Assembly Election: ಇಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ

ಪಶ್ಚಿಮ ಬಂಗಾಳದ ಮತದಾನದ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿರುವುದು ನಂದಿಗ್ರಾಮ ವಿಧಾನಸಭಾ ಕ್ಷೇತ್ರ. ನಂದಿಗ್ರಾಮ ಕ್ಷೇತ್ರದಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಣಕ್ಕಿಳಿದ ಕ್ಷಣದಿಂದಲೂ ಕುತೂಹಲ ಹೆಚ್ಚುತ್ತಲೇ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಏ. 1): ಇಡೀ ದೇಶಾದ್ಯಂತ ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಲಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಅಸ್ಸಾಂನ 39 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅದಕ್ಕಾಗಿ ಎರಡೂ ರಾಜ್ಯಗಳಲ್ಲಿ ಚುನಾವಣಾ ಆಯೋಗ ವಿಶೇಷ ತಯಾರಿಯನ್ನು ನಡೆಸಿದೆ. ಅದರಲ್ಲೂ ಮುಖ್ಯವಾಗಿ ಸದಾ ಚುನಾವಣೆ ವೇಳೆ ಘರ್ಷಣೆ ಆಗುವ ಪಶ್ಚಿಮ ಬಂಗಾಳದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಶ್ಚಿಮ ಬಂಗಾಳದ ಮತದಾನದ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿರುವುದು ನಂದಿಗ್ರಾಮ ವಿಧಾನಸಭಾ ಕ್ಷೇತ್ರ. ನಂದಿಗ್ರಾಮ ಕ್ಷೇತ್ರದಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಣಕ್ಕಿಳಿದ ಕ್ಷಣದಿಂದಲೂ ಕುತೂಹಲ ಹೆಚ್ಚುತ್ತಲೇ ಇದೆ. ಇದೇ ಮಮತಾ ಬ್ಯಾನರ್ಜಿ ಅವರ ಜೊತೆಗೆ ಇದ್ದ ಹಾಗೂ ನಂದಿಗ್ರಾಮ ಹೋರಾಟದಲ್ಲಿ ಭಾಗಿಯಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪಟ್ಟ ಶಿಷ್ಯನಂತೆ ಇದ್ದ ಸುವೇಂದು ಅಧಿಕಾರಿ ಹಿಂದೆ ಇದೇ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ‌ ಶಾಸಕರಾಗಿದ್ದರು. ಇತ್ತೀಚೆಗೆ ಅವರು ಮಮತಾ ಬ್ಯಾನರ್ಜಿ ವಿರುದ್ಧ ಬಂಡೆದ್ದು ಬಿಜೆಪಿ ಸೇರಿದ್ದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಈಗ ದೇಶಾದ್ಯಂತ ಚರ್ಚೆ ಆಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೋ ಅಥವಾ ಮೊದಲ ಬಾರಿಗೆ ಅಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತದೆಯೋ ಎಂಬ ಚರ್ಚೆ ಆಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಾದಿಯಾಗಿ ಬಿಜೆಪಿಯ ಘಟಾನಘಟಿ ನಾಯಕರೆಲ್ಲಾ ಒಬ್ಬಂಟಿ ಮಮತಾ ಬ್ಯಾನರ್ಜಿ ವಿರುದ್ಧ ಮುಗಿಬಿದ್ದಿದ್ದಾರೆ‌.

ಈ ಹಿನ್ನೆಲೆಯಲ್ಲಿ ಈಗ 'ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ಹಂತಕ್ಕೂ ಇಳಿಯಬಹುದು. ಹಾಗಾಗಿ ಬಿಜೆಪಿ ಕಾರ್ಯತಂತ್ರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ' ಎಂದು ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೇರಿದಂತೆ ಹತ್ತು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದಾರೆ.

ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಬಿಜೆಡಿ ಮುಖ್ಯಸ್ಥ ಹಾಗೂ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಎನ್ ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ಪಕ್ಷದ ಸ್ಟಾಲಿನ್ ಹಾಗೂ ಸಮಾಜವಾದಿ ರಾಷ್ಟ್ರೀಯ ಜನ ದಳದ ತೇಜಸ್ವಿ ಯಾದವ್ ಅವರಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.
Published by:Seema R
First published: