Assembly Election 2021: ಇಂದು ಟಿಎಂಸಿ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ; ನಂದಿಗ್ರಾಮದಲ್ಲೇ ಬಿಡುಗಡೆ ಏಕೆ ಎಂಬುದೇ ಕುತೂಹಲ
West Bengal Election 2021: ಸಾಮಾನ್ಯವಾಗಿ ಈವರೆಗೂ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ವಿಧಾನಸಭಾ ಚುನಾವಣೆಗಳ ಪ್ರಣಾಳಿಕೆ ಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ ನಂದಿಗ್ರಾಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಕೋಲ್ಕತ್ತಾ, ಮಾ. 17: ಇಡೀ ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ಅಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಈವರೆಗೂ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ವಿಧಾನಸಭಾ ಚುನಾವಣೆಗಳ ಪ್ರಣಾಳಿಕೆ ಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ ನಂದಿಗ್ರಾಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ನಂದಿಗ್ರಾಮದಲ್ಲಿ ಮತ್ತು 'ಇಂದೇ' ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಈ ಚುನಾವಣೆಯನ್ನು ಬಿಜೆಪಿ ಬಹಳ ಪ್ರತಿಷ್ಟೆಯಾಗಿ ತೆಗೆದುಕೊಂಡು ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮತ್ತು ಸಂಸದರನ್ನೇ ತನ್ನಡೆಗೆ ಸೆಳೆಯುತ್ತಿದೆ. ಈ ಪೈಕಿ ಒಂದು ಕಾಲದ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಕೂಡ ಒಬ್ಬರು. ಸುವೇಂದು ಅಧಿಕಾರಿ ಖುದ್ದು ನಂದಿಗ್ರಾಮ ಕ್ಷೇತ್ರದವರು ಮತ್ತು ಕಳೆದ ಬಾರಿ ನಂದಿಗ್ರಾಮ ಕ್ಷೇತ್ರದಿಂದಲೇ ತೃಣಮೂಲ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆ ಆಗಿದ್ದವರು. ಅವರೇ ಈ ಚುನಾವಣೆ ಹೊಸ್ತಿಲಲ್ಲಿ ಎಲ್ಲರಿಗಿಂತ ಮೊದಲು ತೃಣಮೂಲ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದವರು ಕೂಡ. ಇದಾದ ಬಳಿಕ ಅವರು ತಾನು ಈ ಬಾರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎಂದು ಅಬ್ಬರಿಸಿದರು. ಇದಕ್ಕೆ ತಕ್ಕ ಉತ್ತರ ನೀಡಬೇಕೆಂದು ಮಮತಾ ಬ್ಯಾನರ್ಜಿ ತಮ್ಮ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದರು.
ಹೀಗೆ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಕಣಕ್ಕೆ ಇಳಿಯುತ್ತಿರುವುದರಿಂದ ನಂದಿಗ್ರಾಮದಲ್ಲೇ, ಜೊತೆಗೆ ಮಾರ್ಚ್ 17 ನಂದಿಗ್ರಾಮ ದಿವಸ ಆಗಿರುವ ಕಾರಣಕ್ಕೆ ಇವತ್ತೇ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ ಎನ್ನಲಾಗಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ಅವರು ರಾಜಕೀಯವಾಗಿ ಉನ್ನತಿ ಕಂಡುಕೊಂಡದ್ದು ಕೂಡ 'ನಂದಿಗ್ರಾಮ' ಹೋರಾಟದಿಂದ. ಅದೇ ಹಿನ್ನೆಲೆಯಲ್ಲಿ ಅವರು ಈ ಬಾರಿ ನಂದಿಗ್ರಾಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಜೊತೆಗೆ ನಂದಿಗ್ರಾಮ ಕ್ಷೇತ್ರದಲ್ಲೇ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಂದಿಗ್ರಾಮದಲ್ಲಿ ರೈತ ಮಹಾಪಂಚಾಯತ್:
ಇದಲ್ಲದೆ ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಇದೇ ನಂದಿಗ್ರಾಮದಲ್ಲಿ 'ರೈತ ಮಹಾಪಂಚಾಯತ್' ಕೂಡ ನಡೆಯಲಿದೆ. ಈಗಾಗಲೇ ರೈತ ನಾಯಕ ರಾಕೇಶ್ ಟಿಕಾಯತ್ ಮತ್ತಿತರರು ಪಶ್ಚಿಮ ಬಂಗಾಳದ ಬೇರೆ ಬೇರೆ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದು 'ರೈತರು ಬಿಜೆಪಿಗೆ ಮತ ನೀಡಬೇಡಿ' ಎಂದು ಕರೆಕೊಡುತ್ತಿದ್ದಾರೆ.
ನಂದಿಗ್ರಾಮದಲ್ಲಿ ನಡೆಯುವ ರೈತ ಮಹಾಪಂಚಾಯತ್ ನಲ್ಲಿ ಇನ್ನಷ್ಟು ಪ್ರಕರವಾಗಿ ಈ ಸಂದೇಶ ಸಾರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲೂ ಕೂಡ ನಂದಿಗ್ರಾಮ ಕ್ಷೇತ್ರ ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮಹತ್ವದ ಕ್ಷೇತ್ರವಾಗಿ ಪರಿಣಮಿಸಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ