ಸೋನಿಯಾ ಅಡ್ಡೆಗೆ ಕೈಹಾಕಿದ ಕೇಂದ್ರ ಸಚಿವ; ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಯತ್ತ ಜೇಟ್ಲಿ ಚಿತ್ತ

ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ಗಾಂಧಿ ಕುಟುಂಬದವರೇ ಬಹುತೇಕ ಪ್ರತಿನಿಧಿಸುತ್ತಾ ಬಂದಿದ್ದಾರೆ. ಸದ್ಯ ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಂಸದರಾಗಿ ಚುನಾಯಿತರಾಗಿದ್ಧಾರೆ.

Vijayasarthy SN
Updated:October 7, 2018, 6:05 PM IST
ಸೋನಿಯಾ ಅಡ್ಡೆಗೆ ಕೈಹಾಕಿದ ಕೇಂದ್ರ ಸಚಿವ; ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಯತ್ತ ಜೇಟ್ಲಿ ಚಿತ್ತ
ಅರುಣ್ ಜೇಟ್ಲಿ
  • Share this:
- ನ್ಯೂಸ್18 ಕನ್ನಡ

ಲಕ್ನೋ(ಅ. 07): ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಪಾಲಿನ ಸಂಸದರ ನಿಧಿಯನ್ನು ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಹೀರೋ ಬಾಜಪೇಯಿ ಅವರು ಈ ವಿಚಾರವನ್ನು ಹೊರಗೆಡವಿದ್ದಾರೆ. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾಗಿ ಜೇಟ್ಲಿ ಅವರ ಪ್ರತಿನಿಧಿಯೂ ಆಗಿರುವ ಬಾಜಪೇಯಿ ತಿಳಿಸಿದ್ದಾರೆ. ರಾಯ್ ಬರೇಲಿ ಕ್ಷೇತ್ರದ ಮೇಲೆ ಗಾಂಧಿ ಕುಟುಂಬಕ್ಕಿರುವ ಹಿಡಿತವನ್ನು ತಪ್ಪಿಸಲು ಬಿಜೆಪಿ ಮಾಡಿರುವ ಮಾಸ್ಟರ್ ಪ್ಲಾನ್ ಇದೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಸಂಸದರಿಗೂ ವಾರ್ಷಿಕ 5 ಕೋಟಿ ರೂ. ಹಣವನ್ನು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆ ಮಾಡಬಹುದಾಗಿದೆ. ಅರುಣ್ ಜೇಟ್ಲಿ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ರಾಜ್ಯಸಭಾ ಸದಸ್ಯರು ತಾವು ಆಯ್ಕೆಯಾದ ರಾಜ್ಯದಲ್ಲಿ ತಮ್ಮಿಚ್ಛೆಯ ಜಿಲ್ಲೆಗಳಿಗೆ 5 ಕೋಟಿ ರೂ.ವರೆಗಿನ ಕಾಮಗಾರಿಗಳನ್ನ ಉಪಯೋಗಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ.

ಜೇಟ್ಲಿ ಅವರು ಒಂದು ತಿಂಗಳ ಹಿಂದೆಯೇ ತಮ್ಮ ಕೋಟಾದಲ್ಲಿರುವ ಹಣವನ್ನು ರಾಯ್ ಬರೇಲಿಗೆ ಮುಡಿಪಾಗಿಡುವ ನಿರ್ಧಾರ ಕೈಗೊಂಡಿದ್ದರು. ನವೆಂಬರ್ ತಿಂಗಳ ಮೊದಲಾರ್ಧದಲ್ಲಿ ಹಣಕಾಸು ಸಚಿವರು ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಹೀರೋ ಬಾಜಪೇಯಿ ಹೇಳಿದ್ದಾರೆ.

ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ಗಾಂಧಿ ಕುಟುಂಬದವರೇ ಬಹುತೇಕ ಪ್ರತಿನಿಧಿಸುತ್ತಾ ಬಂದಿದ್ದಾರೆ. ಸದ್ಯ ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಂಸದರಾಗಿ ಚುನಾಯಿತರಾಗಿದ್ಧಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಅವರೂ ಈ ಹಿಂದೆ ಈ ಕ್ಷೇತ್ರಗಳನ್ನ ಪ್ರತಿನಿಧಿಸಿದ್ದರು.

ಪ್ರತಿಷ್ಠಿತ ರಾಜಕೀಯ ಕುಟುಂಬದ ಸದಸ್ಯರು ನಿರಂತರವಾಗಿ ಪ್ರತಿನಿಧಿಸುತ್ತಾ ಬಂದಿದ್ದರೂ ರಾಯ್ ಬರೇಲಿ ಕ್ಷೇತ್ರ ಈಗಲೂ ಕತ್ತಲಲ್ಲಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಹೀಗಾಗಿ, ಈ ಕ್ಷೇತ್ರಕ್ಕೆ ಹೊಸ ಬೆಳಕು ನೀಡಲು ಜೇಟ್ಲಿ ಆಗಮಿಸಿದ್ದಾರೆ. ಜೇಟ್ಲಿ ತಮ್ಮ ಸಂಸದರ ನಿಧಿಯಿಂದ 2.5 ಕೋಟಿ ಹಣವನ್ನು ರಾಯ್ ಬರೇಲಿಯ ಮುಖ್ಯ ಅಭಿವೃದ್ಧಿ ಅಧಿಕಾರಿಗೆ ನೀಡಿಯಾಗಿದೆ. ಜೇಟ್ಲಿ ಅವರು ಕ್ಷೇತ್ರದ ಜನರಿಗೆ ಆಶಾಕಿರಣದಂತೆ ಕಾಣಿಸಿದ್ದಾರೆ ಎಂದು ಉ.ಪ್ರ. ಬಿಜೆಪಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳು ಉತ್ತರ ಪ್ರದೇಶ ರಾಜ್ಯಕ್ಕೆ ಸೇರುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ 80 ಕ್ಷೇತ್ರಗಳ ಪೈಕಿ ಬಿಜೆಪಿ ಬರೋಬ್ಬರಿ 71 ಸ್ಥಾನಗಳನ್ನ ಗೆದ್ದಿತ್ತು. ಕಾಂಗ್ರೆಸ್​ಗೆ ಈ ಎರಡು ಕ್ಷೇತ್ರಗಳು ಮಾತ್ರ ದಕ್ಕಿದ್ದವು. ಬಿಜೆಪಿ ಈ ಬಾರಿ ಯುಪಿಯಿಂದ ಕನಿಷ್ಠ 73 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದೆ. ಹೀಗಾಗಿ, ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ.ಕಳೆದ ಬಾರಿಯ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಭದ್ರಕೋಟೆ ಎನಿಸಿದೆ. ಯಾವತ್ತೂ ನೇರವಾಗಿ ಚುನಾವಣೆ ಗೆಲ್ಲದ ಅರುಣ್ ಜೇಟ್ಲಿ ಅವರು ಕಾಂಗ್ರೆಸ್ ಭದ್ರಕೋಟೆಗೆ ಲಗ್ಗೆ ಹಾಕಿ ಸೋನಿಯಾ ಗಾಂಧಿಯನ್ನು ನೇರವಾಗಿ ಚುನಾವಣೆಯಲ್ಲಿ ಎದುರಿಸುವ ಸಂಭವ ಕಡಿಮೆ ಎನಿಸಿದರೂ, ಆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವೆನ್ನಲಾಗುತ್ತಿದೆ.
First published: October 7, 2018, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading