news18-kannada Updated:November 13, 2020, 1:21 PM IST
ಅಸ್ಸಾಂ ಪತ್ರಕರ್ತ ಪರಾಗ್ ಭುಯಾನ್
ನವದೆಹಲಿ (ನ. 13): ಅಸ್ಸಾಂನ ಸ್ಥಳೀಯ ಚಾನೆಲ್ವೊಂದರ ಪತ್ರಕರ್ತರೊಬ್ಬರು ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿರುವ ತಮ್ಮ ಮನೆಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಏರಿಯಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ್ದಕ್ಕಾಗಿ ಪತ್ರಕರ್ತ ಪರಾಗ್ ಭುಯಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಆದೇಶಿಸಿದ್ದಾರೆ.
ಅಸ್ಸಾಂ ಪತ್ರಕರ್ತನ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸೋನೊವಾಲ್ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಖಾಸಗಿ ವಾಹಿನಿಯ ಪತ್ರಕರ್ತ ಪರಾಗ್ ಭುಯಾನ್ ವಾಹನಕ್ಕೆ ಬುಧವಾರ ರಾತ್ರಿ ಅವರ ಮನೆಯ ಬಳಿಯೇ ಬೇರೆ ವಾಹನ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪರಾಗ್ ಭುಯಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕವ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ವಾಹನಿಯ ಮುಖ್ಯಸ್ಥರು ಮತ್ತು ಪರಾಗ್ ಕುಟುಂಬಸ್ಥರು ಆರೋಪಿಸಿದ್ದರು.
ಇದನ್ನೂ ಓದಿ: Green Crackers: ಹಸಿರು ಪಟಾಕಿಯನ್ನು ಪತ್ತೆ ಹಚ್ಚುವುದು ಹೇಗೆ?; ಸರ್ಕಾರ ನೀಡಿದ ಮಾಹಿತಿ ಇಲ್ಲಿದೆ
ಪರಾಗ್ ಭುಯಾನ್ ಅವರನ್ನು ಹೊಡೆದುರುಳಿಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಆ ವಾಹನದ ಚಾಲಕನನ್ನು ಕೂಡ ಬಂಧಿಸಲಾಗಿದೆ. ಘಟನೆ ನಡೆದು 15 ಗಂಟೆಗಳಾದ ಬಳಿಕ ಪೊಲೀಸರು ಅಪಘಾತ ಮಾಡಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರಂಭಿಕವಾಗಿ ಪೊಲೀಸರು ನಡೆಸಿದ ತನಿಖೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪರಾಗ್ ಅವರು ಸ್ಥಳೀಯವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಸೆರೆಹಿಡಿದು, ಬಯಲು ಮಾಡಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರು ಕೆಲಸ ನಿರ್ವಹಿಸುತ್ತಿದ್ದ ವಾಹಿನಿಯ ಸಂಪಾದಕರು ಆರೋಪಿಸಿದ್ದಾರೆ.
ಹೀಗಾಗಿ, ಈ ಪ್ರಕರಣವನ್ನು ಸೂಕ್ತ ಸಮಯದೊಳಗೆ ತನಿಖೆ ನಡೆಸುವಂತೆ ಸಿಐಡಿಗೆ ವಹಿಸಲಾಗಿದೆ. ಮೃತಪಟ್ಟಿರುವ ಪರಾಗ್ ಅಸ್ಸಾಂನ ಟಿನ್ಸೂಕಿಯ ಜಿಲ್ಲಾ ಪ್ರೆಸ್ ಕ್ಲಬ್ನ ಉಪಾಧ್ಯಕ್ಷರೂ ಆಗಿದ್ದರು. ಹಾಗೇ, ಇವರು ಅಸೋಮ್ ಗಾನ ಪರಿಷದ್ ನಾಯಕ ಜಗದೀಶ್ ಭುಯಾನ್ ಅವರ ತಮ್ಮ ಕೂಡ ಹೌದು. ಹೀಗಾಗಿ, ಈ ಪ್ರಕರಣ ರಾಜ್ಯಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು.
Published by:
Sushma Chakre
First published:
November 13, 2020, 1:21 PM IST