Mother and Son : ಹೆತ್ತವರಿಗೆ, ತಮ್ಮ ಮಕ್ಕಳು ತಮಗಿಂತ ದೊಡ್ಡ ಸಾಧನೆ ಮಾಡಿದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೆ ಯಾವುದೂ ಇರಲಿಕ್ಕಿಲ್ಲ. ಅದರಲ್ಲೂ ಆ ಸಾಧನೆ ನಮ್ಮ ದೇಶದ ಸೇವೆಗೆ ಸಂಬಂಧಪಟ್ಟಿದ್ದಾಗಿದ್ದರೆ ಆ ತೃಪ್ತಿ ಮತ್ತು ಸಂತೋಷ ಇಮ್ಮಡಿಯಾಗುತ್ತದೆ. ಹೆತ್ತವರ ಅಂತದ್ದೇ ಸಂಭ್ರಮಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗುಜರಾತಿನ ಜುನಾಗಢದಲ್ಲಿ ನಡೆದ ಸ್ವಾತಂತ್ರ್ಯ ಸಮಾರಂಭದಲ್ಲಿ ಡಿಎಸ್ಪಿ ಆಗಿರುವ ತಮ್ಮ ಮಗನಿಗೆ ಸೆಲ್ಯೂಟ್ ಹೊಡೆಯುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಒಬ್ಬರ ಫೋಟೊ ಅದು. ಗುಜರಾತ್ ಪಬ್ಲಿಕ್ ಸರ್ವಿಸ್ ಕಮೀಶನ್ನ ಚೇರ್ಮನ್ ದಿನೇಶ್ ದಾಸ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ವೈರಲ್ ಫೋಟೋದಲ್ಲಿ ಇರುವುದು ಅರಾವಳಿಯ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ವಿಶಾಲ್ ರಾಬರಿ ಮತ್ತು ಅವರ ತಾಯಿ ಮಧುಬೇನ್ ರಾಬರಿ. ಮದುಬೇನ್ ರಾಬರಿ ಕೂಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಷರ್ ಆಗಿ ನೇಮಕವಾಗಿದ್ದಾರೆ.
ಈ ಪೋಟೋವನ್ನು ಪೋಸ್ಟ್ ಮಾಡಿದ ಕ್ಷಣದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದ್ದು, ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ. ಈ ಮನಸ್ಸನ್ನು ಸೆಳೆಯುವ ಫೋಟೋ ಕಂಡು ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವುಕರಾಗಿದ್ದು, ಈ ಫೋಟೋ ಹಲವಾರು ಮಂದಿಗೆ ಸ್ಫೂರ್ತಿ ನೀಡುವಂತದ್ದು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಪೋಟೋದಲ್ಲಿ ತನ್ನ ಮಗನಿಗೆ ಸೆಲ್ಯೂಟ್ ಹೊಡೆಯುವಾಗ ತಾಯಿಯ ಕಣ್ಣುಗಳಲ್ಲಿ ಮಿಂಚುತ್ತಿರುವ ಹೊಳಪನ್ನು ನೆಟ್ಟಿಗರು ಗಮನಿಸಿದ್ದು, ಇದು ತಾಯ್ತನ ಮತ್ತು ಪ್ರೀತಿಯ ಶಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ಜನರು ಕೊಂಡಾಡಿದ್ದಾರೆ. ನೋಡುಗರ ಪಾಲಿಗೆ ಇದೊಂದು ಸಂತಸಕರ ಕ್ಷಣ ಎಂದು ಪ್ರತಿಕ್ರಿಯಿಸಿರುವ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ, “ಇದು ತಾಯಿ ಮತ್ತು ಮಗನಿಗೆ ಮಾತ್ರ ಸಂತಸಮಯ ಕ್ಷಣವಲ್ಲ, ನೋಡುಗರಿಗೂ ಕೂಡ. ತಾಯಿ ಮತ್ತು ಮಗನಿಗೆ ಸೆಲ್ಯೂಟ್” ಎಂದು ಬರೆದಿದ್ದಾರೆ.
What could have been the most satisfying moment for a an ASI mother to see her Dy.SP son, @vishal__Rabari, stand before her reciprocating her salute bundled with years of commitment and dedicated motherhood with sheer love...!!
GPSC celebrates this picture perfect…!!! pic.twitter.com/O8IquCLkeI
— Dinesh Dasa (@dineshdasa1) August 18, 2021
ಇಂತಹ ಕಥೆಗಳು, ನಂಬಿಕೆ ಮತ್ತು ಬೆಂಬಲವಿದ್ದಲ್ಲಿ, ಕಠಿಣ ಶ್ರಮ ಮತ್ತು ಬದ್ಧತೆಯಿಂದ ಕನಸುಗಳನ್ನು ಸಾಕಾರಗೊಳಿಸಬಹುದು ಎಂಬುದನ್ನು ನೆನಪಿಸುತ್ತವೆ. ಈ ತಿಂಗಳ ಆರಂಭದಲ್ಲಿ, ಇಂತದ್ದೇ ಒಂದು ಪ್ರಸಂಗ ನಡೆದಿತ್ತು, ಐಟಿಬಿಪಿಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಕಮಲೇಶ್ ಕುಮಾರ್, ಐಟಿಬಿಪಿಯಲ್ಲಿ ಅಸಿಸ್ಟೆಂಟ್ ಕಮಾಡೆಂಟ್ ಆಗಿ ನೇಮಕವಾದ ತನ್ನ ಮಗಳು ದೀಕ್ಷಾಗೆ ಪಾಸಿಂಗ್ ಡೇ ಪರೆಡ್ನಲ್ಲಿ ಸೆಲ್ಯೂಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ