ಎದೆಯ ಮಟ್ಟದ ನೀರನ್ನೂ ಲೆಕ್ಕಿಸದೇ ದೇಶಾಭಿಮಾನ ಮೆರೆದ ಪೋರನಿಗೆ ಸಿಗಲಿಲ್ಲ ಭಾರತದ ಪೌರತ್ವ..!

ಮಳೆ, ಆಳೆತ್ತರದ ನೀರು, ಯಾವುದನ್ನೂ ಲೆಕ್ಕಸಲಿಲ್ಲ ಈ ಹುಡುಗ. ಆದರೆ ಕೇಂದ್ರ ಹೊರತಂದ ಎನ್​ಆರ್​ಸಿ ಪಟ್ಟಿಯಲ್ಲಿ ಕಡೆಗೂ ಸಿಗಲಿಲ್ಲ ದೇಶಾಭಿಮಾನಿಗೆ ಜಾಗ.

Sharath Sharma Kalagaru | news18
Updated:August 15, 2018, 12:32 PM IST
ಎದೆಯ ಮಟ್ಟದ ನೀರನ್ನೂ ಲೆಕ್ಕಿಸದೇ ದೇಶಾಭಿಮಾನ ಮೆರೆದ ಪೋರನಿಗೆ ಸಿಗಲಿಲ್ಲ ಭಾರತದ ಪೌರತ್ವ..!
ಮಳೆ, ಆಳೆತ್ತರದ ನೀರು, ಯಾವುದನ್ನೂ ಲೆಕ್ಕಸಲಿಲ್ಲ ಈ ಹುಡುಗ. ಆದರೆ ಕೇಂದ್ರ ಹೊರತಂದ ಎನ್​ಆರ್​ಸಿ ಪಟ್ಟಿಯಲ್ಲಿ ಕಡೆಗೂ ಸಿಗಲಿಲ್ಲ ದೇಶಾಭಿಮಾನಿಗೆ ಜಾಗ.
Sharath Sharma Kalagaru | news18
Updated: August 15, 2018, 12:32 PM IST
ನ್ಯೂಸ್​ 18 ಕನ್ನಡ

ಅಸ್ಸಾಂ (ಆಗಸ್ಟ್​ 15): ಈ ಚಿತ್ರವನ್ನು ನೋಡಿದರೆ ಎಂಥವರಿಗೂ ದೇಶದ ಮೇಲೆ ಪ್ರೇಮ ಉಕ್ಕುತ್ತದೆ. ಹೆಮ್ಮೆಯ ಭಾವ ಇಮ್ಮಡಿಯಾಗುತ್ತದೆ. ಎದೆಯ ಮಟ್ಟಕ್ಕೆ ನೀರು ನಿಂತಿದ್ದರೂ 2017ರ ಆಗಸ್ಟ್​ 18ರಂದು ಅಸ್ಸಾಂನ ಈ ಪುಟ್ಟ ಹುಡುಗರು ಧ್ವಜಾರೋಹಣ ಮಾಡಿ ದೇಶಾದ್ಯಂತ ಮಾತಾಗಿದ್ದರು. ದುರಂತವೆಂದರೆ ಈ ಚಿತ್ರದಲ್ಲಿರುವ ಮೂವರಿಗೆ ದೇಶದ ಪೌರತ್ವ ಸಿಕ್ಕರೆ ಒಬ್ಬನಿಗೆ ಮಾತ್ರ ಸಿಕ್ಕಿಲ್ಲ.

ಕಳೆದ ವರ್ಷ ಮಳೆಯಿಂದ ಮುಳುಗಡೆಯಾದ ಸ್ಥಳದಲ್ಲೂ ರಾಷ್ಟ್ರ ಪ್ರೇಮ ಮೆರೆದ 9 ವರ್ಷದ ಹೈದರ್​, ಈ ವರ್ಷದ ಸ್ವಾತಂತ್ರ್ಯೋತ್ಸವದ ಮುನ್ನ ಬಿಡುಗಡೆಯಾದ ನಾಗರಿಕ ರಾಷ್ಟ್ರೀಯ ನೋಂದಣಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ಮೇಲಿನ ಚಿತ್ರದಲ್ಲಿರುವ ಹೈದರ್​ ಕುಟುಂಬದ ಜೈರುಲ್​ ಖಾನ್​ (10 ವರ್ಷ), ಅಸ್ಸಾಂನ ದುಬ್ರಿ ಜಿಲ್ಲೆಯ ಹೈದರ್​ ಓದುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕ ತಾಜನ್​ ಸಿಕ್ದರ್​, ಸಹಾಯಕ ಶಿಕ್ಷಕ ನ್ರಿಪನ್​ ರಬಾ ನಾಗರಿಕ ನೋಂದಣಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇಂಡಿಯನ್​ ಎಕ್ಸ್​ಪ್ರೆಸ್​ ವರದಿಯ ಪ್ರಕಾರ, ಹೈದರ್​ನ 12 ವರ್ಷದ ಅಣ್ಣ, 6 ವರ್ಷದ ತಂಗಿ ಮತ್ತು ತಾತ ಕೂಡ ಎನ್​ಆರ್​ಸಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಹೈದರ್​ ಹೆಸರು ಮಾತ್ರ ಪಟ್ಟಿಯಲ್ಲಿ ಸೇರಿಲ್ಲ.

"ನನಗೆ ರಾಷ್ಟ್ರೀಯ ನಾಗರಿಕ ನೋಂದಣಿ ಎಂದರೇನು ಎಂಬುದು ಗೊತ್ತಿಲ್ಲ. ನನ್ನ ಸುತ್ತಮುತ್ತಲು ತಿಳಿದವರು ಏನು ಹೇಳುತ್ತಾರೋ ನಾನು ಹಾಗೆ ಮಾಡುತ್ತೇನೆ," ಎಂದು ಹೈದರ್​ ಇಂಡಿಯನ್​ ಎಕ್ಸ್​ಪ್ರೆಸ್​ ಪತ್ರಿಕೆಗೆ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾನೆ.

ಹೈದರ್​ ನೆರೆಹೊರೆಯ ಮಂದಿ ಹೇಳುವ ಪ್ರಕಾರ, ಕೆಲವೊಮ್ಮೆ ಅವರನ್ನು ಬಾಂಗ್ಲಾದೇಶಿಗರು ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಅವರು ಅಪ್ಪಟ ದೇಶಪ್ರೇಮಿಗಳು ಮತ್ತು ಭಾರತೀಯರು ಎನ್ನುತ್ತಾರೆ ಹೈದರ್​ ನೆಲೆಸಿರುವ ಬರ್ಕಾಲಿಯಾ-ನಸ್ಕರಾ ಗ್ರಾಮದ ನಿವಾಸಿಯೊಬ್ಬರು. ಎನ್​ಆರ್​ಸಿ ಅಂತಿಮ ಪಟ್ಟಿಯಲ್ಲಾದರೂ ಹೈದರ್​ ಹೆಸರು ಸೇರ್ಪಡೆಯಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ರಾಷ್ಟ್ರೀಯ ನಾಗರಿಕ ನೋಂದಣಿಯ ಅಂತಿಮ ಪಟ್ಟಿ ಇದೇ ವರ್ಷದ ಜುಲೈ 30ರಂದು ಬಿಡುಗಡೆ ಮಾಡಲಾಗಿತ್ತು. 3.29 ಕೋಟಿ ಜನರಲ್ಲಿ 2.89 ಕೋಟಿ ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಮೂಲಕ ಬಾಂಗ್ಲಾದೇಶದಿಂದ ಹಲವು ವರ್ಷಗಳ ಹಿಂದೆ ಅಸ್ಸಾಂಗೆ ವಲಸೆ ಬಂದವರಲ್ಲಿ ಬಹುತೇಕರು ಭಾರತೀಯ ಪೌರತ್ವವನ್ನು ಅಧಿಕೃತವಾಗಿ ಪಡೆದಿದ್ದರು. ಆದರೆ ಈ ಪಟ್ಟಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಯಾಕೆಂದರೆ ಹೈದರ್​ ರೀತಿಯ ಸಾವಿರಾರು ನಿದರ್ಶನಗಳು ಪಟ್ಟಿಯಲ್ಲಿದ್ದವು. ಒಂದೇ ಕುಟುಂಬ ಕೆಲವರಿಗೆ ಪೌರತ್ವ ದೊರೆತರೆ ಕೆಲವರಿಗೆ ಪೌರತ್ವ ದೊರೆತಿರಲಿಲ್ಲ. ಉದಾಹರಣೆಗೆ ಗಂಡನಿಗೆ ಪೌರತ್ವ ಸಿಕ್ಕರೆ ಹೆಂಡತಿ ಪೌರತ್ವದಿಂದ ವಂಚಿತರಾಗಿದ್ದರು.
Loading...

40,70,707 ಮಂದಿಯ ಹೆಸರು ಪಟ್ಟಿಯಿಂದ ಕಾಣೆಯಾಗಿದ್ದರರೆ, 37,59,630 ಜನರ ಹೆಸರುಗಳು ತಿರಸ್ಕೃತ ಗೊಂಡಿದ್ದವು. ಜತೆಗೆ ಉಳಿದ 2,48,077 ಮಂದಿಯ ಹೆಸರು ಕಾಯ್ದಿರಿಸಲಾಗಿದೆ. ಇದಕ್ಕೂ ಮುನ್ನ, 2017ರ ಡಿಸೆಂಬರ್​ 31 ಮತ್ತು 2018ರ ಜನವರಿ 1ರಂದು ಕೋರ್ಟಿನ ಆದೇಶದನ್ವಯ ಎನ್​ಆರ್​ಸಿ ಮೊದಲ ಪಟ್ಟಿ ಬಿಡುಗಡೆಯಾಗಿತ್ತು. ಅದರಲ್ಲಿ 3.29 ಕೋಟಿ ಮಂದಿ ಅಭ್ಯರ್ಥಿಗಳಲ್ಲಿ 1.9 ಕೋಟಿ ಜನರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಎನ್​ಆರ್​ಸಿ ಪಟ್ಟಿಯಲ್ಲಿ ಹೈದರ್​ ರೀತಿಯ ಸಾವಿರಾರು ಜನರ ಹೆಸರು ಬಿಟ್ಟು ಹೋಗಿದೆ. ಸಣ್ಣ ವಯಸ್ಸಿನಲ್ಲೇ ದೇಶದ ಮೇಲೆ ಅಪಾರ ಅಭಿಮಾನ ತೋರಿದ್ದ ಹೈದರ್​ಗೆ ಭಾರತೀಯ ಪೌರತ್ವ ಮುಂದಾದರೂ ಸಿಗಲಿದೆಯಾ ಎಂಬುದನ್ನು ಕಾದುನೋಡಬೇಕು.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ