Assam Flood: ಅಸ್ಸಾಂ ಪ್ರವಾಹಕ್ಕೆ 76 ಬಲಿ; ಊರಿಗೆ ಊರೇ ಮುಳುಗಡೆ, 50ಕ್ಕೂ ಹೆಚ್ಚು ಕಾಡುಪ್ರಾಣಿಗಳು ಜಲಸಮಾಧಿ

Assam Floods: ಅಸ್ಸಾಂನಲ್ಲಿ 13 ನದಿಗಳು ಒಂದೇ ಬಾರಿಗೆ ಉಕ್ಕಿ ಹರಿದ ಪರಿಣಾಮ ಕಾಝಿರಂಗ ನ್ಯಾಷನಲ್ ಪಾರ್ಕ್ ಬಹುತೇಕ ಮುಳುಗಡೆಯಾಗಿದೆ. ಇಲ್ಲಿನ ಸುಮಾರು 51 ವನ್ಯಪ್ರಾಣಿಗಳು ಸಾವನ್ನಪ್ಪಿವೆ. 100ಕ್ಕೂ ಹೆಚ್ಚು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಪ್ರವಾಹದಿಂದ ಜಲಾವೃತವಾಗಿರುವ ಅಸ್ಸಾಂ

ಪ್ರವಾಹದಿಂದ ಜಲಾವೃತವಾಗಿರುವ ಅಸ್ಸಾಂ

  • Share this:
ಅಸ್ಸಾಂ (ಜು. 14): ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದ ಹೊಡೆತಕ್ಕೆ ಸಿಲುಕಿ ಸೋಮವಾರ ಮತ್ತೆ 6 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಅಸ್ಸಾಂನ ಪ್ರವಾಹಕ್ಕೆ ಒಟ್ಟು 76 ಜನರು ಬಲಿಯಾದಂತಾಗಿದೆ. ಇದುವರೆಗೂ ಅಸ್ಸಾಂನ 27 ಜಿಲ್ಲೆಗಳಲ್ಲಿನ 22 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ.

ಅಸ್ಸಾಂನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಅಸ್ಸಾಂ ಲಕ್ಷಿಂಪುರ್, ಬಾರ್ಪೇಟ, ಬೊಂಗೈಗಾಂವ್, ಕಾಮರೂಪ್, ಗೋಲಾಘಾಟ್​ ಮತ್ತು ಶಿವಸಾಗರದ ತಲಾ ಒಬ್ಬರು ನಿನ್ನೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಒಟ್ಟಾರೆ ಸಾವನ್ನಪ್ಪಿರುವ 76 ಜನರಲ್ಲಿ 26 ಜನರು ಭೂಕುಸಿತದಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಅಸ್ಸಾಂನ ಪ್ರವಾಹ ಪರಿಸ್ಥಿತಿಯನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.ಅಸ್ಸಾಂ ರಾಜ್ಯದ 12.63 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಹೊಡೆತಕ್ಕೆ ತುತ್ತಾಗಿದ್ದಾರೆ. ಬಾರ್ಪೇಟದಲ್ಲಿ ಅತಿಹೆಚ್ಚು ಜನರು ಅಂದರೆ 5.44 ಲಕ್ಷ ಜನರು ಪ್ರವಾಹದಿಂದ ನಲುಗಿಹೋಗಿದ್ದಾರೆ. ಬಹುತೇಕ ಅಸ್ಸಾಂ ರಾಜ್ಯವೇ ನೀರಿನಿಂದ ಆವೃತವಾಗಿದೆ.ಯುನೆಸ್ಕೋದ ಮಾನ್ಯತೆ ಪಡೆದಿರುವ ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್​ ಬಹುತೇಕ ಪ್ರವಾಹದಿಂದ ಜಲಾವೃತವಾಗಿದೆ. ಇದರಿಂದ ವನ್ಯಜೀವಿಗಳು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ನ್ಯಾನಷಲ್ ಪಾರ್ಕ್​ನ ಹುಲಿ ಪ್ರವಾಹದ ನೀರಿನಿಂದ ಕೊಚ್ಚಿಹೋಗುವುದರಿಂದ ತಪ್ಪಿಸಿಕೊಳ್ಳಲು ಮೇಕೆಯ ಗೂಡಿನಡಿ ಅಡಗಿಕುಳಿತಿದ್ದ ವಿಡಿಯೋ ಈಗ ವೈರಲ್ ಆಗಿದೆ.13 ನದಿಗಳು ಒಂದೇ ಬಾರಿಗೆ ಉಕ್ಕಿ ಹರಿದ ಪರಿಣಾಮ ಈ ನ್ಯಾಷನಲ್ ಪಾರ್ಕ್ ಬಹುತೇಕ ಮುಳುಗಡೆಯಾಗಿದೆ. ಈ ಕಾರಣದಿಂದ ಇಲ್ಲಿನ ಸುಮಾರು 51 ವನ್ಯಪ್ರಾಣಿಗಳು ಸಾವನ್ನಪ್ಪಿವೆ. 100ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅನೇಕ ಹುಲಿಗಳನ್ನು ಕೂಡ ಇಲ್ಲಿಂದ ರಕ್ಷಿಸಲಾಗಿದೆ.
Published by:Sushma Chakre
First published: