ದೆಹಲಿ (ಏ. 20) ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಪ್ರಕರಣ ಅಂಕೆಗೆ ಸಿಗದಂತೆ ಏರಿಕೆಕಾಣುತ್ತಿದ್ದರೆ, ಇತ್ತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ದೆಹಲಿಯಲ್ಲಿನ ಕೆಲ ಆಸ್ಪತ್ರೆಗಳಲ್ಲಿ ಇರುವ ಆಕ್ಸಿಜನ್ಗಳು ಇನ್ನೊಂದು ಗಂಟೆಯೊಳಗೆ ಖಾಲಿಯಾಗಲಿದ್ದು, ರೋಗಿಗಳು ಆಕ್ಸಿಜನ್ ಕೊರತೆ ಅನುಭವಿಸುವ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ವೈದ್ಯಕೀಯ ಪರಿಸ್ಥಿತಿ ಬಿಗಡಾಯಿಸಿದ್ದು, ಗಂಭೀರ ಆಮ್ಲಜನಕ ಬಿಕ್ಕಟ್ಟು ಮುಂದುವರೆದಿದೆ. ಈ ಹಿನ್ನಲೆ ತಕ್ಷಣಕ್ಕೆ ಆಕ್ಸಿಜನ್ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕೇವಲ 6,000 ಕ್ಯೂಬಿಕ್ ಮೀಟರ್ ಆಕ್ಸಿಜನ್ ಉಳಿದಿದ್ದು, ಇದು ನಾಳೆ ಬೆಳಿಗ್ಗೆ 1 ಗಂಟೆವರೆಗೆ ಮಾತ್ರ ಬಳಕೆಯಾಗಲಿದೆ, ಇದನ್ನು ತತ್ಕ್ಷಣ ತುಂಬಿಸುವ ಅಗತ್ಯವಿದೆ ಎಂದಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಮನವಿ ಮಾಡಲಾಗಿದೆ
Serious oxygen crisis persists in Delhi. I again urge centre to urgently provide oxygen to Delhi. Some hospitals are left with just a few hours of oxygen.
— Arvind Kejriwal (@ArvindKejriwal) April 20, 2021
ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ 2, 700 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದ್ದಾರೆ.
ರಾಜಧಾನಿಯಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಏಪ್ರಿಲ್ 26ರಿಂದ ಮತ್ತೆ ಐದು ದಿನಗಳ ಲಾಕ್ಡೌನ್ ಅನ್ನು ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಸೋಂಕಿನ ಪ್ರಕರಣ ನಿರ್ವಹಣೆ ಜೊತೆಗೆ ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.
ಇದನ್ನು ಓದಿ: ಸಾಮಾನ್ಯ ರೋಗಿಗಳಿಗೂ ಸಿಗುತ್ತಿಲ್ಲ ಚಿಕಿತ್ಸೆ; ಅಂಬ್ಯುಲೆನ್ಸ್ ಸಿಗದೆ ಇ-ರಿಕ್ಷಾದಲ್ಲಿ ಮಗನ ಶವ ಸಾಗಿಸಿದ ತಾಯಿ
ಇನ್ನು ದೆಹಲಿಯಲ್ಲಿ ಬೆಡ್ ಸಮಸ್ಯೆ, ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ತಾರತಮ್ಯ ಎಸಗುತ್ತಿದೆ ಎಂದು ದೆಹಲಿ ಸರ್ಕಾರ ಹೈ ಕೋರ್ಟ್ ಎದುರು ದೂರು ಮಂಡಿಸಿತು. ಈ ಅರ್ಜಿ ಕೈಗೆತ್ತಿಕೊಂಡ ಪೀಠ, ಕೈಗಾರಿಕಾ ಕ್ಷೇತ್ರಗಳಲ್ಲಿನ ಆಕ್ಸಿಜನ್ ಬಳಕೆಯನ್ನು ಕಡಿತಗೊಳಿಸುವಂತೆ ಕೇಳಿದೆ. ಅಲ್ಲದೇ ಕೋವಿಡ್ ಚಿಕಿತ್ಸೆಗೆ ಬೇಕಾದಷ್ಟು ಆಕ್ಸಿಜನ್ ಇದೆಯಾ ಎಂಬುದನ್ನು ಖಾತರಿ ಮಾಡಿಕೊಳ್ಳುವಂತೆ ತಿಳಿಸಿದೆ. ಇದೇ ವೇಳೆ ನಾವು ವಿಪತ್ತಿನ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ಜೀವಗಳ ಜೊತೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಅಷ್ಟೇ ಅಲ್ಲದೇ, ಸರ್ಕಾರವನ್ನು ನಡೆಸಲು ನಾವಿಲ್ಲ. ಪರಿಸ್ಥಿತಿಯ ಬಗ್ಗೆ ಕೂಡ ನಿಮಗೆ ಸೂಕ್ಷತೆ ಇರಬೇಕು ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ