯಕ ರಾಜ್ಯವೆಂದರೆ ಅದು ಮಧ್ಯಪ್ರದೇಶ. ಮಧ್ಯಪ್ರದೇಶ ವಿಧಾನಸಭೆಯ ಅವಧಿ ಜನವರಿ 6, 2024ಕ್ಕೆ ಕೊನೆಗೊಳ್ಳಲಿರುವುದರಿಂದ 230 ಕ್ಷೇತ್ರಗಳ ಸದಸ್ಯರನ್ನು ಆಯ್ಕೆ ಮಾಡಲು ಈ ವರ್ಷ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.


ಇದನ್ನೂ ಓದಿ: Army Day 2023: ದೆಹಲಿಯಿಂದ ಹೊರಗೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಾರತೀಯ ಸೇನಾ ದಿನ ಆಯೋಜನೆ; ಏನಿದರ ವಿಶೇಷತೆ?


230 ಸದಸ್ಯ ಬಲದ ಅಸೆಂಬ್ಲಿಯಲ್ಲಿ 114 ಸ್ಥಾನಗಳನ್ನು ಗೆದ್ದ ನಂತರ ಕಾಂಗ್ರೆಸ್ ಮೊದಲು ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿತು ಮತ್ತು ಕಮಲ್ ನಾಥ್ ಸುಮಾರು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.


ಆದಾಗ್ಯೂ, ಎರಡು ವರ್ಷಗಳ ನಂತರ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ತನ್ನ ಸಿಂಹಾಸನವನ್ನು ಮರಳಿ ಪಡೆದರು, ಪಕ್ಷದ ಹೆವಿವೇಟ್ ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ 22 ಹಾಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಕೇಸರಿ ಪಾಳಯಕ್ಕೆ ಸೇರಿದರು.


ಪ್ರಸಕ್ತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಇದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.


ಮಿಜೋರಾಂ


ಮಿಜೋರಾಂನಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮತದಾನ ನಡೆಯಲಿದೆ ಅಥವಾ ಡಿಸೆಂಬರ್ 17 ರಂದು ವಿಧಾನಸಭೆಯ ಅಧಿಕಾರಾವಧಿ ಕೊನೆಗೊಳ್ಳಲಿದೆ.


ಪ್ರಸ್ತುತ, ಮಿಜೋ ನ್ಯಾಷನಲ್ ಫ್ರಂಟ್ (MNF) ಮುಖ್ಯಮಂತ್ರಿ ಝೋರಂತಂಗ ನೇತೃತ್ವದಲ್ಲಿ ಅಧಿಕಾರದಲ್ಲಿದೆ. 2018 ರಲ್ಲಿ, 40 ಸದಸ್ಯ-ಅಸೆಂಬ್ಲಿಯಲ್ಲಿ MNF 26 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಎಂಟು ಸ್ಥಾನಗಳನ್ನು ಪಡೆದುಕೊಂಡಿತು.


ರಾಜ್ಯದಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಮೊದಲ ಬಾರಿಗೆ ತನ್ನ ಖಾತೆಯನ್ನು ಮಿಜೋರಾಂನಲ್ಲಿ ತೆರೆದಿದೆ.


ರಾಜಸ್ಥಾನ


ಕಾಂಗ್ರೆಸ್‌ ಅಧಿಕಾರದಲ್ಲಿರುವ ಬಹು ನಿರೀಕ್ಷಿತ ರಾಜಸ್ಥಾನ ವಿಧಾನಸಭೆ ಚುನಾವಣೆಯೂ ಇದೇ ವರ್ಷ ನಡೆಯಲಿದೆ. ಪ್ರಸ್ತುತ ರಾಜಸ್ಥಾನ ವಿಧಾನಸಭೆಯು ಜನವರಿ 14, 2024 ರಂದು ಕೊನೆಗೊಳ್ಳಲಿದ್ದು, ಡಿಸೆಂಬರ್‌ನಲ್ಲಿ ಚುನಾವಣೆಯನ್ನು ನಡೆಸಬಹುದು. 2018 ರ ಚುನಾವಣೆಯಲ್ಲಿ, ರಾಜಸ್ಥಾನದ 200 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿತು ಮತ್ತು 100 ಸ್ಥಾನಗಳನ್ನು ಗೆದ್ದಿತು. ಈ ಚುನಾವಣೆಯಲ್ಲಿ ಕೇಸರಿ ಪಕ್ಷ 73 ಸ್ಥಾನಗಳನ್ನು ಪಡೆದುಕೊಂಡಿತ್ತು.


ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನ ಸಾಕಷ್ಟು ಗಮನ ಸೆಳೆದಿದೆ. ಕಾಂಗ್ರೆಸ್‌ ರಾಜಸ್ಥಾನದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ನೋಡುತ್ತಿದ್ದರೆ, ಇತ್ತ ಬಿಜೆಪಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಆಂತರಿಕ ಭಿನ್ನಾಭಿಪ್ರಾಯದ ಲಾಭ ಪಡೆದುಕೊಳ್ಳಲು ನೋಡುತ್ತಿದೆ.
ತೆಲಂಗಾಣ


ತೆಲಂಗಾಣ ವಿಧಾನಸಭೆಯ ಅವಧಿ ಜನವರಿ 16ಕ್ಕೆ ಕೊನೆಗೊಳ್ಳಲಿರುವುದರಿಂದ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. 2024ರ ಲೋಕಸಭಾ ಚುನಾವಣೆಯ ಮೇಲೆ ಈಗಾಗಲೇ ಕಣ್ಣಿಟ್ಟಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ನೋಡುತ್ತಿದ್ದಾರೆ.


ಮತ್ತೊಂದೆಡೆ ಬಿಜೆಪಿ ತೆಲಂಗಾಣದಲ್ಲಿ ಕಾಲಿಡಲು ಯತ್ನಿಸುತ್ತಿದ್ದು, ರಾಜ್ಯ ರಚನೆಯಾದಾಗಿನಿಂದ ಅಧಿಕಾರದಲ್ಲಿರುವ ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಗುರಿ ಹೊಂದಿದೆ.

Published by:Latha CG
First published: