ಪ್ರಧಾನಿ ಮೋದಿ ಹತ್ಯೆ ಸಂಚಿಗೆ ಸಾಕ್ಷಿಯಿದೆ; ಮಹಾರಾಷ್ಟ್ರ ಪೊಲೀಸರ ಬಳಿ ಅಂಥದ್ದೇನಿದೆ?

Sharath Sharma Kalagaru | news18
Updated:August 31, 2018, 7:44 PM IST
ಪ್ರಧಾನಿ ಮೋದಿ ಹತ್ಯೆ ಸಂಚಿಗೆ ಸಾಕ್ಷಿಯಿದೆ; ಮಹಾರಾಷ್ಟ್ರ ಪೊಲೀಸರ ಬಳಿ ಅಂಥದ್ದೇನಿದೆ?
Sharath Sharma Kalagaru | news18
Updated: August 31, 2018, 7:44 PM IST
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿರುವುದಕ್ಕೆ ಸಾಕ್ಷಿಯಿದೆ ಎಂದು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪಿ.ಬಿ. ಸಿಂಗ್ ಹೇಳಿದ್ದಾರೆ. ಈ ಮೂಲಕ ಹೋರಾಟಗಾರರ ಬಂಧನವನ್ನು ಮಹರಾಷ್ಟ್ರ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಸಮರ್ಥನೆಗಾಗಿ ನೀಡುತ್ತಿರುವ ಪುರಾವೆಗಳೇನು? ಇಲ್ಲಿದೆ ಮಾಹಿತಿ.

ಎಡಪಂಥೀಯ ಚಿಂತಕ ಪ್ರಕಾಶ್ ಅವರಿಗೆ  ವಿಲ್ಸನ್ ರೋಣ ಬರೆದಿರುವ ಪತ್ರ ಮಹಾರಾಷ್ಟ್ರ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಅದರಲ್ಲಿ ವಾರ್ಷಿಕವಾಗಿ ಗ್ರೆನೇಡ್​ಗಳ ಸರಬರಾಜಿಗೆ 8 ಕೋಟಿ ರೂ.ಗಳ ಅವಶ್ಯಕತೆ ಇರುವುದು ತಮ್ಮ ಗಮನಕ್ಕೆ ಬಂದಿರಬಹುದು. ಕಾಮ್ರೇಡ್ ಕೃಷ್ಣ ಮತ್ತು ಇತರರು, ರಾಜೀವ್ ಗಾಂಧಿ ಪ್ರಕರಣದಂತೆ, ಮೋದಿ ರಾಜ್​ಗೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪಿ.ಬಿ. ಸಿಂಗ್ ಹೇಳಿದ್ದಾರೆ.

ಭೀಮಾ-ಕೋರೆಗಾಂವ್ ಗಲಭೆ ಸಂಬಂಧ ದೊಡ್ಡ ವಿವಾದವನ್ನು ಮಾವೋವಾದಿ ಸಂಘಟನೆಗಳು ಹುಟ್ಟಿಹಾಕಿರುವ ಸಂಗತಿ ತನಿಖೆಯಿಂದ ಬಹಿರಂಗವಾಗಿದೆ ಎಂದ ಅವರು, ಆರೋಪಿಗಳು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವರಿಗೆ ನೆರವು ನೀಡಿದ್ದರು. ಭಯೋತ್ಪಾದಕ ಸಂಘಟನೆಯು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿತ್ತು. ಮೇ 17ರಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನು ಉಲ್ಲಂಘಿಸಲಾಗಿತ್ತು ಎಂದು ಹೇಳಿದ್ದಾರೆ.

ಮಾವೋವಾದಿಗಳೊಂದಿಗೆ ಹೋರಾಟಗಾರರಿಗೆ ಸಂಬಂಧ ಇರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಗ್ರೆನೇಡ್ ಉಡಾವಣಾ ವಾಹಕದ ಕ್ಯಾಟಲಾಗ್, ಕೋಡ್ ಭಾಷೆಯಲ್ಲಿರುವ ಮಾವೋವಾದಿಗಳ ಪತ್ರಗಳು, ಶಸ್ತ್ರಾಸ್ತ್ರಗಳನ್ನು ಕೊಂಡಿರುವುದಕ್ಕೆ ಸಾಕ್ಷಿಗಳು, ಡೀಲರ್​ಗಳ ಜೊತೆಗೆ ಮಾತನಾಡಿರುವುದಕ್ಕೆ ಸಾಕ್ಷಿ ಮತ್ತು ರಕ್ಷಿತ ಪಾಸ್​ವರ್ಡ್​ಗಳನ್ನು ವಶಪಡಿಸಿಕೊಂಡಿರುವುದು ಸೇರಿದಂತೆ ಐದು ಮಹತ್ವದ ಸಾಕ್ಷಿಗಳು ಸಿಕ್ಕಿವೆ ಎಂದು ಬಿ.ಪಿ. ಸಿಂಗ್ ಹೇಳಿದ್ದಾರೆ. ಜಿಗ್ನೇಶ್ ಮೇವಾನಿ, ಉಮರ್​ ಖಾಲಿದ್ ಅವರ ಮೇಲೆ ಕೂಡ ಶಂಕೆ ವ್ಯಕ್ತಪಡಿಸಿದ ಮಹರಾಷ್ಟ್ರ ಪೊಲೀಸರು, ಗಲಭೆಯಲ್ಲಿ ಅವರ ಪಾತ್ರ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.

ಡಿಸೆಂಬರ್ 31, 2017ರಂದು ನಡೆದ ದ್ವೇಷ ಭಾಷಣವನ್ನು ಮಾಡಿದ ಸಂಬಂಧ ಜನವರಿ 8ರಂದು ದೂರು ದಾಖಲಾಗಿತ್ತು. ದ್ವೇಷ ಭಾಷಣವನ್ನು ಹರಡುವ ಸಂಬಂಧ ಕೆಲವು ದೂರುಗಳನ್ನು ದಾಖಲಿಸಲಾಗಿತ್ತು. ಈ ಕುರಿತು ತನಿಖೆಯನ್ನು ನಡೆಸಲಾಗಿತ್ತು. ಬಹುತೇಕ ಎಲ್ಲ ಆರೋಪಿಗಳೂ ಕಬೀರ್ ಕಲಾ ಮಂಚ್​​ಗೆ ಸೇರಿದ್ದರು ಎಂದರು. ವಿಲ್ಸನ್ ರೋಣಾ ಹೆಸರು ಬಹಿರಂಗವಾದ ನಂತರ ಸೂಕ್ತ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ಹೋರಾಟಗಾರರು ನೀಡಿದ್ದಾರೆ. ತನಿಖೆಯಿಂದ ಮಾವೋವಾದಿಗಳ ಪಿತೂರಿ ಬಹಿರಂಗವಾಗಿದೆ ಎಂದಿರುವ ಅವರು, ಸಾಕ್ಷಿಗಳನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ ಎನ್ನುವ ಮೂಲಕ ಹೋರಾಟಗಾರರ ಬಂಧನವನ್ನು ಸಿಂಗ್ ಸಮರ್ಥಿಸಿಕೊಂಡಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭೀಮಾ-ಕೋರೆಗಾಂವ್ ಗಲಭೆ ಸಂಬಂಧ ದೂರು ಸಲ್ಲಿಸಿರುವ ತುಷಾರ್ ದಂಗುಲೆ, ಕೆಲವು ನನ್ನ ಹಿನ್ನೆಲೆ ಕುರಿತು ಕೇಳುತ್ತಿದ್ದಾರೆ. ಆದರೆ, ಕೋರ್ಟ್ ಸಾಕ್ಷಿಗಳನ್ನು ಕೇಳುತ್ತದೆ. ಈ ಕುರಿತು ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಪಿ. ಚಿದಂಬರಂ ಅವರು ಕೂಡ ನಗರ ನಕ್ಸಲರ ಕುರಿತು ಮಾತನಾಡಿದ್ದರು ಎಂದು ಯುಪಿಎ ಅಧಿಕಾರಾವಧಿಯ ಬಗ್ಗೆಯೂ ಸಿಂಗ್​ ನೆನೆದರು.

ಮಹಾರಾಷ್ಟ್ರ ಪೊಲೀಸರಿಂದ ಬಂಧಿತರಾಗಿರುವ, ವರವರ ರಾವ್​, ಸುಧಾ ಭಾರದ್ವಾಜ್​, ಗೌತಮ್​ ನವಲಖಾ, ಅರುಣ್​ ಫೆರೇರಾ ಮತ್ತು ವರ್ನನ್​ ಗೊನ್ಸಾಲ್ವೆಸ್​ ಸೆಪ್ಟೆಂಬರ್​ 6ರ ವರೆಗೆ ಗೃಹ ಬಂಧನದಲ್ಲಿಡುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿತ್ತು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ