ನವ ದೆಹಲಿ; ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಇತ್ತೀಚೆಗೆ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿತ್ತು. ಅಲ್ಲದೆ, ಬಿಹಾರದಲ್ಲಿ ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ನಿರೀಕ್ಷಿತ ಫಲ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿ ತಾವು ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ತಿಳಿಸಿದ್ದರು. ಹೀಗಾಗಿ ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆ ಕುರಿತು ಇಂದು ಮಾತನಾಡಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, "ಪಶ್ಚಿಮಬಂಗಾಳ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದರೆ ಅದು ಬಿಜೆಪಿಗೆ ನೆರವಾಗಲಿದೆ. ಈ ಮೂಲಕ ನಾವು ಚುನಾವಣೆಯನ್ನು ಗೆಲ್ಲುವುದು ಮತ್ತಷ್ಟು ಸುಲಭವಾಗಲಿದೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಿಹಾರ ಚುನಾವಣೆ ಮುಗಿದಿದ್ದು ಇದೀಗ ರಾಷ್ಟ್ರ ನಾಯಕರ ಚಿತ್ತ ಪಶ್ಚಿಮ ಬಂಗಾಳ ಚುನಾವಣೆಯ ಮೇಲೆ ನೆಟ್ಟಿದೆ. ಸಿಎಂ ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಬಿಜೆಪಿ ಈ ಬಾರಿ ಬಂಗಾಳದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಂತೆ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಟಿಎಂಸಿ ಪಕ್ಷದ ಪ್ರಬಲ ನಾಯಕರನ್ನು ಸೆಳೆಯುವ ತಂತ್ರಕ್ಕೂ ಮುಂದಾಗಿದೆ. ಈ ನಡುವೆ ಬಿಹಾರ ಚುನಾವಣೆ ನಂತರ ಬಂಗಾಳದಲ್ಲೂ ತಮ್ಮ ಸ್ಪರ್ಧೆ ಖಚಿತ ಎಂದು ಓವೈಸಿ ಹೇಳಿಕೆ ನೀಡಿದ್ದು ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಓವೈಸಿ ಸ್ಪರ್ಧೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಕ್ಷಿ ಮಹಾರಾಜ್, "ಇದು ದೇವರ ಅನುಗ್ರಹ. ಅವರು ನಮಗೆ ಬಿಹಾರದಲ್ಲಿ ಸಹಾಯ ಮಾಡಿದ್ದರು. ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳದಲ್ಲೂ ಗೆಲ್ಲಲು ಅವರು ನಮಗೆ ಸಹಾಯ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
ಬಿಜೆಪಿ ಸಂಸದನ ಈ ಹೇಳಿಕೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಓವೈಸಿ ಪಕ್ಷವನ್ನು ಬಿಜೆಪಿಯ ‘ಬೀ ಟೀಮ್’ ಎಂದು ಕರೆದಿದ್ದಾರೆ. ಈ ಹಿಂದೆಯೂ ಎಐಎಂಐಎಂ ಪಕ್ಷವು ಇದೇ ರೀತಿಯ ಆರೋಪವನ್ನು ಎದುರಿಸಿತ್ತು. ಕಳೆದ ವರ್ಷ ನಡೆದಿದ್ದ ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿಗೆ ಓವೈಸಿ ಪಕ್ಷ ನೆರವಾಗಿದೆ ಎಂಬ ಮಾತು ಕೇಳಿಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ