ನವ ದೆಹಲಿ (ಜನವರಿ 28): ಗಣರಾಜ್ಯೋತ್ಸವದ ದಿನ ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣರಾದವರೊಂದಿಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಸಂಸದ ಮಾಜಿ ಕ್ರಿಕೆಟಿಗ ಗೌತಮ್ ಗಂಬೀರ್ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರವಲಯದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 20 ಜನ ಗಾಯಾಳುಗಳಾಗಿದ್ದಾರೆ. ಕೆಲ ಪೊಲೀಸರಿಗೂ ಸಹ ಗಾಯಗಳಾಗಿವೆ. ಈ ಸಂಬಂಧ 200 ಜನರನ್ನು ಬಂಧಿಸಲಾಗಿದ್ದು 22 ಎಫ್ಐಆರ್ ದಾಖಲಿಸಲಾಗಿದೆ.
Shri Amit Shah visited our bravehearts who despite facing life threatening situations showed restraint. But not a word of condemnation against the mob by CM @ArvindKejriwal. It is clear he wanted Delhi to BURN! #PunjabOverDelhi
— Gautam Gambhir (@GautamGambhir) January 28, 2021
ಇನ್ನೂ ದೆಹಲಿಯಲ್ಲಿ ಇಂದು ನಡೆದ ಒಂಬತ್ತನೇ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿರುವ ಅರವಿಂದ ಕೇಜ್ರಿವಾಲ್, "ಗಣ ರಾಜ್ಯೋತ್ಸವದ ದಿನ ದೆಹಲಿ ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರವನ್ನು ಎಎಪಿ ಖಂಡಿಸುತ್ತದೆ. ಅಲ್ಲದೆ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು" ಎಂದು ಕರೆ ನೀಡಿದ್ದರು.
ರೈತರ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ನೀಡಿದ್ದ ಪೊಲೀಸರು ಮಾರ್ಗಗಳನ್ನೂ ಸೂಚಿಸಿದ್ದರು. ಆದರೆ, ಕೆಲ ಹೋರಾಟಗಾರರು ಮಾರ್ಗ ಬದಲಿಸಿ ಕೆಂಪುಕೋಟೆಗೆ ಮುತ್ತಿಗೆ ಇಡಲು ಹೊರಟಾಗ ಈ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದರೆ, 20 ಜನರಿಗೆ ಗಾಯಗಳಾಗಿವೆ. ಪೊಲೀಸರು ಸಹ ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ. ಅಮಿತ್ ಶಾ ಸಹ ಗಾಯಗೊಂಡ ಪೊಲೀಸರನ್ನು ಭೇಟಿ ಮಾಡಿ ಸಾಂತ್ವನ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕೇಜ್ರಿವಾಲ್, "ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಹಿಂಸಾತ್ಮಕ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕಾನೂನು ಕ್ರಮ ಜರುಗಿಸಬೇಕು. ಆದರೆ ಅಹಿಂಸಾತ್ಮಕ ರೈತರ ಹೋರಾಟ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ತಮ್ಮ ಹಕ್ಕಿಗಾಗಿನ ರೈತರ ಹೋರಾಟ ಮುಂದುವರೆಯಲಿದೆ" ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ