Arvind Trivedi Passed Away: ಟಿವಿ ರಾಮಾಯಣದ 'ರಾವಣ'ನಿಗೆ ಹೃದಯಾಘಾತ; ಹಿರಿಯ ಕಲಾವಿದ ಅರವಿಂದ ತ್ರಿವೇದಿ ನಿಧನ

ಕಳೆದ ಮೂರು ವರ್ಷಗಳಿಂದ ಅರವಿಂದ ತ್ರಿವೇದಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಕಳೆದ ತಿಂಗಳಷ್ಟೇ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಮನೆಗೆ ಬಂದ ಮೇಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅರವಿಂದ ತ್ರಿವೇದಿ ಅವರ ಸೋದರಳಿಯ ಕೌಸ್ತುಬ್ ತ್ರಿವೇದಿ ತಿಳಿಸಿದ್ದಾರೆ

ಅರವಿಂದ್ ತ್ರಿವೇದಿ

ಅರವಿಂದ್ ತ್ರಿವೇದಿ

 • Share this:
  ಮಾಜಿ ಸಂಸದ, ಖ್ಯಾತ ನಟ, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ರಾವಣನ (Ravan of epic serial Ramayan) ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ(Arvind Trivedi)ಇಹಲೋಕ ತ್ಯಜಿಸಿದ್ದಾರೆ. 83 ವರ್ಷದ ಅರವಿಂದ ತ್ರಿವೇದಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ರಾಮಾಯಣ ಧಾರವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸಹ ನಟ ಸುನೀಲ್ ಲಾಹ್ರಿ(Sunil Lahri) ಅವರು ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಇದು ನಮಗೆ ಬಹಳ ದುಃಖದ ಸಂಗತಿ, ನಮ್ಮ ಪ್ರೀತಿಯ ಹಿರಿಯ ನಟ ಅರವಿಂದ ತ್ರಿವೇದಿ ಅವರು ಇನ್ನು ಮುಂದೆ ನಮ್ಮೊಂದಿಗಿಲ್ಲ, ನನ್ನ ಮಾರ್ಗದರ್ಶಕ ಹಿತೈಷಿಯನ್ನು ನಾನು ಕಳೆದುಕೊಂಡಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸುನಿಲ್ ಲಾಹ್ರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರವಿಂದ ತ್ರಿವೇದಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

  ಕಳೆದ ಮೂರು ವರ್ಷಗಳಿಂದ ಅರವಿಂದ ತ್ರಿವೇದಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಕಳೆದ ತಿಂಗಳಷ್ಟೇ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಮನೆಗೆ ಬಂದ ಮೇಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅರವಿಂದ ತ್ರಿವೇದಿ ಅವರ ಸೋದರಳಿಯ ಕೌಸ್ತುಬ್ ತ್ರಿವೇದಿ ತಿಳಿಸಿದ್ದಾರೆ. ಗುಜರಾತಿ ಸಿನಿಮಾದ ಭೀಷ್ಮ ಎಂದೇ ಅರವಿಂದ ತ್ರಿವೇದಿ ಪ್ರಖ್ಯಾತರಾಗಿದ್ದರು. 1991ರಲ್ಲಿ ಸಬರ್ ಕಂಟಾ ಕ್ಷೇತ್ರದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

  ಗುಜರಾತಿ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಅರವಿಂದ ತ್ರಿವೇದಿ ರೂಲ್ ಮಾಡಿದ್ದರು. ಹಿಂದಿ ಮತ್ತು ಗುಜರಾತಿಯ ಸಾಮಾಜಿಕ, ಪೌರಾಣಿಕ ಕಥೆಯಾಧಾರಿತ ಸುಮಾರು 300 ಸಿನಿಮಾಗಳಲ್ಲಿ ಅರವಿಂದ ತ್ರಿವೇದಿ ಅಭಿನಯಿಸಿದ್ದಾರೆ. ಹಲವು ಚಿತ್ರಗಳು ಇವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಆದರೆ ರಾಮಾಯಣ ಧಾರವಾಹಿಯ "ರಾವಣ" ಪಾತ್ರ ರಾಷ್ಟ್ರಮಟ್ಟದಲ್ಲಿ ಇವರನ್ನು ಗುರುತಿಸುವಂತೆ ಮಾಡಿತ್ತು. ನಿಜವಾದ ರಾವಣನನ್ನು ನೋಡಿರದ ಜನ, ಇವರ ಅಭಿನಯಕ್ಕೆ ಫಿದಾ ಆಗಿದ್ದರು. ಇವರ ರಾವಣನ ಪಾತ್ರ ಕಂಡ ಪುಟ್ಟ ಪುಟ್ಟ ಮಕ್ಕಳು ಹೆದರುತ್ತಿದ್ದರು. ಅಷ್ಟರ ಮಟ್ಟಕ್ಕೆ ರಾವಣನ ಪಾತ್ರ ಇಂದಿಗೂ ಅಚ್ಚಳಿಯದೆ ಉಳಿದಿದೆ.

  ಇದನ್ನೂ ಓದಿ:ಹೊಸ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದ Ram Pothineni: ಕುತ್ತಿಗೆಗೆ ಪೆಟ್ಟು ಮಾಡಿಕೊಂಡ ಟಾಲಿವುಡ್​ ನಟ

  1938 ನವೆಂಬರ್ 8ರಂದು ಇಂದೋರ್ ನಲ್ಲಿ ಅರವಿಂದ ತ್ರಿವೇದಿ ಜನಿಸಿದರು. ಬಾಲ್ಯದಿಂದಲೇ ನಟನೆ ಮೇಲೆ ಆಸಕ್ತಿ ಹೊಂದಿದ್ದ ಅರವಿಂದ ತ್ರಿವೇದಿ ರಂಗಭೂಮಿಗೆ ಸೇರಿಕೊಂಡರು. ಗುಜರಾತಿ ರಂಗಭೂಮಿಯಿಂದ ಆರಂಭವಾದ ಅವರ ವೃತ್ತಿಪರ ಬದುಕು ಸುಮಾರು 300 ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ಅಭಿನಯಿಸುವಂತೆ ಮಾಡಿತ್ತು. ಸುಮಾರು 40 ವರ್ಷಗಳ ಕಾಲ ಸಿನಿಮಾರಂಗಕ್ಕೆ ನೀಡಿದ ಇವರ ಕೊಡುಗೆ ಅಪಾರವಾಗಿದೆ.
  ರಾಮಾಯಣದಲ್ಲಿ ರಾವಣನ ಪಾತ್ರ, ವಿಕ್ರಂ ಹಾಗೂ ಬೇತಾಳ ಎಂಬ ಧಾರವಾಹಿಯೂ ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಗುಜರಾತ್ ಸರ್ಕಾರ ನೀಡುವ ಹಲವಾರು ಪ್ರಶಸ್ತಿಗಳು ಅರವಿಂದ ತ್ರಿವೇದಿ ಅವರ ಸಾಧನೆಗೆ ಸಂದಿವೆ.

  ಇಂದು ಅರವಿಂದ್ ತ್ರಿವೇದಿ ಅವರ ಅಂತಿಮ ದರ್ಶನದ ಬಳಿಕ ಮುಂಬೈನಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ತ್ರಿವೇದಿ ಕೊನೆಯುಸಿರೆಳೆದ ಸುದ್ದಿ ತಿಳಿದ ಕಲಾವಿದರು, ರಾಜಕೀಯದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅರವಿಂದ ತ್ರಿವೇದಿಯ ಅವರನ್ನ ಕಳೆದುಕೊಂಡ ಗುಜರಾತಿ ಚಿತ್ರತಂಡ ಕಂಬನಿ ಮಿಡಿಯುತ್ತಿದೆ.

  • ವರದಿ - ವಾಸುದೇವ್. ಎಂ

  Published by:Latha CG
  First published: