ನವದೆಹಲಿ, ಆ. 16: ಕೇಂದ್ರ ಸರ್ಕಾರ ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸುವ ಮೂಲಕ ಪಕ್ಷದ ನಿಲುವಿಗೆ ಭಿನ್ನವಾದ ನಿಲುವನ್ನು ತಳೆದು ಸುದ್ದಿ ಮಾಡಿದ್ದ ಅಸ್ಸಾಮ್ನ ಮಾಜಿ ಸಂಸದೆ ಸುಷ್ಮಿತಾ ದೇವ್ ಇದೀಗ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದಾರೆ. ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್ ಅನ್ನೂ ಬದಲಾಯಿಸಿಕೊಂಡಿದ್ದು, ಮಾಜಿ ಕಾಂಗ್ರೆಸ್ ನಾಯಕಿ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದ ವಿವಿಧ ಆಂತರಿಕ ವಾಟ್ಸಾಪ್ ಗ್ರೂಪ್ಗಳಿಂದಲೂ ಅವರು ಹೊರಬಂದಿದ್ದಾರೆ. ಅವರು ಸುಷ್ಮಿತಾ ದೇವ್ ಯಾವ ಪಕ್ಷ ಸೇರುತ್ತಾರೆಂಬುದು ಖಚಿತವಾಗಿಲ್ಲವಾದರೂ ಮೂಲಗಳ ಪ್ರಕಾರ ಅವರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ಧಾರೆ. ಇದೀಗ ಕೋಲ್ಕತಾದಲ್ಲಿರುವ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನ ಭೇಟಿ ಮಾಡಲಿದ್ದಾರೆನ್ನಲಾಗಿದೆ. ಒಂದು ವೇಳೆ ಸುಷ್ಮಿತಾ ದೇವ್ ಅವರು ಟಿಎಂಸಿಯನ್ನ ಸೇರಿದರೆ ಅವರು ಅಸ್ಸಾಮ್ನಲ್ಲಿ ಟಿಎಂಸಿಯನ್ನ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸುಷ್ಮಿತಾ ದೇವ್ ರಾಜೀನಾಮೆ ಕೊಟ್ಟಿದ್ಧಾರೆ. ಇನ್ನು, ಆಕೆ ಪಕ್ಷ ತ್ಯಜಿಸಿರುವ ಬಗ್ಗೆ ಕಪಿಲ್ ಸಿಬಾಲ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ಧಾರೆ. “ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸುಷ್ಮಿತಾ ದೇವ್ ರಾಜೀನಾಮೆ ನೀಡಿದ್ದಾರೆ. ನಮ್ಮ ಯುವ ನಾಯಕರುಗಳು ಪಕ್ಷ ತೊರೆಯುತ್ತಿರುವಂತೆಯೇ ಪಕ್ಷದ ಬಲವರ್ದನೆ ಮಾಡಿದ ಕರ್ಮಕ್ಕೆ ನಾವು ಹಳಬರು ಟೀಕೆ ಎದುರಿಸಬೇಕಾಗಿದೆ. ಕಣ್ಣು ಮುಚ್ಚಿಕೊಂಡು ಪಕ್ಷ ಮುಂದೆ ಸಾಗುತ್ತದೆ” ಎಂದು ಹಿರಿಯ ರೆಬೆಲ್ ಕಪಿಲ್ ಸಿಬಲ್ ಬರೆದುಕೊಂಡಿದ್ದಾರೆ.
ಅಸ್ಸಾಮ್ನ ಸಿಲ್ಚಾರ್ ಕ್ಷೇತ್ರದಿಂದ ಸಂಸತ್ಗೆ ಚುನಾಯಿತರಾಗಿದ್ದ ಸುಷ್ಮಿತಾ ದೇವ್ ಅವರು ಅಸ್ಸಾಮ್ ಕಾಂಗ್ರೆಸ್ನ ದೊಡ್ಡ ಮುಖಂಡರೆನಿಸಿದ ಸಂತೋಷ್ ಮೋಹನ್ ದೇವ್ ಅವರ ಪುತ್ರಿ. ಇವರು ಅಸ್ಸಾಮಿಯರಾಗಿದ್ದರೂ ಬಂಗಾಳಿ ಭಾಷಿಕರು. ಕಾಂಗ್ರೆಸ್ನ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದ ಸುಷ್ಮಿತಾ ದೇವ್ ಅವರು ಮೂರು ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದರು.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲು ಸಂಘಟನೆ ವಿರೋಧ
ಸುಷ್ಮಿತಾ ದೇವ್ ಅವರು ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಭಿನ್ನ ನಿಲುವು ತಳೆದು ಸುದ್ದಿ ಮಾಡಿದ್ದರು. ಸಿಎಎಗೆ ಬರಾಕ್ ಕಣಿವೆಯ ಜನರ ಬೆಂಬಲ ಇದೆ. ಆದ್ದರಿಂದ ತಾನೂ ಬೆಂಬಲಿಸುತ್ತೇನೆ. ವಿಭಜನೆಯ ವೇಳೆ ಸಂತ್ರಸ್ತರಾದವರ ಕಷ್ಟ ತನಗೆ ಚೆನ್ನಾಗಿ ಗೊತ್ತಿದೆ. ಬಾಂಗ್ಲಾದೇಶಿ ಹಿಂದೂಗಳಿಗೆ ಪೌರತ್ವ ಕೊಡಲು ಸಿಎಎ ನೆರವಾಗುತ್ತದೆ ಎಂದು ಸುಷ್ಮಿತಾ ದೇವ್ ಅವರ ಅಭಿಪ್ರಾಯ. ಅಸ್ಸಾಮ್ನಲ್ಲಿರುವ ಬರಾಕ್ ವ್ಯಾಲಿಯಲ್ಲಿ ಬಂಗಾಳೀ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
“ವಲಸಿಗ ಎಂದರೆ ಹೇಗಿರುತ್ತೆ ಎಂದು ನಮಗೆ ಗೊತ್ತು. ಇಂಥ ಕಾನೂನಿಗೆ ನನ್ನ ಬೆಂಬಲ ಇರುತ್ತದೆ. ಆದರೆ, ಈ ಸಿಎಎ ಕಾಯ್ದೆಯಿಂದ ಯಾರಿಗೂ ಪೌರತ್ವ ಕೊಡಲು ಸಾಧ್ಯವಿಲ್ಲ. ಈ ಕಾಯ್ದೆಗೆ ಕೆಲ ತಿದ್ದುಪಡಿ ಮಾಡಿದರೆ ಸರಿ ಇರುತ್ತದೆ. ಅದರಲ್ಲೂ ಮುಸ್ಲಿಮರನ್ನ ಈ ಕಾಯ್ದೆ ವ್ಯಾಪ್ತಿ ತಂದರೆ ನಾನು ಖಂಡಿತ ಬೆಂಬಲಿಸುವೆ” ಎಂದು ಸುಷ್ಮಿತಾ ದೇವ್ ಹೇಳಿದ್ದರು.
ಇದನ್ನೂ ಓದಿ: Explained: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ..! ಭಾರತ ಮಾಡಬೇಕಿರುವುದು ಏನು.? ಇಲ್ಲಿದೆ ವಿವರ..
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ