ಮುಖ್ಯ ಚುನಾವಣಾ ಆಯುಕ್ತರಾಗಬೇಕಿದ್ದ ಅಶೋಕ್ ಲಾವಸ ರಾಜೀನಾಮೆ; ಮುಂದಿನ ತಿಂಗಳು ಎಡಿಬಿಗೆ ಸೇರ್ಪಡೆ

ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ಲಾವಸ ಅವರು ಮುಂದಿನ ತಿಂಗಳು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಪ್​ನ ಉಪಾಧ್ಯಕ್ಷರಾಗಿ ಸೇರ್ಪಡೆಯಾಗಲಿದ್ದಾರೆ.

ಅಶೋಕ್ ಲಾವಸ

ಅಶೋಕ್ ಲಾವಸ

  • News18
  • Last Updated :
  • Share this:
ನವದೆಹಲಿ(ಆ. 18): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಿವೃತ್ಥ ಐಎಎಸ್ ಅಧಿಕಾರಿ ಹಾಗೂ ಚುನಾವಣಾ ಆಯುಕ್ತ ಅಶೋಕ್ ಲಾವಸ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಹರಿಯಾಣ ಕೆಡರ್​ನ ಅಶೋಕ್ ಅವರು ಎಡಿಬಿಗೆ ನೇಮಕವಾಗಿದ್ದಾರೆ. ಫಿಲಿಪ್ಪೈನ್ಸ್​ನ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನ ಉಪಾಧ್ಯಕ್ಷರಾಗಿ ಮುಂದಿನ ತಿಂಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಲಾವಸ ಅವರ ರಾಜೀನಾಮೆ ಅನಿರೀಕ್ಷಿತವೇನಲ್ಲ. ಕಳೆದ ತಿಂಗಳೇ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಂಸ್ಥೆಯು ಅಶೋಕ್ ಲಾವಸ ಅವರ ನೇಮಕಾತಿಯ ಮಾಹಿತಿಯನ್ನು ಪ್ರಕಟಿಸಿತ್ತು.

ಚುನಾವಣಾ ಆಯೋಗದಲ್ಲಿ ಅಶೋಕ್ ಲಾವಸ ಅವರ ಸೇವಾವಧಿ ಇನ್ನೂ 2 ವರ್ಷ ಇದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅವರ ನಂತರ ಸೇವಾ ಹಿರಿತನದಲ್ಲಿ ಅಶೋಕ್ ಅವರೇ ಮೊದಲಿಗರಾಗಿದ್ದಾರೆ. ಹೀಗಾಗಿ, ಕಾನೂನಾತ್ಮಕವಾಗಿ ಅಶೋಕ್ ಲಾವಸ ಅವರೇ ಮುಂದಿನ ಸಿಇಸಿ ಆಗಬಹುದಿತ್ತು. ಈಗ ಇವರು ರಾಜೀನಾಮೆ ನೀಡಿರುವುದರಿಂದ ಮತ್ತೊಬ್ಬ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಮುಂದಿನ ಸಿಇಸಿ ಆಗುವ ಅವಕಾಶ ಪಡೆದಿದದ್ದಾರೆ.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನ ಹಾಲಿ ಉಪಾಧ್ಯಕ್ಷ ದಿವಾಕರ್ ಗುಪ್ತಾ ಅವರ ಸೇವಾವಧಿ ಇದೇ ತಿಂಗಳ 31ರಂದು ಅಂತ್ಯಗೊಳ್ಳಲಿದೆ. ಅವರ ಸ್ಥಾನವನ್ನು ತುಂಬಲಿರುವ ಅಶೋಕ್ ಲಾವಸ ಅವರು ಖಾಸಗಿ ವಲಯ ಹಾಗೂ ಸರ್ಕಾರ-ಖಾಸಗಿ ಸಹಭಾಗಿತ್ವದ ಯೋಜನೆಗಳನ್ನ ನಿಭಾಯಿಸುವ ಹೊಣೆಗಾರಿಕೆ ಪಡೆಯಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆಗೆ ಫೇಸ್‌ಬುಕ್‌ ನಂಟು; ಸಾಮಾಜಿಕ ಜಾಲತಾಣ ದಿಗ್ಗಜನ ಪ್ರಶ್ನಿಸಲು ಮುಂದಾದ ತರೂರ್‌ ನೇತೃತ್ವದ ಸ್ಥಾಯಿ ಸಮಿತಿ

“ಲಾವಸ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸರ್ಕಾರ-ಖಾಸಗಿ ಸಹಭಾಗಿತ್ವದ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಅನುಭವ ಇದೆ. ಸರ್ಕಾರದ ನೀತಿ ಮತ್ತು ಖಾಸಗಿ ವಲಯದ ಪಾತ್ರದ ಬಗ್ಗೆ ಅಪಾರ ತಿಳಿವಳಿಕೆ ಇದೆ” ಎಂದು ಕಳೆದ ತಿಂಗಳು ಎಡಿಬಿ ಹೇಳಿಕೆ ನೀಡಿತ್ತು.1980ರ ಬ್ಯಾಚ್​ನ ಐಎಎಸ್ ಅಧಿಕಾರಿಯಾದ ಅಶೋಕ್ ಲಾವಸ ಅವರು 2018ರಲ್ಲಿ ಚುನಾವಣಾ ಆಯುಕ್ತರಾಗಿ ಆಯೋಗವನ್ನ ಸೇರ್ಪಡೆಯಾಗಿದ್ದರು. ಅದಕ್ಕೂ ಮುನ್ನ ಅವರು ಹಣಕಾಸು ಇಲಾಖೆ, ಪರಿಸರ ಮತ್ತು ನಾಗರಿಕ ವಿಮಾನಯಾನ ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆಗಳಲ್ಲಿ ಕಾರ್ಯದರ್ಶಿ ಸ್ಥಾನಗಳನ್ನ ನಿಭಾಯಿಸಿದ್ದಾರೆ. ಈ ಹಿಂದೆ ಎಡಿಬಿ ವ್ಯವಹಾರಗಳಿಗೆ ಉಸ್ತುವಾರಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಸ್ಟೆರ್​ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ

ಚುನಾವಣಾ ಆಯುಕ್ತರಾಗಿ ಅಶೋಕ್ ಲಾವಸ ಅವರು ಕೇಂದ್ರ ಸರ್ಕಾರಕ್ಕೆ ಕೆಲ ಮುಜುಗರದ ಸಂಗತಿಗಳಿಗೂ ಕಾರಣವಾಗಿದ್ದರು. ಕಳೆದ ವರ್ಷ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 11 ದೂರುಗಳು ದಾಖಲಾಗಿದ್ದವು. ಆಗ ಚುನಾವಣಾ ಆಯೋಗವು ಎಲ್ಲಾ ದೂರುಗಳಲ್ಲೂ ಮೋದಿ ಮತ್ತು ಶಾಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಆದರೆ, ಅಷ್ಟೂ ಪ್ರಕರಣಗಳಲ್ಲಿ ಅಶೋಕ್ ಲಾವಸ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು ವಿಶೇಷ. ಆ ಘಟನೆ ಆದ ಬಳಿಕ ಆದಾಯ ತೆರಿಗೆ ಇಲಾಖೆಯು ಲಾವಸ ಅವರ ಪತ್ನಿಗೆ ನೋಟೀಸ್ ಕೊಟ್ಟಿತ್ತು. ಅವರ ವ್ಯವಹಾರಗಳಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಐಟಿ ನೋಟೀಸ್ ನೀಡಲಾಗಿತ್ತು. ಆದರೆ ಲಾವಸ ಅವರ ಪತ್ನ ನೋವೆಲ್ ಸಿಂಘಾಲ್ ಅವರು ಈ ಆರೋಪವನ್ನು ತಳ್ಳಿಹಾಕಿ, ತಾನು ಎಲ್ಲಾ ತೆರಿಗೆ ಪಾವತಿ ಮಾಡಿದ್ದೇನೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
Published by:Vijayasarthy SN
First published: