Arun Jaitley| ಮೋದಿ ನಂಬಿಕಸ್ಥ, ಪತ್ರಕರ್ತರ ಕಣ್ಮಣಿ, ಬಿಜೆಪಿ ಟ್ರಬಲ್ ಶೂಟರ್ – ನಾನಾ ಅವತಾರಗಳಲ್ಲಿ ಮಿಂಚಿದ್ದ ಅರುಣ್ ಜೇಟ್ಲಿ

ನರೇಂದ್ರ ಮೋದಿ ಅವರು ತಮ್ಮ ಜೀವನದಲ್ಲಿ ಎದುರಿಸಿದ ಪ್ರತಿಯೊಂದು ಚುನಾವಣೆಯಲ್ಲೂ ಅವರ ಗೆಲುವಿನ ಹಿಂದೆ ಅರುಣ್ ಜೇಟ್ಲಿಯವರ ಪಾತ್ರ ಬಹಳ ಪ್ರಮುಖವಾಗಿದೆ. ಇದು 2002ರಿಂದಲೂ ಹೌದು.

news18
Updated:August 24, 2019, 2:24 PM IST
Arun Jaitley| ಮೋದಿ ನಂಬಿಕಸ್ಥ, ಪತ್ರಕರ್ತರ ಕಣ್ಮಣಿ, ಬಿಜೆಪಿ ಟ್ರಬಲ್ ಶೂಟರ್ – ನಾನಾ ಅವತಾರಗಳಲ್ಲಿ ಮಿಂಚಿದ್ದ ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
  • News18
  • Last Updated: August 24, 2019, 2:24 PM IST
  • Share this:
ಅರುಣ್ ಜೇಟ್ಲಿ ಭಾರತ ಕಂಡ ಅತ್ಯಂತ ಗೌರವಾನ್ವಿತ ಹಾಗೂ ಅಪೂರ್ವ ರಾಜಕಾರಣಿಗಳಲ್ಲಿ ಒಬ್ಬರು. ಬಿಜೆಪಿಯ ಪ್ರಮುಖ ವಾಕ್​ಚತುರರಾಗಿದ್ದ ಅವರು ಜಾತಿ, ಪಂಥ, ಧರ್ಮ, ಭಾಷೆ, ಪ್ರದೇಶಗಳ ಎಲ್ಲೆ ಮೀರಿ ಸರ್ವರಿಗೂ ಸಮ್ಮತರಾಗಿದ್ದ ಅಪರೂಪದ ರಾಜಕಾರಣಿ. ಒಮ್ಮೆಯೂ ನೇರ ಚುನಾವಣೆಯಲ್ಲಿ ಗೆಲ್ಲದಿದ್ದರೂ ರಾಜ್ಯಸಭಾ ಸದಸ್ಯರಾಗಿ ಸಂಸತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಜೇಟ್ಲಿ ಮೇಲೆ ಮೋದಿಗ್ಯಾಕೆ ಇತ್ತು ಅಷ್ಟು ನಂಬಿಕೆ?
ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ದೆಹಲಿಯ ಲುಟ್ಯೆನ್ಸ್ ಸಂಸ್ಕೃತಿಯನ್ನು ಅಪಹಾಸ್ಯ ಮಾಡಿದ್ದರು. ಲುಟ್ಯೆನ್ಸ್ ಪ್ರದೇಶದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ನಿವಾಸಗಳಿವೆ. ಸಾಮಾನ್ಯ ಜನರ ಬದುಕಿಗೂ ಇವರ ಜೀವನಕ್ಕೂ ಸಂಬಂಧವೇ ಇಲ್ಲದಷ್ಟು ಇವರು ಪ್ರತ್ಯೇಕವಾಗಿರುತ್ತಾರೆ ಎಂಬ ಟೀಕೆಗಳಿವೆ. ಮೋದಿ ಕೂಡ ಇದೇ ಅರ್ಥದಲ್ಲಿ ಲುಟ್ಯೆನ್ಸ್ ಸಂಸ್ಕೃತಿಯನ್ನು ಟೀಕಿಸಿದ್ದರು. ಆದರೆ, ಖುದ್ದು ಅರುಣ್ ಜೇಟ್ಲಿ ಅವರೇ ಈ ಲುಟ್ಯೆನ್ಸ್ ಸಂಸ್ಕೃತಿಯ ಭಾಗವಾಗಿದ್ದು ಮಾತ್ರ ವಿಶೇಷ. ಇಷ್ಟಾದರೂ ಅರುಣ್ ಜೇಟ್ಲಿ ಮತ್ತು ನರೇಂದ್ರ ಮೋದಿ ಮಧ್ಯೆ ಕೊನೆಯವರೆಗೂ ಯಾವುದೇ ಬಿರುಕು ಮೂಡಲಿಲ್ಲ ಎಂಬುದು ವಿಶೇಷ. ಇದಕ್ಕೆ ಪ್ರಮುಖ ಕಾರಣ ಅವರಿಬ್ಬರ ನಡುವೆ ಇದ್ದ ಮೂವತ್ತು ವರ್ಷಗಳ ಸ್ನೇಹ ಮತ್ತು ಬಾಂಧವ್ಯ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡಿಸಿದ್ದ ಅರುಣ್​​ ಜೇಟ್ಲಿ; ಮೋದಿಗೆ ಬರೆದ ಕೊನೇ ಪತ್ರದಲ್ಲಿ ಏನಿತ್ತು?

ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವ ಮೂಲಕ ರಾಜಕಾರಣಕ್ಕೆ ಬಂದಾಗಿನಿಂದಲೂ ಅವರಿಗೆ ಬೆಂಬಲವಾಗಿ ನಿಂತವರು ಅರುಣ್ ಜೇಟ್ಲಿಯೇ. 2002ರಿಂದ 2012ರವರೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಅರುಣ್ ಜೇಟ್ಲಿಯೇ ಉಸ್ತುವಾರಿ ಹೊತ್ತಿದ್ದರು. ಇವರ ಸುಪರ್ದಿಯಲ್ಲೇ ಮೋದಿ ಮೊದಲ ಬಾರಿಗೆ ಸಿಎಂ ಆಗಿದ್ದು. ಮೋದಿ ಸತತವಾಗಿ ಚುನಾವಣೆಗಳನ್ನು ಗೆಲ್ಲುವುದರ ಹಿಂದೆ ಜೇಟ್ಲಿ ಪಾತ್ರ ಬಹಳ ಮಹತ್ವದ್ದಿದೆ. ಹೀಗಾಗಿ, ಮೋದಿ ಸಂಪುಟದಲ್ಲಿ ಅರುಣ್ ಜೇಟ್ಲಿ ನಂಬರ್ 2 ಆಗಿಯೇ ಇದ್ಧರು.

ಮೋದಿಗೆ ಸಂಕಷ್ಟ ತಂದಿದ್ದ ರಫೇಲ್ ಜೆಟ್ ಖರೀದಿ ಹಗರಣದ ವಿಚಾರದಲ್ಲಿ ವಿಪಕ್ಷಗಳಿಗೆ ತೀಕ್ಷ್ಣ ಉತ್ತರ ಕೊಡುತ್ತಿದ್ದುದು ಇವರೆಯೇ. ಮೋದಿ ಅವರು ದಿಢೀರನೇ ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ಯೋಜನೆ ಜಾರಿಗೆ ತಂದಾಗ ವಿಚಲಿತರಾಗದೇ ಎಲ್ಲವನ್ನೂ ನಿಭಾಯಿಸಿದ್ದು ಜೇಟ್ಲಿಯೇ. ಅಂತೆಯೇ ಅವರು ಮೋದಿ ಪಾಲಿಗೆ ಅಮಿತ್ ಶಾ ಬಳಿಕ ಅತ್ಯಂತ ವಿಶೇಷ ವ್ಯಕ್ತಿಯಾಗಿದ್ದವರು ಅರುಣ್ ಜೇಟ್ಲಿಯೇ.

ಇದನ್ನೂ ಓದಿ: RIP Arun Jaitley - ಮಾಜಿ ಕೇಂದ್ರ ಸಚಿವ 66 ವರ್ಷದ ಅರುಣ್ ಜೇಟ್ಲಿ ವಿಧಿವಶಪತ್ರಕರ್ತರ ಕಣ್ಮಣಿ:
ಮೇಲ್ವರ್ಗದ ಸುಶಿಕ್ಷಿತ ಕುಟುಂಬದಿಂದ ಬಂದ ಅರುಣ್ ಜೇಟ್ಲಿ ಅವರು ಕಾನೂನು ಪದವೀಧರರು. ಬಿಜೆಪಿಯ ಅತ್ಯಂತ ತೀಕ್ಷ್ಣ ಬುದ್ಧಿಜೀವಿಗಳಲ್ಲೊಬ್ಬರಾದ ಅವರು ದೇಶದ ಅತ್ಯುತ್ತಮ ಕಾನೂನು ತಜ್ಞರಲ್ಲಿ ಒಬ್ಬರೆನಿಸಿದ್ದರು. ಸಾಕಷ್ಟು ವಿಚಾರಗಳಲ್ಲಿ ವಿಸ್ತೃತ ಜ್ಞಾನ ಹೊಂದಿದ್ದ ಅವರು ಯಾವುದೇ ವಿಷಯದ ಬಗ್ಗೆಯೂ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಪಕ್ಷಾತೀತವಾಗಿ ಎಲ್ಲರೂ ಗೌರವ ಹೊಂದುವಂತಹ ವ್ಯಕ್ತಿತ್ವ ಅವರಲ್ಲಿತ್ತು.

ಅರುಣ್ ಜೇಟ್ಲಿ ಅವರಿಗೆ ಮಾಧ್ಯಮಗಳ ಬಗ್ಗೆಯೂ ವಿಶೇಷ ಆಸಕ್ತಿ ಇತ್ತು. ಅಂತೆಯೇ ಪತ್ರಕರ್ತರ ಪಾಲಿಗೂ ಕಣ್ಮಣಿಯಾಗಿದ್ದರು. ಜೊತೆಗೆ ಪತ್ರಕರ್ತರ ಹುಸಿಗೋಪಗಳಿಗೂ ಅವರು ಕಾರಣರಾಗಿರುತ್ತಿದ್ದರು. ಪತ್ರಕರ್ತರಿಗೆ ಸುಲಭವಾಗಿ ಸಿಗುತ್ತಿದ್ದ ಅವರು ತಮ್ಮ ಜಾಣ್ಮೆಯ ಉತ್ತರಗಳಿಂದ ಗಮನ ಸೆಳೆಯುತ್ತಿದ್ದರು. ರಾಜಕೀಯದ ವಿಚಾರದ ಬಗ್ಗೆ ಯಾವುದಾದರೂ ರಹಸ್ಯ ಮಾಹಿತಿ ಕೇಳಿದರೆ ಅವರು ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದರು. ಬಿಸಿಸಿಐ ಸಂಬಂಧ ಇನ್​ಸೈಡ್ ಸ್ಟೋರಿ ಕೇಳಿದರೆ ಅವರು ಬೇರೆಯೇ ವಿಚಾರ ಪ್ರಸ್ತಾಪಿಸುತ್ತಿದ್ದರು. ಆದರೂ ಕೂಡ ಪತ್ರಕರ್ತರು ಯಾವತ್ತೂ ಕೂಡ ಅರುಣ್ ಜೇಟ್ಲಿ ಬಗ್ಗೆ ಬೇಸರ ಪಟ್ಟವರಲ್ಲ. ಮೂರು ತಲೆಮಾರಿನ ಪತ್ರಕರ್ತರೊಂದಿಗೆ ಅರುಣ್ ಜೇಟ್ಲಿ ಕೊನೆಯವರೆಗೂ ಅವಿನಾಭಾವ ಸಂಬಂಧ ಹೊಂದಿದ್ದರು.

ಇದನ್ನೂ ಓದಿ: Arun Jaitley Death: ಬಿಜೆಪಿ ಟ್ರಬಲ್​ ಶೂಟರ್ ಅರುಣ್ ಜೇಟ್ಲಿ ನಡೆದು ಬಂದ ಹಾದಿ

ಬಿಜೆಪಿ ಟ್ರಬಲ್ ಶೂಟರ್:
ಇನ್ನು, ಅರುಣ್ ಜೇಟ್ಲಿ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತಿದ್ದರು. ವಿವಿಧ ಮಿತ್ರಪಕ್ಷಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದ ಅವರು ಸಹಜವಾಗಿಯೇ ಬಿಜೆಪಿ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದರು. ಅವರು ಮಾಸ್ ಲೀಡರ್ ಆಗದೇ ಇದ್ದರೂ ಅವರ ಬೌದ್ಧಿಕ ಸಾಮರ್ಥ್ಯದಿಂದಾಗಿ ಬಿಜೆಪಿಯ ಚುನಾವಣಾ ರಣತಂತ್ರಗಳನ್ನು ರೂಪಿಸಲು ಅವರನ್ನೇ ಹೆಚ್ಚಾಗಿ ಅವಲಂಬಿಸಲಾಗಿತ್ತು. ಬಿಹಾರ, ಕರ್ನಾಟಕ, ಪಂಜಾಬ್ ರಾಜ್ಯಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಅರುಣ್ ಜೇಟ್ಲಿ ರಣತಂತ್ರವೇ ಕಾರಣವಾಗಿತ್ತು.

ಇಂಥ ಅರುಣ್ ಜೇಟ್ಲಿ ಈಗ ಇನ್ನಿಲ್ಲವಾಗಿದ್ದಾರೆ. ಮೋದಿ ಮತ್ತು ಬಿಜೆಪಿಗಂತೂ ಇವರ ನಿಧನದಿಂದ ತುಂಬಲಾರದ ನಷ್ಟವಾಗಿರುವುದು ಅಕ್ಷರಶಃ ಸತ್ಯ. ಒಂದು ಕಾಲದಲ್ಲಿ ಬಿಜೆಪಿಯ ಆಧಾರಸ್ತಂಭಗಳೆನಿಸಿದ್ದ ವ್ಯಕ್ತಿಗಳೆಲ್ಲಾ ಒಬ್ಬೊಬ್ಬರಾಗಿ ನಿಧನರಾಗುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ, ಪ್ರಮೋದ್ ಮಹಾಜನ್, ಸುಷ್ಮಾ ಸ್ವರಾಜ್ ಮತ್ತೀಗ ಇವರು. ಇವರ ಸಮಕಾಲೀನರಾದ ವೆಂಕಯ್ಯ ನಾಯ್ಡು ಅವರು ಉಪಾಧ್ಯಕ್ಷರಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಈಗ ಬಿಜೆಪಿಯಲ್ಲಿ ಉಳಿದಿರುವುದು ಹೊಸ ತಲೆಮಾರಿನ ಮುಖಂಡರೇ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ