ಕೊಟ್ಟ ಕುದುರೆಯನ್ನು ಏರಲು BJPಗೆ ಆಗ್ತಿಲ್ಲ, 4 ರಾಜ್ಯಗಳಲ್ಲಿ ಇನ್ನೂ ಸರ್ಕಾರ ರಚನೆ ಏಕಿಲ್ಲ: Kejriwal ವ್ಯಂಗ್ಯ

ಪಂಜಾಬ್‌ನಲ್ಲಿ ಸರ್ಕಾರವು ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ 4 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಇನ್ನೂ ಏಕೆ ಸರ್ಕಾರಗಳನ್ನು ರಚಿಸುತ್ತಿಲ್ಲ ಎಂದು ಕೇಜ್ರಿವಾಲ್ ಅಚ್ಚರಿ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

  • Share this:
ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ (Assembly Election) ನಾಲ್ಕು ರಾಜ್ಯಗಳನ್ನು ಗೆದ್ದಿದ್ದರೂ ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆದ್ದಿದೆ, ಆದರೆ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಇದುವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ ಎಂದು ಕೇಜ್ರಿವಾಲ್ ಭಾನುವಾರ ಪಂಜಾಬ್ ಎಎಪಿ ಶಾಸಕರನ್ನು (AAP MLAs) ಉದ್ದೇಶಿಸಿ ನಡೆಸಿದ ವಿಡಿಯೋ ಕಾನ್ಫರೆನ್ಸಿಂಗ್ ವೇಳೆ ಹೇಳಿದರು. ಎಎಪಿ ಶಾಸಕರ ಸಭೆ ಮೊಹಾಲಿಯಲ್ಲಿ ನಡೆದಿದ್ದು, ಕೇಜ್ರಿವಾಲ್ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: Punjab AG: ಕೇವಲ 1 ರೂ. ಸಂಬಳ ಸಾಕು‌ ಎಂದ ಪಂಜಾಬ್​ನ ನೂತನ ಅಡ್ವೊಕೇಟ್ ಜನರಲ್.. ಕಾರಣ ಇಲ್ಲಿದೆ

ಬಿಜೆಪಿಗೆ ಕೊಟ್ಟ ಕುದುರೆಯನ್ನು ಏಕೆ ಏರಲು ಆಗ್ತಿಲ್ಲ..

ಪಂಜಾಬ್ ಅಸೆಂಬ್ಲಿಯಲ್ಲಿ ಆಪ್ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಸಮಯ ವ್ಯರ್ಥ ಮಾಡದೆ ಸರ್ಕಾರ ಕೂಡ ರಚಿಸಲಾಯಿತು. ಪಂಜಾಬ್‌ನಲ್ಲಿ ಸರ್ಕಾರವು ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ 4 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಇನ್ನೂ ಏಕೆ ಸರ್ಕಾರಗಳನ್ನು ರಚಿಸುತ್ತಿಲ್ಲ ಎಂದು ಕೇಜ್ರಿವಾಲ್ ಅಚ್ಚರಿ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿನ ಆಂತರಿಕ ಜಗಳದಿಂದಲೇ ಸರ್ಕಾರ ರಚನೆ ತಡವಾಗುತ್ತಿದೆ ಎಂದು ದೆಹಲಿ ಸಿಎಂ ಆರೋಪಿಸಿದರು.

ನೂತನ ಆಪ್​​ ಸರ್ಕಾರಕ್ಕೆ ಫುಲ್​ ಮಾರ್ಕ್ಸ್​​

ಇಡೀ ದೇಶ ಪಂಜಾಬ್​​ ಸಿಎಂ ಭಗವಂತ್ ಮಾನ್ ಮತ್ತು ಅವರ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ. ರಾಜ್ಯದಲ್ಲಿ ಅಕ್ಟೋಬರ್ ವೇಳೆ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಚೆಕ್‌ಗಳನ್ನು ನೀಡಲಾಗುತ್ತದೆ. ಮಾನ್​​​​ ಸರ್ಕಾರ ರಚಿಸಿದ ಮೂರು ದಿನಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಕೇಜ್ರಿವಾಲ್ ಶಹಬಾಶ್​ಗಿರಿ ನೀಡಿದರು.

ಇದನ್ನೂ ಓದಿ: Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು

ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಫಲಿತಾಂಶವು ಮಾರ್ಚ್ 10 ರಂದು ಬಂದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 403 ವಿಧಾನಸಭಾ ಕ್ಷೇತ್ರಗಳಲ್ಲಿ 255 ಸ್ಥಾನಗಳನ್ನು ಗೆದ್ದಿದೆ. ಉತ್ತರಾಖಂಡದಲ್ಲಿ ಪಕ್ಷವು 70 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಪಡೆದುಕೊಂಡಿದೆ.  ಗೋವಾದಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಪಡೆದರೆ, ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿ ಒಕ್ಕೂಟವು 60 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆದ್ದಿದೆ.

ಪಂಜಾಬ್​ ನೂತನ ಸಂಪುಟ ಹೀಗಿದೆ

ನಿನ್ನೆಯಷ್ಟೇ ಪಂಜಾಬ್ ಆಮ್ ಆದ್ಮಿ ಪಕ್ಷದ ಹತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಅವರು 10 ಮಂದಿಗೆ ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಡಾ. ದಲ್ಜಿತ್ ಕೌರ್, ಹರ್ಪಾಲ್ ಸಿಂಗ್ ಚೀಮಾ, ಹರ್ಭಜನ್ ಸಿಂಗ್, ಡಾ. ವಿಜಯ್ ಸಿಂಗ್ಲಾ, ಗುರ್ಮೀತ್ ಸಿಂಗ್, ಬ್ರಾಮ್ ಶಂಕರ್ ಕಟಾರುಚಕ್, ಹರ್ಜೋತ್ ಸಿಂಗ್ ಬೈನ್ಸ್, ಲಾಲ್ಜಿತ್ ಸಿಂಗ್ ಭುಲ್ಲರ್ ಮತ್ತು ಕುಲದೀಪ್ ಸಿಂಗ್ ಧಲಿವಾಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರು ರೈತರು, ಮೂವರು ವಕೀಲರು, ಇಬ್ಬರು ವೈದ್ಯರು, ಸಮಾಜ ಸೇವಕ, ಎಂಜಿನಿಯರ್ ಮತ್ತು ಉದ್ಯಮಿಯಾಗಿರುವ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ ಎಂದು ಆಪ್ ಈಗಾಗಲೇ ಹೇಳಿಕೆಯಲ್ಲಿ ತಿಳಿಸಿದೆ.
Published by:Kavya V
First published: