ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ; ಪಕ್ಷಗಳ ಮುಂದಿರುವ ಆಯ್ಕೆ ಮತ್ತು ಪರಿಣಾಮವೇನು?

ಈ ಹಿಂದೆ ಕೂಡ ಮಹಾರಾಷ್ಟ್ರ ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ. 1980ರಲ್ಲಿ ಶರದ್ ಪವಾರ್ ಸರ್ಕಾರ ಬಹುಮತ ಹೊಂದಿದ್ದರೂ ಸರ್ಕಾರ ವಜಾಗೊಂಡಾಗ ಫೆಬ್ರವರಿ 17ರಿಂದ 112 ದಿನಗಳ ಕಾಲ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಹೇರಲಾಗಿತ್ತು.

HR Ramesh | news18-kannada
Updated:November 12, 2019, 6:24 PM IST
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ; ಪಕ್ಷಗಳ ಮುಂದಿರುವ ಆಯ್ಕೆ ಮತ್ತು ಪರಿಣಾಮವೇನು?
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೌಶ್ಯಾರಿ
  • Share this:
ನವದೆಹಲಿ: ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷವೂ ಬಹುಮತ ಸಾಬೀತು ಮಾಡುವಲ್ಲಿ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಕೇಂದ್ರ ಸಂಪುಟ ಮಂಗಳವಾರ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಇದೇ ವೇಳೆ ಸರ್ಕಾರ ರಚನೆಗೆ ಬೇಕಾಗಿರುವ ಸಂಖ್ಯಾಬಲ ಸಾಬೀತು ಮಾಡಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಗಡುವು ವಿಸ್ತರಣೆಗೆ ನೀಡದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನೆ ಮಾಡಿ ಸೇನೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಶಿವಸೇನೆ ನೆನ್ನೆ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ತೋರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಇಂದು ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ಎನ್​ಸಿಪಿಗೆ ರಾಜ್ಯಪಾಲ ಭಗತ್ ಸಿಂಗ್ ಕೌಶ್ಯಾರಿ ರಾತ್ರಿ 8.30ಕ್ಕೆ ಗಡುವು ನಿಗದಿಗೊಳಿಸಿ ಆಹ್ವಾನ ನೀಡಿದ್ದರು. ಆದರೆ, ಮಂಗಳವಾರ ಮಧ್ಯಾಹ್ನ ಹಲವು ನಾಟಕೀಯ ಬೆಳವಣಿಗೆಗಳ ನಡುವೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಮಾಡಲಾಗಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಪ್ರಸ್ತುತ ಸನ್ನಿವೇಶವೇನು?

ಅಕ್ಟೋಬರ್ 24ರಂದೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದರೂ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ. ಕಳೆದ ಶುಕ್ರವಾರ ದೇವೇಂದ್ರ ಫಡ್ನವೀಸ್ ಅವರು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಅದಾದ ಮರುದಿನ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದರು. ಆದಾಗ್ಯೂ, ಸಂಖ್ಯಾಬಲದ ಕೊರತೆಯಿಂದ ಸರ್ಕಾರ ರಚನೆ ಸಾಧ್ಯವಿಲ್ಲ ಎಂದು ಬಿಜೆಪಿ ಭಾನುವಾರ ಘೋಷಿಸಿತು. ಆನಂತರ ರಾಜ್ಯಪಾಲರು ಎರಡನೇ ದೊಡ್ಡ ಪಕ್ಷವಾಗಿದ್ದ ಶಿವಸೇನೆಗೆ ಆಹ್ವಾನ ನೀಡಿದರು.

ಮಹಾರಾಷ್ಟ್ರ ವಿಧಾನಸಭೆ ಒಟ್ಟು 288 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿ 105 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ ಬೇಕಾದ 144 ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿತ್ತು. ಶಿವಸೇನೆ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪಕ್ಷೇತರ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಸಕಲ ಕಸರತ್ತು ನಡೆಸಿದ ಬಿಜೆಪಿಗೆ ಶಿವಸೇನೆ ಬೆಂಬಲವಿಲ್ಲದೇ ಸರಳ ಬಹುಮತಕ್ಕೆ ಬೇಕಾದ ಸಂಖ್ಯಾಬಲ ದೊರಕಲಿಲ್ಲ. ಮೈತ್ರಿಯಾಗಿಯೇ ಚುನಾವಣೆ ಎದುರಿಸಿದ್ದ ಶಿವಸೇನೆ ಮತ್ತು ಬಿಜೆಪಿ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಪದವಿ ಹಂಚಿಕೆ ವಿಚಾರವಾಗಿ ಎರಡು ಪಕ್ಷಗಳ ನಡುವಿನ ಮೈತ್ರಿ ಮುರಿದು ಬಿತ್ತು. ಇದೀಗ ಯಾವೊಂದು ಪಕ್ಷವೂ ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.

ಏನಿದು ರಾಷ್ಟ್ರಪತಿ ಆಳ್ವಿಕೆ?ಸಂವಿಧಾನದ 356ನೇ ವಿಧಿ ಪ್ರಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಅವಕಾಶ ನೀಡಲಾಗಿದೆ. ಸರ್ಕಾರ ರಚಿಸುವಲ್ಲಿ ವಿಫಲವಾದಾಗ,  ಮುಖ್ಯಮಂತ್ರಿ ನೇಮಕದಲ್ಲಿ ವಿಫಲವಾದಾಗ, ಮೈತ್ರಿಕೂಟಗಳು ಭಂಗಗೊಂಡಾಗ, ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಾಗ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದಾಗ,  ರಾಜ್ಯ ಸರ್ಕಾರ ಅಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಶಿಫಾರಸ್ಸಿನ ಮೇಲೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ.

ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡರೆ ಆಯಾ ರಾಜ್ಯದ  ಆಡಳಿತ ನಿರ್ವಹಣೆ ರಾಷ್ಟ್ರಪತಿ ಕೈಗೆ ಹೋಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳಾದ್ದರಿಂದ ರಾಜ್ಯಪಾಲರೇ ಸಲಹೆಗಾರರನ್ನು ನೇಮಿಸಿಕೊಂಡು ರಾಜ್ಯದ ದೈನಂದಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ರಾಷ್ಟ್ರಪತಿ ಆಳ್ವಿಕೆ ಒಮ್ಮೆ ಜಾರಿಯಾದರೆ ಆರು ತಿಂಗಳವರೆಗೂ ಮುಂದುವರೆಯುತ್ತದೆ. ಗರಿಷ್ಠ ಮೂರು ವರ್ಷಗಳ ಅವಧಿವರೆಗೂ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಯಲ್ಲಿಡಬಹುದು. ಆದರೆ, ಈ ಅವಧಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗುತ್ತದೆ.

ರಾಷ್ಟ್ರಪತಿ ಆಳ್ವಿಕೆ ವೇಳೆ ಪಕ್ಷಗಳು ಸರ್ಕಾರ ರಚಿಸಬಹುದೇ?

ಮಹಾರಾಷ್ಟ್ರದಲ್ಲಿ ಈಗ ಜಾರಿಯಾಗಿರುವ ರಾಷ್ಟ್ರಪತಿ ಆಳ್ವಿಕೆ ಆರು ತಿಂಗಳವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಬೇಕಾಗಿರುವ ಸಂಖ್ಯಾಬಲದೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಬೇಕು. ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸಿದಾಗ ರಾಷ್ಟ್ರಪತಿ ಆಳ್ವಿಕೆ ರದ್ದಾಗುತ್ತದೆ. ಒಂದು ವೇಳೆ ಆರು ತಿಂಗಳೊಳಗೆ ಯಾವ ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗದಿದ್ದಲ್ಲಿ ಚುನಾವಣಾ ಆಯೋಗ ಆ ರಾಜ್ಯದ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸುತ್ತದೆ.

ಈ ಹಿಂದೆ ರಾಷ್ಟ್ರಪತಿ ಆಳ್ವಿಕೆಗೆ ಮಹಾರಾಷ್ಟ್ರ ಒಳಪಟ್ಟಿದೆಯೇ?

ಈ ಹಿಂದೆ ಕೂಡ ಮಹಾರಾಷ್ಟ್ರ ಎರಡು ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ. 1980ರಲ್ಲಿ ಶರದ್ ಪವಾರ್ ಸರ್ಕಾರ ಬಹುಮತ ಹೊಂದಿದ್ದರೂ ಸರ್ಕಾರ ವಜಾಗೊಂಡಾಗ ಫೆಬ್ರವರಿ 17ರಿಂದ 112 ದಿನಗಳ ಕಾಲ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಹೇರಲಾಗಿತ್ತು. ಇತ್ತೀಚೆಗೆ 2014ರ ಸೆಪ್ಟೆಂಬರ್ 28ರಂದು ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿತು. ಇದೀಗ ಮತ್ತೊಮ್ಮೆ ಮಹಾರಾಷ್ಟ್ರ ರಾಷ್ಟ್ರಪತಿ ಆಳ್ವಿಕೆಗೆ ಸೇರಿದೆ.

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading