Assam Flood: ಪ್ರವಾಹದಲ್ಲಿ ಸಿಲುಕಿದ ಜನರು, ಸಾಕುಪ್ರಾಣಿಗಳನ್ನು ದಡ ಸೇರಿಸಿದ ಅಸ್ಸಾಂ ಬಿಜೆಪಿ ಶಾಸಕ; ವಿಡಿಯೋ ವೈರಲ್

Assam Floods: ಅಸ್ಸಾಂನ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಅನೇಕ ಸ್ವಯಂಸೇವಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಗೆ ಅಸ್ಸಾಂನ ಬಿಜೆಪಿ ಶಾಸಕ ಮೃಣಾಲ್ ಸೈಕಿಯ ಕೂಡ ಕೈಜೋಡಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಿಸುತ್ತಿರುವ ಅಸ್ಸಾಂ ಶಾಸಕ ಮೃಣಾಲ್ ಸೈಕಿಯ

ಪ್ರವಾಹದಲ್ಲಿ ಸಿಲುಕಿದ ಮಕ್ಕಳನ್ನು ರಕ್ಷಿಸುತ್ತಿರುವ ಅಸ್ಸಾಂ ಶಾಸಕ ಮೃಣಾಲ್ ಸೈಕಿಯ

  • Share this:
ಗುವಾಹಟಿ (ಜು. 15): ಕಳೆದ ಒಂದು ವಾರದಿಂದ ಅಸ್ಸಾಂನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಬ್ರಹ್ಮಪುತ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಪ್ರವಾಹ ಉಂಟಾಗಿದ್ದು, 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಮುಳುಗಿರುವ ಮನೆಗಳು, ಪ್ರಾಣ ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವ ಜನರು ಮತ್ತು ಪ್ರಾಣಿಗಳ ವಿಡಿಯೋಗಳು ವೈರಲ್ ಆಗಿವೆ.

ಅಸ್ಸಾಂನ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಅನೇಕ ಸ್ವಯಂಸೇವಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಗೆ ಅಸ್ಸಾಂನ ಬಿಜೆಪಿ ಶಾಸಕ ಕೂಡ ಕೈಜೋಡಿಸಿದ್ದಾರೆ. ಅಸ್ಸಾಂನ ಬಿಜೆಪಿ ಶಾಸಕ ಮೃಣಾಲ್ ಸೈಕಿಯ ಪ್ರವಾಹಪೀಡಿತ ಸ್ಥಳಗಳಿಗೆ ಖುದ್ದಾಗಿ ತೆರಳಿ ಜನರು, ಸಾಕುಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ.ಬಿಜೆಪಿ ಶಾಸಕ ಮೃಣಾಲ್ ಸೈಕಿಯ ಅವರ ಕಾರ್ಯಕ್ಕೆ ಟ್ವಿಟ್ಟರ್​ನಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನನ್ನ ಕ್ಷೇತ್ರದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಜನರನ್ನು ರಕ್ಷಿಸುವ ಕಾರ್ಯಾಚರಣೆಗೆ ನಮ್ಮ ತಂಡವೂ ಕೈಜೋಡಿಸಿದೆ. ನಮ್ಮ ತಂಡದೊಡನೆ ಇಂದು ಹಳ್ಳಿಗಳಿಗೆ ತೆರಳಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲಾಯಿತು ಎಂದು ಕೆಲವು ವಿಡಿಯೋಗಳನ್ನು ಮೃಣಾಲ್ ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Assam Floods: ಅಸ್ಸಾಂ ಪ್ರವಾಹ; ಪ್ರಾಣ ಉಳಿಸಿಕೊಳ್ಳಲು ಪ್ರಾಣಿಗಳ ಪರದಾಟ, ಮುಳುಗಿದ ಮನೆಯಿಂದ ಜನರು ವಲಸೆ!

ಮತ್ತೊಂದು ವಿಡಿಯೋದಲ್ಲಿ ಗ್ರಾಮಗಳಲ್ಲಿ ಮನೆಯ ಹಟ್ಟಿಯ ಗೂಡಿನಲ್ಲಿ ಸಿಲುಕಿರುವ ಮೇಕೆ-ಕುರಿಗಳನ್ನು ಹೊರಕ್ಕೆಳೆದು, ದೋಣಿಗಳಲ್ಲಿ ಸಾಗಿಸುತ್ತಿರುವುದನ್ನು ಕಾಣಬಹುದು. ಎದೆ ಮಟ್ಟಕ್ಕೆ ನಿಂತಿರುವ ಪ್ರವಾಹದ ನೀರಿನಲ್ಲಿ ನಡೆಯುತ್ತಾ ಅವರ ಮನೆಗಳಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಪರೀಕ್ಷಿಸುತ್ತಿರುವುದನ್ನು ಕೂಡ ನೋಡಬಹುದು.ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಅಸ್ಸಾಂ ಲಕ್ಷಿಂಪುರ್, ಬಾರ್ಪೇಟ, ಬೊಂಗೈಗಾಂವ್, ಕಾಮರೂಪ್, ಗೋಲಾಘಾಟ್​ ಮತ್ತು ಶಿವಸಾಗರದಲ್ಲಿ ಹಲವಾರು ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಒಟ್ಟಾರೆ ಸಾವನ್ನಪ್ಪಿರುವವರಲ್ಲಿ 26 ಜನರು ಭೂಕುಸಿತದಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Mumbai Rain: ಮುಂಬೈನಲ್ಲಿ ಭಾರೀ ಮಳೆ; 18 ಗಂಟೆಗಳ ಕಾಲ ರೆಡ್ ಅಲರ್ಟ್​ ಘೋಷಣೆ

ಯುನೆಸ್ಕೋದ ಮಾನ್ಯತೆ ಪಡೆದಿರುವ ಅಸ್ಸಾಂನ ಕಾಝಿರಂಗ ನ್ಯಾಷನಲ್ ಪಾರ್ಕ್​ ಬಹುತೇಕ ಪ್ರವಾಹದಿಂದ ಜಲಾವೃತವಾಗಿದೆ. ಇದರಿಂದ ವನ್ಯಜೀವಿಗಳು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ದಿನದಿಂದ ದಿನಕ್ಕೆ ಅಸ್ಸಾಂನಲ್ಲಿ ಪ್ರವಾಹದ ಮಟ್ಟ ಏರುತ್ತಲೇ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ನದಿಪಾತ್ರದಲ್ಲಿರುವ ಬಹುತೇಕ ಗ್ರಾಮಗಳ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ​
Published by:Sushma Chakre
First published: