ಜೈಪುರ (ಜೂನ್ 22); ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಕಾರ್ಯಕ್ರಮವನ್ನು ದೇಶದಾದ್ಯಂತ ಚಾಲನೆ ನೀಡಿದೆ. ಆದರೆ, ಲಸಿಕೆ ಮೇಲಿನ ಭಯದಿಂದಾಗಿ ಹಲವರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಅದರಲ್ಲೂ ಬುಡಕಟ್ಟು ಸಮಾಜದ ಜನರಿಗೆ ಲಸಿಕೆ ನೀಡುವುದು ಎಲ್ಲಾ ಸರ್ಕಾರಗಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಕೊರೋನಾ ಲಸಿಕೆ ಬಗ್ಗೆ ಹಲವು ಅನುಮಾನಗಳನ್ನು ಹೊಂದಿರುವವರಲ್ಲಿ ಅರಿವು ಮೂಡಿಸಿ, ಲಸಿಕೆ ಪಡೆಯುವಂತೆ ಮನವೊಲಿಸುವ ಕೆಲಸವನ್ನು ರಾಜಸ್ತಾನ ಸರ್ಕಾರ ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಿದೆ. ಅಲ್ಲದೆ,ಲಸಿಕೆ ಪಡೆಯದ ಬುಡಕಟ್ಟು ಜನರ ಮನವೊಲಿಸಲು ಉಚಿತ ಪಡಿತರ ನೀಡುವುದು, ಕೋವಿಡ್ ಲಸಿಕಾ ಕೇಂದ್ರಗಳಿಗೆ ಉಚಿತ ಪ್ರಯಾಣ ಒದಗಿಸುವಂತಹ ಕೆಲಸಗಳನ್ನು ರಾಜಸ್ಥಾನದ ಉದಯಪುರ ಹಳ್ಳಿಯಲ್ಲಿ ಮಾಡಲಾಗುತ್ತಿದೆ.
ಜೂನ್ 21 ರಿಂದ ದೇಶದಲ್ಲಿ ಎಲ್ಲಾ ವಯಸ್ಕಿಗೆ ಉಚಿತ ಲಸಿಕೆ ನೀಡುವ ಅಭಿಯಾನ ಆರಂಭವಾಗಿದ್ದು, ಉದಯಪುರದ ಬುಡಕಟ್ಟು ಜನರನ್ನು ಮನವೊಲಿಸಲು ಬೂತ್ ಮಟ್ಟದ ಅಧಿಕಾರಿ ದಿನೇಶ್ ಚಂದ್ರ ಜೋಶಿ, ಉಚಿತ ಪಡಿತರ, ಉಚಿತ ಪ್ರಯಾಣ ವ್ಯವಸ್ಥೆ, ಬುಡಕಟ್ಟು ಜನರ ಪುರೋಹಿತರನ್ನು ಒಳಗೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.
ಉದಯಪುರದ ಹಳ್ಳಿಯ ಬುಡಕಟ್ಟು ಜನರಲ್ಲಿ ಕೊರೋನಾ ವ್ಯಾಕ್ಸಿನೇಷನ್‌ನಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ಬಗ್ಗೆ ವದಂತಿಗಳಿವೆ. ಇದಕ್ಕೆ ಉತ್ತರಿಸಿರುವ ಅಧಿಕಾರಿ ದಿನೇಶ್ ಚಂದ್ರ ಜೋಶಿ,“ಇದು ಕೇವಲ ವದಂತಿಯಾಗಿದೆ. ಜನರು ಸತ್ತದ್ದು ಲಸಿಕೆಗಳಿಂದಲ್ಲ, ಕೊರೊನಾ ಸೋಂಕಿನಿಂದ” ಎಂದು ಹೇಳಿದ್ದಾರೆ.
45 ವರ್ಷಕ್ಕಿಂತ ಮೇಲಪಟ್ಟವರಲ್ಲಿ ಲಸಿಕೆ ತೆಗೆದುಕೊಂಡ ಸರಾಸರಿ ಪ್ರಮಾಣ ಶೇ.78.3ರಷ್ಟು ರಷ್ಟಿರುವ ರಾಜಸ್ಥಾನದಲ್ಲಿ, ಬುಡಕಟ್ಟು ಜಿಲ್ಲೆಗಳಾದ ಉದಯಪುರ (63.9%), ಡುಂಗರಪುರ (62.7%) ಮತ್ತು ಪ್ರತಾಪಗಢ (59.3%) ಜಿಲ್ಲೆಗಳು ಕಡಿಮೆ ಲಸಿಕೆ ಪ್ರಮಾಣ ದಾಖಲಿಸಿವೆ.
ಉದಯಪುರದ ಜೋದೊಲ್ ಬ್ಲಾಕ್‌ನಲ್ಲಿ ಕೇವಲ ಶೇ.34ರಷ್ಟು ಲಸಿಕೆ ಪಡೆಯಲಾಗಿದೆ. ಹೀಗಾಗಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಗುಂಜನ್ ಸಿಂಗ್ ಸುಮಾರು 2,000 ಉಚಿತ ಪಡಿತರ ಕಿಟ್‌ಗಳನ್ನು ವಿತರಿಸಿದ್ದಾರೆ. ಈ ಕಿಟ್‌ಗಳಲ್ಲಿ ಅಡುಗೆ ಎಣ್ಣೆ, ಅವಲಕ್ಕಿ, ಅಕ್ಕಿ, ದಾಲ್ ಮತ್ತು ಗೋಧಿ ಹಿಟ್ಟು ಸೇರಿವೆ. ಈ ಪಡಿತರ ಕಿಟ್‌ಗಳು, ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿರುವ 12 ರಿಂದ 13 ಬುಡಕಟ್ಟು ಹಾಸ್ಟೆಲ್‌ಗಳಿಂದ ತರಲಾಗಿದೆ. ಜೊತೆಗೆ ಹಲವು ಎನ್‌ಜಿಒಗಳು ಸಹಾಯಕ್ಕೆ ನಿಂತಿವೆ ಎಂದು ಗುಂಜನ್ ಸಿಂಗ್ ಹೇಳಿದ್ದಾರೆ.
"ನಾವು ಹಳ್ಳಿಗಳಿಗೆ ಭೇಟಿ ನೀಡಿದಾಗ, ಜನರು ವ್ಯಾಕ್ಸಿನೇಷನ್ ಪಡೆದ ಬಳಿಕ ಸಾವು ಸಂಭವಿಸುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಕೆಲವೊಮ್ಮೆ ನಮಗೆ ಹಳ್ಳಿ ಒಳಗೆ ಪ್ರವೇಶಿಸಲು ಅವಕಾಶ ಕೂಡ ನೀಡುವುದಿಲ್ಲ. ಲಸಿಕೆ ತೆಗೆದುಕೊಂಡ ಬಳಿಕ ಏನಾದರೂ ಸಂಭವಿಸಿದಲ್ಲಿ, ನಾವು ಪರಿಹಾರ ನೀಡುತ್ತೇವೆ ಎಂಬ ಆಶ್ವಾಸನೆ ನೀಡಿ, ಲಸಿಕೆ ನೀಡಲಾಗುತ್ತಿದೆ" ಎಂದು ಅಧಿಖಾರಿಯೊಬ್ಬರು ತಿಳಿಸಿದ್ದಾರೆ. ಜೊತೆಗೆ ಮುಂದಿನ ಎರಡು ವಾರಗಳಲ್ಲಿ ಶೇ.100ರಷ್ಟು ಲಸಿಕೆ ನೀಡುವ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: Coronavirus: ಇನ್ನೆರಡು ತಿಂಗಳಲ್ಲಿ ಮತ್ತೆ ಬದಲಾಗಲಿದೆ ಕೊರೊನಾ ವೈರಸ್: ಸಿಸಿಎಂಬಿ ಸಲಹೆಗಾರ ಡಾ ಮಿಶ್ರಾ
ಇದು ಕೇವಲ ರಾಜಸ್ಥಾನದ ಹಳ್ಳಿಗಳ ಸ್ಥಿತಿಯಲ್ಲ. ದೇಶದ ಕುಗ್ರಾಮಗಳಲ್ಲಿ ಈಗಲೂ ಲಸಿಕೆ ಕುರಿತು ಇಂತಹದ್ದೇ ಅಭಿಪ್ರಾಯಗಳಿವೆ. ಉಚಿತ ಲಸಿಕೆ ನೀಡುವುದು ಮಾತ್ರ ಸರ್ಕಾರದ ಕೆಲಸವಲ್ಲ. ಇದರ ಜೊತೆಗೆ ಲಸಿಕೆ ಶೇ.100ರಷ್ಟು ಸುರಕ್ಷಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಅವಶ್ಯಕ ಎಂದು ಸಾಮಾಜಿಕ ಹೋರಾಟಗಾರರು ತಿಳಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ