ಉಂಡೂ ಹೋದ ಕೊಂಡೂ ಹೋದ ಸಿನಿಮಾ ಶೈಲಿಯಲ್ಲಿ ವಂಚನೆ; ಗರ್ಲ್​​ಫ್ರೆಂಡ್​​​​ ಬರ್ತ್ ಡೇ ಪಾರ್ಟಿಗಾಗಿ ಬೃಹ್ನಾಟಕ!

ಜಿಲ್ಲಾಧಿಕಾರಿ ಎಂದು ಫೋಸ್​ ಕೊಟ್ಟಿದ್ದನ್ನು ಪೊಲೀಸರು ನಂಬುತ್ತಿದ್ದಂತೆ ದತ್​ ಆತ್ಮವಿಶ್ವಾಸ ಅತಿಯಾಗಿದೆ. ಇನ್ನೂ ಒಂದು ಕೈ ನೋಡೇ ಬಿಡೋಣ ಎಂದು ಚೆಕ್​ಪೋಸ್ಟ್​​ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾನೆ. ಆಗಲೇ ಬಂಡವಾಳ ಬಯಲಾಗಿದೆ.

ಬಿಸ್ವಜ್ಯೋತಿ ದತ್

ಬಿಸ್ವಜ್ಯೋತಿ ದತ್

  • Share this:
ಮಣಿಪುರ: 29 ವರ್ಷಗಳ ಹಿಂದೆ ಕನ್ನಡದಲ್ಲಿ ಉಂಡೂ ಹೋದ ಕೊಂಡೂ ಹೋದ ಎಂಬ ಸಿನಿಮಾ ತೆರೆ ಕಂಡಿತ್ತು. ಚಿತ್ರದಲ್ಲಿ ನಟ ಅನಂತ್​ನಾಗ್​ ನಕಲಿ ಕವ್​ ಇನ್ಸ್​ಪೆಕ್ಟರ್​ ಆಗಿ ಊರಿನವರನ್ನೆಲ್ಲಾ ಮರುಳು ಮಾಡಿ ವಂಚಿಸುವ ಕಥೆ ಇತ್ತು. ಥೇಟ್​ ಇದೇ ಸಿನಿಮಾ ಮಾದರಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಲು ಹೋಗಿ ಇಲ್ಲೊಬ್ಬ ಭೂಪ ಸಿಕ್ಕಿ ಬಿದ್ದಿದ್ದಾನೆ. ಲಾಕ್​ಡೌನ್​ ಮಧ್ಯೆ ಗರ್ಲ್​​ಫ್ರೆಂಡ್​ ಬರ್ತ್​​ಡೇ ಪಾರ್ಟಿಗೆ ತೆರಳಲು ಯುವಕನೊಬ್ಬ ಆಡಿದ ನಾಟಕಕ್ಕೆ ಪೊಲೀಸರೇ ದಂಗಾಗಿದ್ದಾರೆ. ಬಿಸ್ವಜ್ಯೋತಿ ದತ್​ ಎಂಬ ಯುವಕ ಗರ್ಲ್​​ಫ್ರೆಂಡ್​ನ ಇಂಪ್ರೆಸ್​ ಮಾಡಲು ಹೋಗಿ ಇಂಗು ತಿಂದ ಮಂಗನಂತಾಗಿದ್ದಾನೆ. ಅಷ್ಟಕ್ಕೂ ಈತ ಏನು ಮಾಡಿದ್ದಾನೆ ಗೊತ್ತೆ..?

ಬಿಸ್ವಜ್ಯೋತಿ ದತ್ ಎಂಬ ಅಸ್ಸಾಂ ರಾಜ್ಯದ ಹದಿಹರೆಯದ ಯುವಕ ಚೆಕ್​​ ಪೋಸ್ಟ್​ನಲ್ಲಿದ್ದ ಪೊಲೀಸರಿಗೆ ತಾನು ಜಿಲ್ಲಾಧಿಕಾರಿ ಎಂದು ಮಂಕುಬೂದಿ ಎರೆಚಿದ್ದಾನೆ. ಬಾಡಿಗೆಗೆ ಕಾರನ್ನು ಪಡೆದು ಕಾರಿನ ಮುಂಭಾಗ ಜಿಲ್ಲಾಧಿಕಾರಿ ಎಂದು ನಾಮಫಲಕ ಹಾಕಿದ್ದಾನೆ. ಮೊದಮೊದಲು ಈತನ ಪ್ಲ್ಯಾನ್​ ಸಕ್ಸಸ್​ ಕೂಡ ಆಗಿದೆ. ನಾಮ ಫಲಕ ನೋಡುತ್ತಿದಂತೆ ಪರಿಶೀಲನೆ ನಡೆಸುತ್ತಿದ್ದ ಪೊಲೀಸರು ಸೆಲ್ಯೂಟ್​ ಹೊಡೆದು ವಾಹನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪ್ರೇಯಸಿಯ ಹುಟ್ಟಹಬ್ಬವನ್ನೂ ಭರ್ಜರಿಯಾಗಿ ಆಚರಿಸಿದ್ದಾನೆ. ಆದರೆ ಬರ್ತ್​ ಡೇ ಪಾರ್ಟಿಯಿಂದ ಹಿಂತಿರುಗುವಾಗ ಬಂಡವಾಳ ಬಯಲಾಗಿದೆ.

ಜಿಲ್ಲಾಧಿಕಾರಿ ಎಂದು ಫೋಸ್​ ಕೊಟ್ಟಿದ್ದನ್ನು ಪೊಲೀಸರು ನಂಬುತ್ತಿದ್ದಂತೆ ದತ್​ ಆತ್ಮವಿಶ್ವಾಸ ಅತಿಯಾಗಿದೆ. ಇನ್ನೂ ಒಂದು ಕೈ ನೋಡೇ ಬಿಡೋಣ ಎಂದು ಚೆಕ್​ಪೋಸ್ಟ್​​ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾನೆ. ಪೊಲೀಸರನ್ನು ವಿಚಾರಿಸಿದ್ದಾನೆ. ಎಲ್ಲಾ ಸರಿಯಾಗಿ ನಡೆಯುತ್ತಿದೆಯಾ ಎಂದು ಗತ್ತಿನಲ್ಲೇ ಕೇಳಿದ್ದಾನೆ. ಮೊದಮೊದಲು ನಂಬಿದ ಪೊಲೀಸರಿಗೆ ಯುವಕನ ಅತಿಯಾದ ವರ್ತನೆಯಿಂದ ಅನುಮಾನ ಬಂದಿದೆ. ಕೂಡಲೇ ದತ್​ ಹಾಗೂ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗಲೂ ದತ್​ ತಾನು ಡಿಸಿ ಅಂತಲೇ ಫೋಸ್​ ಕೊಟ್ಟಿದ್ದಾನೆ.

ಆದರೆ ಕಾರಿನ ಚಾಲನ ಯುವಕನ ಕಳ್ಳಾಟವನ್ನೆಲ್ಲಾ ಬಾಯ್ಬಿಟ್ಟಿದ್ದ. ತನಗೆ ಹಣ ಕೊಟ್ಟು ಈ ರೀತಿ ಬರುವಂತೆ ಒತ್ತಾಯಿಸಿ ಕರೆ ತಂದಿದ್ದಾನೆ. ಇನ್ನೂ ನನಗೆ ಹಣವನ್ನು ಕೊಟ್ಟಿಲ್ಲ ಎಂದು ಚಾಲಕ ಪೊಲೀಸರ ಎದುರು ಅವಲತ್ತುಕೊಂಡಿದ್ದ. ಕೋವಿಡ್​ ಡ್ಯೂಟಿಯಲ್ಲಿದ್ದ ಪೊಲೀಸರು ಯುವಕನ ಕಳ್ಳಾಟ ಕಂಡು ಕೆಂಡಾಮಂಡಲಾಗಿದ್ದರು. ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಲಾಕ್​ಡೌನ್​ ನಿಯಮಗಳನ್ನು ಮುರಿದ ತಪ್ಪಿಗೆ ಬಿಸ್ವಜ್ಯೋತಿ ದತ್​​ನನ್ನು ಬಂಧಿಸಿದ್ದಾರೆ.

ಇದೇ ಮೊದಲ ಬಾರಿಗೆ ಅಲ್ಲ ಈ ಹಿಂದೆಯೂ ದತ್​ ಇದೇ ರೀತಿ ಸುಳ್ಳು ಹೇಳಿಕೊಂಡು ವಂಚಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಇತಿಹಾಸವಿದೆ. ಕಳೆದ ವರ್ಷದ ಲಾಕ್​ಡೌನ್​ ವೇಳೆ ತಾನೊಬ್ಬ ಖ್ಯಾತ ವಕೀಲ ಎಂದು ಹೇಳಿಕೊಂಡಿದ್ದ. ಇನ್ನೂ ಹಲವೆಡೆ ತಾನೊಬ್ಬ ವೈದ್ಯನೆಂದು ಹೇಳಿಕೊಂಡು ಹಳ್ಳಿಯ ಜನರಿಂದ ಹಣವನ್ನೂ ಪೀಕಿದ್ದ. ಸರ್ಕಾರಿ ಅಧಿಕಾರಿ, ವಕೀಲ, ವೈದ್ಯ ಅಂತ ದಿನಕ್ಕೊಂದು ವೃತ್ತಿ ಹೇಳಿಕೊಂಡು ವಂಚಿಸುವುದನ್ನೇ ಚಟ ಮಾಡಿಕೊಂಡಿರುವ ದತ್​ ಸದ್ಯ ಕಂಬಿ ಎಣಿಸುತ್ತಿದ್ದಾನೆ.
Published by:Kavya V
First published: