Real Hero- ನೀರಿನಲ್ಲಿ ಮುಳುಗುತ್ತಿದ್ದ ತಾಯಿ ಸೇರಿ ಐವರನ್ನು ರಕ್ಷಿಸಿದ ಶಾಲಾ ಬಾಲಕ ಈಗ ರಿಯಲ್ ಹೀರೋ

Assam Boat Tragedy: ಅಸ್ಸಾಮ್ ದೋಣಿ ದುರಂತ ಘಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿಯ ಪ್ರಾಣ ಉಳಿಸಿದ 16 ವರ್ಷದ ಬಾಲಕ ಪಪ್ಲು ಈಗ ರಿಯಲ್ ಹೀರೋ ಎನಿಸಿ ಮನೆಮಾತಾಗಿದ್ದಾನೆ.

ಅಸ್ಸಾಮ್ ದೋಣಿ ದುರಂತ

ಅಸ್ಸಾಮ್ ದೋಣಿ ದುರಂತ

 • News18
 • Last Updated :
 • Share this:
  ಗುವಾಹಟಿ, ಸೆ. 13: ಸಿನಿಮಾದಲ್ಲಿ ಹೀರೋ ಅಸಾಮಾನ್ಯ ರೀತಿಯಲ್ಲಿ ವಿಲನ್​ಗಳನ್ನ ಹೊಡೆದು ಅಮಾಯಕರ ರಕ್ಷಣೆ ಮಾಡುವುದನ್ನ ನೋಡುತ್ತಲೇ ಇರುತ್ತೇವೆ. ಅಸ್ಸಾಮ್​ನಲ್ಲೊಬ್ಬ ಬಾಲಕ ರಿಯಲ್ ಹೀರೋ ಎನಿಸಿದ್ದಾನೆ. ಸೆ. 8ರಂದು ಅಸ್ಸಾಮ್​ನ ಜೋರ್ಹತ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಸಾಗುತ್ತಿದ್ದ ಖಾಸಗಿ ಪ್ರಯಾಣಿಕ ದೋಣಿಯೊಂದು ನೀರಿಗೆ ಅಪಘಾತಕ್ಕೊಳಗಾಗಿ ಉರುಳಿಬಿದ್ದ ದುರಂತ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ, ಒಬ್ಬರು ಕಾಣೆಯಾಗಿದ್ದಾರೆ. 90 ಮಂದಿ ಇದ್ದ ಈ ದೋಣಿಯಲ್ಲಿ ಹಲವರು ಅದೃಷ್ಟ ರೀತಿಯಲ್ಲಿ ಬದುಕಿ ಬಂದು ದಡ ಸೇರಿದ್ದಾರೆ. ರಕ್ಷಣಾ ಸಿಬ್ಬಂದಿ, ಸ್ಥಳೀಯ ಗ್ರಾಮಸ್ಥರು ಮೊದಲಾದವರ ಕ್ಷಿಪ್ರ ಕಾರ್ಯಾಚರಣೆಯಿಂದ ಹೆಚ್ಚಿನ ಸಾವು ನೋವು ತಪ್ಪಿದೆ. ಇವರ ಪೈಕಿ ಹತ್ತನೇ ತರಗತಿ ವಿದ್ಯಾರ್ಥಿ ಪಪ್ಲು ತೇಡ್ (Paplu Taid) ಎಂಬಾತ ಸಾಕಷ್ಟು ಪ್ರಶಂಸೆಗೆ ಪಾತ್ರನಾಗಿದ್ದಾನೆ. ಈತನನ್ನು ದೇವರು ಎಂದು ಜನರು ಹೊಗಳುತ್ತಿದ್ದಾರೆ.

  ನಿಮತಿಘಾಟ್ ಬಳಿ ಸರ್ಕಾರದ ದೊಡ್ಡ ಹಡಗು ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಿದ ಈ ದೋಣಿಯಲ್ಲಿ ಪಪ್ಲು ತೇಡ್ ಹಾಗೂ ಈತನ ತಾಯಿ ಸೇರಿದಂತೆ 90 ಜನರಿದ್ದರು. ದೋಣಿ ಮುಳುಗುತ್ತಿದ್ದಂತೆಯೇ ಎಲ್ಲರೂ ತಂತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದರು. ಆದರೆ, ಪಪ್ಲು ತನಗೆ ಸಾಧ್ಯವಾದಷ್ಟೂ ಇತರರನ್ನು ಬದುಕಿಸಲು ಪ್ರಯತ್ನಿಸಿದ್ದ. ತನ್ನ ಜೀವ ಪಣಕ್ಕಿಟ್ಟು ಐದಕ್ಕೂ ಹೆಚ್ಚು ಮಂದಿಯನ್ನ ರಕ್ಷಿಸಿದ. ಈತನಿಂದ ರಕ್ಷಿಸಲ್ಪಟ್ಟ ಜನರು ಹಾಗೂ ಅವರ ಕುಟುಂಬಸ್ಥರು ಈತನನ್ನು ಸಾಕ್ಷಾತ್ ದೇವರೆಂದು ಆರಾದಿಸುತ್ತಿದ್ದಾರೆ. ರಿಯಲ್ ಹೀರೋ ಎಂದು ಹೊಗಳುತ್ತಿದ್ದಾರೆ.

  ಈತನ ಸಾಹಸ ಇದು:

  ಡಿಕ್ಕಿ ಹೊಡೆದು ದೋಣಿ ಮುಳುಗತೊಡಗುತ್ತಿದ್ದಂತೆಯೇ 16 ವರ್ಷದ ಪಪ್ಲು ತೇಡ್ ಕೂಡಲೇ ತನ್ನ ದೋಣಿಯಿಂದ ದೊಡ್ಡ ದೋಣಿಗೆ ಎಗರುತ್ತಾನೆ. ಅಲ್ಲಿಂದಲೇ ತನ್ನ ತಾಯಿಯನ್ನ ಕೂಗಿ ಕರೆಯುತ್ತಾನೆ. ಆದರೆ, ತಾಯಿ ನದಿ ನೀರಿನಲ್ಲಿ ಮುಳುಗುತ್ತಿರುವುದನ್ನ ಕಾಣುತ್ತಾನೆ. ಸ್ವಲ್ಪವೂ ಯೋಚಿಸದೇ ಆತ ನದಿಯೊಳಗೆ ನೆಗೆದು ಆಕೆಯನ್ನ ರಕ್ಷಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೇ ತನ್ನ ಶಾಲೆಯವರೇ ಆದ ಇಬ್ಬರು ವಿದ್ಯಾರ್ಥಿನಿಯರು ಒಳಗೊಂಡಂತೆ ನಾಲ್ಕಕ್ಕೂ ಹೆಚ್ಚು ಮಂದಿಯನ್ನು ಈತ ಕಾಪಾಡುತ್ತಾನೆ.

  ಇದನ್ನೂ ಓದಿ: IPL 2021- ಈ ಕನ್ನಡಿಗನಿಂದ 2-3 ಶತಕ: ಈ ಬಾರಿಯ ಐಪಿಎಲ್​ನಲ್ಲಿ ಗೌತಮ್ ಗಂಭೀರ್ ಭವಿಷ್ಯ

  ಪಪ್ಲು ತಾಯಿ ಹೇಳಿದ್ದು ಇದು: “ನಾನು ನೀರಿನಲ್ಲಿ ಈಜುತ್ತಾ ದಡ ಸೇರಲು ಪ್ರಯತ್ನಿಸುತ್ತಿದ್ದೆ. ಆದರೆ, ಸಾಕಷ್ಟು ಜನರು ನನ್ನ ಬಟ್ಟೆ ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ನನಗೆ ಬಹಳ ಕಷ್ಟವಾಗಿತ್ತು. ಸ್ವಲ್ಪವೂ ಮುಂದಕ್ಕೆ ಹೋಗಲು ಆಗುತ್ತಿರಲಿಲ್ಲ. ಆಗ ನನ್ನ ಮಗ ನನ್ನ ಸಹಾಯಕ್ಕೆ ಬಂದು ನನ್ನನ್ನು ದಡಕ್ಕೆ ಮುಟ್ಟಿಸಿದೆ. ಆತ ಇಲ್ಲದೇ ಹೋಗಿದ್ದರೆ ನಾನು ಬದುಕುತ್ತಿರಲಿಲ್ಲವೇನೋ” ಎಂದು ಆತನ ಅಮ್ಮ ಹೇಳುತ್ತಾರೆ.

  ಪಪ್ಲು ಕೈಯಿಂದ ರಕ್ಷಣೆಗೊಂಡ ಜನರಿಗೆ ತಮ್ಮ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಈ ರೀತಿ ಜೀವ ಉಳಿಸಿಕೊಂಡವರಲ್ಲಿ ಮಜೂಲಿಯ ಊಪರ್ ಕಟಾನಿ ಗ್ರಾಮದ ಪ್ರಸ್ತುತಿ ಹಜಾರಿಕಾ ಎಂಬ ಬಾಲಕಿ ಈತನ ಮನೆಗೆ ಬಂದು ಧನ್ಯವಾದ ಹೇಳಿದ್ದಲ್ಲದೇ ಅಸ್ಸಾಮಿ ವಿಶೇಷ ವಸ್ತ್ರವನ್ನು ಕೊಡುಗೆಯಾಗಿ ಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾಳೆ.

  “ದೋಣಿ ಮುಳುಗುತ್ತಿದ್ದಂತೆಯೇ ನೀರಿಗೆ ಬಿದ್ದ ನಾನು ಸಾವು ನಿಶ್ಚಿತ ಎಂದೇ ಭಾವಿಸಿದ್ದೆ. ಆಗ ದಾದಾ (ಸಹೋದರ) ನನ್ನನ್ನ ಕಂಡು ನೀರಿನಿಂದ ಮೇಲೆ ಎತ್ತಿದ. ಆತ ಇಲ್ಲದೇ ಇದ್ದರೆ ಪ್ರಾಣ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ನಾನು ಬದುಕಿದ್ದೇನೆ ಎಂದರೆ ಆತನಿಂದಲೇ” ಎಂದು ಪ್ರಸ್ತುತಿ ಹೇಳುತ್ತಾಳೆ. ಈಕೆಯ ತಂದೆ ಕೂಡ ಪಪ್ಲು ಕಾರ್ಯವನ್ನ ಶ್ಲಾಘಿಸಿದ್ದಾರೆ. ಈತ ನನ್ನ ಮಗಳ ಜೀವ ಉಳಿಸಿದ. ಈತನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಇವರು ಹೇಳುತ್ತಾರೆ.

  ದುರಂತ ಸಂಭವಿಸಿ ನಾಲ್ಕೈದು ದಿನವಾದರೂ ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಪಡೆಗಳು ಈಗಲೂ ರಕ್ಷಣಾ ಕಾರ್ಯಾಚರಣೆ ಮಾಡುತ್ತಿವೆ.
  Published by:Vijayasarthy SN
  First published: